More

    ದ್ವಿತೀಯ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ

    ಧಾರವಾಡ: ಕರೊನಾ ಹಾವಳಿ ಮಧ್ಯೆಯೂ ಜೂ. 18ರಂದು ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಇಲಾಖೆ ಅಧಿಕಾರಿಗಳು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ.

    ಜಿಲ್ಲೆಯ ಒಟ್ಟು 38 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 21,294 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳು ಕೇಂದ್ರಕ್ಕೆ ಆಗಮಿಸಲು ಸಮಸ್ಯೆ ಉದ್ಭವಿಸದಂತೆ ಉಚಿತ ಬಸ್​ಗಳ ವ್ಯವಸ್ಥೆ ಸಹ ಮಾಡಲಾಗಿದೆ. ಯಾವ ಪ್ರದೇಶದಿಂದ ಎಷ್ಟು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂಬ ಮಾಹಿತಿಯನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ನೀಡಲಾಗಿದೆ. ನಗರ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಸುರಕ್ಷತೆ ದೃಷ್ಟಿಯಿಂದ ಸ್ವಂತ ವಾಹನಗಳಲ್ಲೇ ಪರೀಕ್ಷೆಗೆ ಹಾಜರಾಗಲಿದ್ದು, ಹಳ್ಳಿ ಮಕ್ಕಳಿಗೆ ಬಸ್ ವ್ಯವಸ್ಥೆ ಹೆಚ್ಚಿನ ಅನುಕೂಲವಾಗಿದೆ. ಜಿಲ್ಲೆಯ 3000 ವಿದ್ಯಾರ್ಥಿಗಳು ಸದ್ಯ ತಾವಿದ್ದ ಸ್ಥಳದಲ್ಲೇ (ಅನ್ಯ ಜಿಲ್ಲೆ) ಪರೀಕ್ಷೆಗೆ ಹಾಜರಾಗಲು ಬಯಸಿದ್ದಾರೆ. ಇನ್ನು ಹೊರ ಜಿಲ್ಲೆಗಳ 224 ವಿದ್ಯಾರ್ಥಿಗಳು, ಮಹಾರಾಷ್ಟ್ರದ 2, ಗೋವಾ 1, ತಮಿಳುನಾಡಿನ ಒಬ್ಬ ವಿದ್ಯಾರ್ಥಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಗೋವಾ ವಿದ್ಯಾರ್ಥಿ 1 ವಾರದ ಮುಂಚೆಯೇ ಜಿಲ್ಲೆಗೆ ಆಗಮಿಸಿ ಹೋಂ ಕ್ವಾರಂಟೈನ್​ನಲ್ಲಿದ್ದಾನೆ. ಮಹಾರಾಷ್ಟ್ರದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸಹ ನಡೆಸಲಾಗಿದೆ.

    ಇನ್ನುಳಿದಂತೆ ಪರೀಕ್ಷೆ ಕೇಂದ್ರಗಳ ಸ್ಯಾನಿಟೈಸ್​ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ಅನ್ನು ಕ್ಷಮತಾ ಸೇವಾ ಸಂಸ್ಥೆಯಿಂದ ನೀಡಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ 4ರಂತೆ ಥರ್ಮಲ್ ಸ್ಕ್ಯಾನರ್ ಸಹ ಇಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಇಲಾಖೆಯಿಂದ ಪ್ರತಿ ಕೇಂದ್ರಕ್ಕೆ ಇಬ್ಬರು ವೈದ್ಯರು ಹಾಗೂ ಇಬ್ಬರು ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಡಿಪಿಯು ಶಾರದಾ ಕಿರೇಸೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts