More

    ದೊಡ್ಡ ಹಳ್ಳದ ಸೇತುವೆ ಜಲಾವೃತ

    ನರಗುಂದ: ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಲಹಾಳ ಗ್ರಾಮದ ದೊಡ್ಡ ಹಳ್ಳದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಕೊಣ್ಣೂರ-ರಾಮದುರ್ಗ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ವಾಸನ, ಬೆಳ್ಳೇರಿ, ಕಲಹಾಳ ಸೇರಿದಂತೆ ಅಕ್ಕ ಪಕ್ಕದ ಕೆಲ ಗ್ರಾಮಸ್ಥರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸೇತುವೆ ಮೇಲೆಯೇ ಸಂಚರಿಸಿದರು. ಇನ್ನು ಕೆಲವು ಜನರು ಸೇತುವೆ ಮೇಲೆ ತಮ್ಮ ವಾಹನ, ಜಾನುವಾರಗಳ ಮೈ ತೊಳೆಯುತ್ತಿರುವ ದೃಶ್ಯ ಕಂಡು ಬಂತು.

    ಆಗಸ್ಟ್ ತಿಂಗಳಲ್ಲಿ ಉಂಟಾದ ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಪ್ರವಾಹದಿಂದಾಗಿ ತಾಲೂಕಿನಲ್ಲಿ 3500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಯಾಗಿದ್ದವು. ಇದೀಗ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಗೋವಿನಜೋಳ, ಶೇಂಗಾ, ಹತ್ತಿ, ಸೂರ್ಯಕಾಂತಿ ಸೇರಿದಂತೆ 10,200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಪಟ್ಟಣದ ಐತಿಹಾಸಿಕ ಶ್ರೀ ವೆಂಕಟೇಶ್ವರ ದೇವಸ್ಥಾನದ ಮೇಲ್ಛಾವಣಿ ಸೋರುತ್ತಿದ್ದು, ದೇವಸ್ಥಾನದೊಳಗೆ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ.

    ಮುಂದುವರಿದ ಶೋಧ ಕಾರ್ಯ: ಮಲಪ್ರಭಾ ನದಿಯಲ್ಲಿ ಭಾನುವಾರ ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಕೊಣ್ಣೂರ ಗ್ರಾಮದ ವೆಂಕನಗೌಡ ಸಾಲಿಗೌಡ್ರ ಅವರ ಶೋಧ ಕಾರ್ಯ ಮುಂದುವರಿದಿದೆ. ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಹೆಬ್ಬಳ್ಳಿ, ಕಿತ್ತಲಿ, ಕಳಸ, ಗೋವನಕೊಪ್ಪ ಗ್ರಾಮಗಳ ಸುತ್ತಮುತ್ತಲೂ ಅಗ್ನಿ ಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು. ಆದರೆ, ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ ಮಾತ್ರ ಇನ್ನೂ ದೊರೆತಿಲ್ಲ. ಇದರಿಂದ ಅವರ ಕುಟುಂಬ ಸದಸ್ಯರು ಆತಂಕಿತರಾಗಿದ್ದಾರೆ.

    ಬೆಳೆ ಹಾನಿ ವರದಿ ಶೀಘ್ರ ಸಲ್ಲಿಸಲು ಸೂಚನೆ

    ಗದಗ: ಜಿಲ್ಲೆಯ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಉಂಟಾಗಿರುವ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಶೀಘ್ರ ವರದಿ ಸಲ್ಲಿಸಬೇಕು. ಸರ್ಕಾರದಿಂದ ಸಿಗುವ ಪರಿಹಾರವನ್ನು ರೈತರಿಗೆ ಸಕಾಲಕ್ಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮುಂಗಾರು ಹಂಗಾಮಿನಲ್ಲಿ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೊಷಿಸಿದೆ. ಇದರಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತೋಟಗಾರಿಕೆ ಬೆಳೆಗಳಾದ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರ ಬೆಳೆ ಮಳೆಗೆ ಹಾಳಾಗಿದ್ದರೆ ಅರ್ಜಿ ಸಲ್ಲಿಸಬೇಕು ಎಂದರು.

    ತಹಸೀಲ್ದಾರರಿಂದ ಹಾನಿ ಪರಿಶೀಲನೆ

    ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಮಳೆಯಿಂದಾಗಿ ಕುಸಿದ ಮನೆಗಳನ್ನು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಪರಿಶೀಲಿಸಿದರು. ಈ ವೇಳೆ ತಮ್ಮ ಅಳಲು ತೋಡಿಕೊಂಡ ಗ್ರಾಮಸ್ಥರು, ಸತತ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಹಲವು ಮನೆ ಬಿದ್ದಿವೆ. ಮಳೆ ನೀರು ಮನೆಗಳಿಗೆ ನುಗ್ಗಿ ಕಾಳುಕಡಿ ಹಾಳಾಗಿದೆ. ಈ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರರು, ‘ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು ಹೊರ ವಲಯದಲ್ಲಿರುವ ಕಾಲುವೆಗಳನ್ನು ದೊಡ್ಡದಾಗಿಸಬೇಕು. ಮನೆಗಳ ಸುತ್ತಲು ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸಿ ಸ್ಚಚ್ಛತೆಗೆ ಆದ್ಯತೆ ನೀಡಬೇಕು. ಬಿದ್ದಿರುವ ಮನೆಗಳಿಗೆ ಮತ್ತು ಬೆಳೆಹಾನಿ ಬಗ್ಗೆ ಕೃಷಿಯ ಇಲಾಖೆಯ ಸಹಯೋಗದಲ್ಲಿ ಸಮೀಕ್ಷೆ ನಡೆಸಿ ಈಗಾಗಲೇ ಅಂದಾಜು ವರದಿ ಸಲ್ಲಿಸಲಾಗಿದೆ’ ಎಂದರು. ಈ ವೇಳೆ ರೈತರಾದ ಬಾಪೂಜಿಗೌಡ ಪಾಟೀಲ ಮತ್ತಿತರರು, ಗ್ರಾಮ ಸಂಪರ್ಕ ರಸ್ತೆಗಳು ಸಂಪೂರ್ಣ ಕೆಸರಿನಿಂದ ಜಮೀನುಗಳಿಗೆ ತೆರಳಲು ಬಾರದಂತಹ ಸ್ಥಿತಿ ನಿರ್ವಣವಾಗಿದೆ. ಇದರಿಂದ ರೈತರ ಬೆಳೆಗಳು ಜಮೀನಿನಲ್ಲಿಯೇ ಹಾಳಾಗುತ್ತಿವೆ. ಕೂಡಲೇ ಈ ರಸ್ತೆ ದುರಸ್ತಿಗೆ ಸರ್ಕಾರದ ಗಮನ ಸೆಳೆಯಬೇಕು ಎಂದರು.

    ಮಹೇಶ ಲಮಾಣಿ, ಲಕ್ಷ್ಮಣ ಲಮಾಣಿ, ಬಿ.ಎಂ. ಕಾತರಾಳ, ಪಿ.ಎಚ್. ಗೋಣೆಮ್ಮನವರ, ಜಗದೀಶ ಕುರುಬರ ,ಬಸನಗೌಡ ಪಿಡ್ಡನಗೌಡ್ರ, ಮಲ್ಲೇಶಪ್ಪ ಲಮಾಣಿ ಇತರರಿದ್ದರು.<

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts