More

    ದೇಶದ ಸಮಗ್ರ ಅಭಿವೃದ್ಧಿಗಾಗಿ ಜ್ಞಾನ ಮುಡಿಪಿರಲಿ

    ಬೆಳಗಾವಿ: ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಪಡೆಯುವ ಕ್ಷಣ ಮಹತ್ವದ್ದಾಗಿದೆ. ಪದವಿ ಜತೆಗೆ ಪಡೆದ ಜ್ಞಾನ ಹಾಗೂ ವೃತ್ತಿ ಕೌಶಲವನ್ನು ದೇಶದ ವಿಕಾಸಕ್ಕೆ ಮುಡಿಪಾಗಿರಲಿ. ಪದವಿ ಬಳಿಕ ವೃತ್ತಿಪರತೆ ಮೈಗೂಡಿಸಿಕೊಂಡು ಜಿಲ್ಲೆ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ ಗೆಹಲೋತ್ ಅವರು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.

    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘22ನೇ ಘಟಿಕೋತ್ಸವ’ದಲ್ಲಿ ಮಾತನಾಡಿದ ಅವರು, ಯಾವತ್ತಿಗೂ ದೇಶದ ಅಭಿವೃದ್ಧಿಗೆ ತಂತ್ರಜ್ಞಾನದ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರ ವಿವಿಧ ವಿಭಾಗಗಳ ಸಾಧಕರಾಗಿರುವ ತಾವೆಲ್ಲರೂ ಕೈಜೋಡಿಸುವ ಮೂಲಕ ಭವಿಷ್ಯದಲ್ಲಿ ಶ್ರೇಷ್ಠ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಮಹತ್ತರ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

    ರಾಷ್ಟ್ರೀಯ ಹೊಸ ಶಿಕ್ಷಣ ಪದ್ಧತಿಯಿಂದ ಈಗ ಶಿಕ್ಷಣ ಕ್ಷೇತ್ರ ಮತ್ತಷ್ಟು ಸುಧಾರಣೆಯಾಗುತ್ತಿದೆ. ಶಿಕ್ಷಣ ಕ್ಷೇತ್ರ ಮುಂದಿನ ದಿನಗಳಲ್ಲಿ ದೇಶದ ದೊಡ್ಡ ಕ್ಷೇತ್ರವಾಗಿ ಬೆಳೆಯಲಿದೆ. ದೇಶದ ಆರ್ಥಿಕ ಬೆಳವಣಿಗೆಯಿಂದ ಬರುವ ದಿನಗಳಲ್ಲಿ ಭಾರತ ವಿಶ್ವ ಗುರು ಸ್ಥಾನ ಪಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಚೇರ್ಮನ್ ಪ್ರೊ.ಟಿ.ಜಿ ಸೀತಾರಾಮ ಮಾತನಾಡಿ, ಡಿಜಿಟಲ್ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳಿಂದ ದೇಶ ಪ್ರಗತಿಯತ್ತ ಮುನ್ನುಗ್ಗುತ್ತಿದೆ. ಉದ್ಯೋಗಿಗಳಿಗಿಂತ ಆರ್ಥಿಕ ವಲಯದಲ್ಲಿನ ಸ್ವಯಂ ಉದ್ಯಮ ಆರಂಭಿಸಿ, ಇತರರಿಗೆ ಉದ್ಯೋಗ ನೀಡುವ ಮೂಲಕ ದೇಶದ ಶಕ್ತಿಯಾಗಿ ಬೆಳೆಯಬೇಕು ಎಂದು ಹೇಳಿದರು.

    ದೇಶದ ದೊಡ್ಡ ತಾಂತ್ರಿಕ ವಿಶ್ವ ವಿದ್ಯಲಯಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೂಡ ಒಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯ ನಂತರ ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆ ಹೆಚ್ಚಾಗಿದೆ. ಮೊಬೈಲ್, ಕಂಪ್ಯೂಟರ್ ತಂತ್ರಜ್ಞಾನ ಯುಗದಲ್ಲಿ ಎನ್‌ಇಪಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗಿದ್ದು, ಎಲ್ಲೇ ಇದ್ದರೂ, ತಂತ್ರಜ್ಞಾನ ಸಹಾಯದ ಮೂಲಕ ಸುಲಭವಾಗಿ ಶಿಕ್ಷಣ ಪಡೆಯಬಹುದಾಗಿದೆ ಎಂದು ತಿಳಿಸಿದರು.

    ಭಾರತದಲ್ಲಿ ಯುವಜನಾಂಗ ಹೆಚ್ಚಾಗಿದ್ದು, ನಿರುದ್ಯೋಗ ತೊಲಗಿಸಲು ಪದವೀಧರರು ಸ್ವಯಂ ಉದ್ಯೋಗ ಸ್ಥಾಪಿಸಲು ಹೆಚ್ಚಿನ ಆಧ್ಯತೆ ನೀಡಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಅನೇಕ ಯೋಜನೆ ನೀಡಿವೆ ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಬೇಕು. ಬುದ್ಧಿ ಶಕ್ತಿಯ ಮೂಲಕ ತಂತ್ರಜ್ಞಾನ ಬಳಸಿಕೊಂಡು ದೇಶ ಆಸ್ತಿಯಾಗಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏಳಿಗೆ ಹೊಂದಲು ಸ್ವಾಮಿ ವಿವೇಕಾನಂದರ ತತ್ವ, ಆದರ್ಶ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ, ಇದರಿಂದ ಗುರಿ ಸಾಧಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲಸಚಿವರಾದ ಬಿ.ಇ ರಂಗಸ್ವಾಮಿ, ಟಿ.ಎನ್.ಶ್ರೀನಿವಾಸ, ಕಾರ್ಯಕಾರಿ ಪರಿಷತ್ ಸದಸ್ಯರಾದ ಪ್ರೊ.ಎಂ.ಎಸ್.ಶಿವಕುಮಾರ, ಹಣಕಾಸು ಅಧಿಕಾರಿ ಎಂ.ಎ ಸ್ವಪ್ನ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿ ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts