More

    ದೇವಸ್ಥಾನ, ಮಾಲ್, ಹೋಟೆಲ್ ಓಪನ್

    ಹುಬ್ಬಳ್ಳಿ: ಲಾಕ್​ಡೌನ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸುವ ಮಾರ್ಗವಾಗಿ ಕೇಂದ್ರ ಸರ್ಕಾರ ಘೊಷಿಸಿದ ಅನ್​ಲಾಕ್-1ರ ಅನ್ವಯ ಸೋಮವಾರದಿಂದ ನಗರದಲ್ಲಿ ಶಾಪಿಂಗ್ ಮಾಲ್, ಹೋಟೆಲ್-ರೆಸ್ಟೋರೆಂಟ್​ಗಳು ಪುನರಾರಂಭಗೊಂಡವು. ಆದರೆ, ಬಹುತೇಕ ವಾಣಿಜ್ಯ ವಹಿವಾಟುಗಳು ಗ್ರಾಹಕರ ಕೊರತೆಯನ್ನು ಎದುರಿಸಬೇಕಾಯಿತು.

    ಎರಡೂವರೆ ತಿಂಗಳಿಂದ ಬಾಗಿಲು ಹಾಕಿದ್ದ ಗೋಕುಲ ರಸ್ತೆಯ ಅರ್ಬನ್ ಓಯಸಿಸ್ ಮಾಲ್, ಕೋಯಿನ್ ರಸ್ತೆಯ ಯು-ಮಾಲ್​ಗಳಲ್ಲಿ ಎಂದಿನಂತೆ ಜನದಟ್ಟಣೆ ಇರಲಿಲ್ಲ. ಅರ್ಬನ್ ಓಯಸಿಸ್ ಮಾಲ್​ನ ಅರ್ಧದಷ್ಟು ಮಳಿಗೆಗಳು ತೆರೆದಿರಲಿಲ್ಲ. ಯು-ಮಾಲ್​ನಲ್ಲಿ ಕೆಲವು ಅಂಗಡಿಗಳು ಬಿಟ್ಟರೆ ಬಹುತೇಕ ಎಲ್ಲವೂ ಓಪನ್ ಆಗಿದ್ದವು. ಆದರೆ, ಪ್ರತಿ ಅಂಗಡಿಯಲ್ಲಿ 3-4 ಜನ ಗ್ರಾಹಕರು ಮಾತ್ರ ಕಾಣಿಸುತ್ತಿದ್ದರು.

    ಅರ್ಬನ್ ಓಯಸಿಸ್ ಮಾಲ್​ನಲ್ಲಿ ರಿಲಯನ್ಸ್ ಸ್ಟೋರ್, ಹಾರಿಜಾನ್, ರೇಮಂಡ್, ಪೀಟರ್ ಇಂಗ್ಲೆಂಡ್, ವುಡ್​ಲ್ಯಾಂಡ್ಸ್, ಪ್ಯಾಂಟಲೂನ್, ಫ್ಲೈಯಿಂಗ್ ಮಷಿನ್ ಇನ್ನಿತರ ಮಳಿಗೆಗಳು ತೆರೆದಿದ್ದವು. ಯು-ಮಾಲ್​ನಲ್ಲಿ ಸೋಚ್, ರಿಶ್ತಾ, ಫಸ್ಟ್ ಕ್ರೖೆ, ಟ್ರೆಂಡ್ ಫುಟ್​ವೇರ್, ಪೀಪಲ್ ಇನ್ನಿತರ ಮಳಿಗೆಗಳು ಪುನರಾರಂಭಗೊಂಡಿದ್ದವು. ಇಲ್ಲಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಮಳಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇದ್ದರು.

    ಈ ಎರಡು ಶಾಪಿಂಗ್ ಮಾಲ್​ನ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಆಯಾ ಅಂಗಡಿಯವರು ಪ್ರತ್ಯೇಕವಾಗಿಯೂ ಇಟ್ಟಿದ್ದರು. ಇಲ್ಲಿ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಕೊಯಿನ್ ರಸ್ತೆ ನ್ಯಾಷನಲ್ ಮಾರ್ಕೆಟ್-ವಾಣಿಜ್ಯ ಸಂಕೀರ್ಣನಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರಲಿಲ್ಲ. ಆಯಾ ಮಳಿಗೆದಾರರು ಸಹ ಮಾಡಿರಲಿಲ್ಲ. ಇಲ್ಲಿ ಚಿಕ್ಕ ಚಿಕ್ಕ ಬಟ್ಟೆ ಅಂಗಡಿಗಳಿವೆ. ಅಂಗಡಿಕಾರರು ಮಾಸ್ಕ್ ಧರಿಸಿದ್ದು ಬಿಟ್ಟರೆ ಬೇರ್ಯಾವ ಸುರಕ್ಷಾ ಕ್ರಮ ತೆಗೆದುಕೊಂಡಿರುವುದು ಕಂಡುಬರಲಿಲ್ಲ. ಸ್ಟೇಷನ್ ರಸ್ತೆಯ ಬಾಲಕೃಷ್ಣ ಸ್ಕ್ವೇರ್ (ಹರ್ಷ ಕಾಂಪ್ಲೆಕ್ಸ್) ವಾಣಿಜ್ಯ ಮಳಿಗೆಯಲ್ಲೂ ಇದೇ ಸ್ಥಿತಿ ಇತ್ತು. ಕೆಲವು ಅಂಗಡಿಕಾರರು ಗ್ರಾಹಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದರು.

    ಐಸೋಲೇಶನ್ ರೂಮ್: ಅರ್ಬನ್ ಓಯಸಿಸ್ ಮಾಲ್​ನ ಹೊರ ಆವರಣದಲ್ಲಿಯೇ ಐಸೋಲೇಶನ್ ರೂಮ್ ತೆರೆಯಲಾಗಿದೆ. ಮಾಲ್​ಗೆ ಬರುವ ಗ್ರಾಹಕರ ದೇಹದ ಉಷ್ಣಾಂಶ 100 ಫ್ಯಾರನ್ ಹೀಟ್​ಗಿಂತ ಅಧಿಕವಾಗಿದ್ದರೆ ಪ್ರವೇಶ ನಿರಾಕರಿಸಲಾಗುತ್ತದೆ. ಅಂಥವರನ್ನು ಐಸೋಲೇಶನ್ ರೂಮ್ೆ ಕಳುಹಿಸಲಾಗುತ್ತದೆ. ‘ಮಾಲ್​ನಲ್ಲಿ ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದನ್ವಯ ಐಸೋಲೇಶನ್ ರೂಮ್ ತೆರೆಯಲಾಗಿದೆ. ದೇಹದ ಉಷ್ಣಾಂಶ 100 ಫ್ಯಾರನ್ ಹೀಟ್​ಗಿಂತ ಅಧಿಕವುಳ್ಳ ಗ್ರಾಹಕರು ಮಾಲ್​ಗೆ ಬಂದಲ್ಲಿ ಪಾಲಿಕೆಯ ಗಮನಕ್ಕೆ ತರಲಾಗುವುದು’ ಎಂದು ಅರ್ಬನ್ ಓಯಸಿಸ್ ಮಾಲ್​ನ ಪ್ರಾಜೆಕ್ಟ್ ಹೆಡ್ ಎಂ.ಆರ್. ಕುಲಕರ್ಣಿ ವಿಜಯವಾಣಿಗೆ ತಿಳಿಸಿದರು.

    ಗ್ರಾಹಕರ ಕೊರತೆ: ನಗರದಲ್ಲಿ ಹೋಟೆಲ್​ಗಳು ಪುನರಾರಂಭಗೊಂಡರೂ ಗ್ರಾಹಕರ ಕೊರತೆ ಎದುರಿಸಿದವು. ಹೋಟೆಲ್​ನಲ್ಲಿಯೇ ತಿನ್ನುವ ಬದಲು ಪಾರ್ಸಲ್ ಒಯ್ಯುವುದಕ್ಕೆ ಅನೇಕರು ಆದ್ಯತೆ ನೀಡಿದ್ದರು. ಪ್ರತಿ ಟೇಬಲ್​ನಲ್ಲಿ ಇಬ್ಬರೇ ಕುಳಿತುಕೊಳ್ಳಬೇಕೆಂಬ ನಿಯಮವಿದೆ. ಆದರೆ, ಇಡೀ ಹೋಟೆಲ್​ನಲ್ಲಿ ಕೆಲವೊಮ್ಮೆ ಇಬ್ಬರು-ಮೂವರು ಗ್ರಾಹಕರಷ್ಟೇ ಕಂಡು ಬಂದರು. ದೊಡ್ಡ ಮತ್ತು ಮಧ್ಯಮ ಶ್ರೇಣಿಯ ಹೋಟೆಲ್​ಗಳು ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್​ಗೆ ವ್ಯವಸ್ಥೆ ಮಾಡಿದ್ದವು. ಸಣ್ಣ ಹೋಟೆಲ್​ಗಳಲ್ಲಿ ಇವುಗಳು ಕಂಡು ಬರಲಿಲ್ಲ. ಹೋಟೆಲ್​ಗಳಲ್ಲಿ ಎಸಿ ವಿಭಾಗ ಮುಚ್ಚಲ್ಪಟ್ಟಿದ್ದವು. ಮೊದಲಿದ್ದಂತೆ ಗ್ರಾಹಕರು ಹಾಗೂ ಕಾರ್ವಿುಕರು ಹೋಟೆಲ್​ನಲ್ಲಿ ಕಾಣಿಸಲಿಲ್ಲ.

    ಸಿದ್ಧಾರೂಢ ಗದ್ದುಗೆ ದರ್ಶನ: ಬಹಳ ದಿನಗಳ ಬಳಿಕ ಭಕ್ತರು ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ದೂರದಿಂದಲೇ ಗದ್ದುಗೆ ದರ್ಶನ ಪಡೆದರು. ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥಾರೂಢ ಸಮಾಧಿ ಮಂದಿರದ ಗರ್ಭಗುಡಿಯೊಳಗೆ ಪ್ರವೇಶವಿರಲಿಲ್ಲ. ಕೈಲಾಸ ಮಂಟಪವನ್ನು ಸಹ ದೂರದಿಂದಲೇ ವೀಕ್ಷಿಸಿದರು. ಸೋಮವಾರ(ಶಿವನ ವಾರ)ದ ನಿಮಿತ್ತ ಭಕ್ತರ ಸಂಖ್ಯೆ ಸಾಮಾನ್ಯವಾಗಿ ಇತ್ತು. ಸರತಿ ಸಾಲಿನಲ್ಲಿ ನಿಂತು ಗದ್ದುಗೆಗೆ ಕೈ ಮುಗಿದರು. ತೀರ್ಥ, ಪ್ರಸಾದ ವಿತರಣೆ ಇರಲಿಲ್ಲ. ಕೆಲವರು ಹೂವು, ಕಾಯಿ ತಂದಿದ್ದರು. ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಿ ಭಕ್ತರಿಗೆ ಪ್ರವೇಶ ನೀಡಲಾಯಿತು. ಸಂಕಷ್ಟಿ ನಿಮಿತ್ತ ಗಣೇಶ ಮಂದಿರಗಳಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಇತ್ತು. ದಾಜಿಬಾನಪೇಟೆ ಗಣೇಶ ಮಂದಿರ, ಚಂದ್ರನಾಥನಗರ ಗಣೇಶ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

    ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಜತೆ ಮಳಿಗೆಗೆ ಬರುವ ಪ್ರತಿಯೊಬ್ಬ ಗ್ರಾಹಕರಿಗೆ ಹ್ಯಾಂಡ್ ಗ್ಲೌಸ್ ನೀಡುತ್ತಿದ್ದೇವೆ. ನಮ್ಮ ದಾಖಲೆಗಾಗಿ ಹಾಗೂ ಮುಂದೆ ಅಗತ್ಯ ಬೀಳಬಹುದೆಂದು ಪ್ರತಿ ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ, ವಾಸ ಸ್ಥಳದ ವಿವರ ಪಡೆಯಲಾಗುತ್ತಿದೆ. ಸೋಮವಾರ ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿತ್ತು.

    |ಶಶಾಂಕ ಏಕಬೋಟೆ, ಮುಖ್ಯಸ್ಥ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಹುಬ್ಬಳ್ಳಿ ಶಾಖೆ

    ಹೋಟೆಲ್ ಉದ್ಯಮ ಪುನರಾರಂಭಗೊಂಡಿರುವುದು ಆಶಾದಾಯಕ ಬೆಳವಣಿಗೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಇಡೀ ದಿನ ಶೇ. 25-30ರಷ್ಟು ವ್ಯಾಪಾರ ನಡೆದಿವೆ. ಲಾಜಿಂಗ್​ಗೆ ಇನ್ನೂ ಅನುಮತಿ ಸಿಕ್ಕಿಲ್ಲ.

    |ಎ.ಪಿ. ಐತಾಳ, ಮಾಲೀಕರು ಕರ್ನಾಟಕ ಭವನ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts