More

    ದೇವಸ್ಥಾನ ಆಸ್ತಿಯ ಒತ್ತುವರಿ ತೆರವು

    ಗುಂಡ್ಲುಪೇಟೆ: ಪಟ್ಟಣದ ಪುರಾತನ ಶ್ರೀ ರಾಮೇಶ್ವರ ದೇವಸ್ಥಾನದ ಆಸ್ತಿಯ ಒತ್ತುವರಿ ತೆರವು ಕಾರ್ಯ ಮಂಗಳವಾರ ನಡೆಸಲಾಯಿತು.

    ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯ ಸಂಪೂರ್ಣ ಶಿಥಿಲವಾಗಿದ್ದರಿಂದ ಅದನ್ನು ಜೀರ್ಣೋದ್ಧಾರಗೊಳಿಸುವ ಸಲುವಾಗಿ ಸಮಿತಿಯ ಅಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಿ ಸಭಿಕರ ಅಭಿಪ್ರಾಯ ಸಂಗ್ರಹಿಸಿತು. ಶತಮಾನಗಳಿಂದ ಒತ್ತುವರಿ ಮಾಡಿಕೊಂಡಿದ್ದ ಕುಟುಂಬಗಳೇ ಸ್ವಯಂ ತೆರವಿಗೆ ಮುಂದಾದರು.

    ದೇವಾಲಯದ ಸ್ಥಳದಲ್ಲಿ ನಾನಾ ಧಾರ್ಮಿಕ ಚಟುವಟಿಕೆಗಳನ್ನು ಮಾತ್ರ ನಡೆಸಬೇಕು. ಯಾವುದೇ ಕಾರಣಕ್ಕೂ ವಾಣಿಜ್ಯ ಮಳಿಗೆ ನಿರ್ಮಿಸಬಾರದು ಎಂದು ಸಭಿಕರು ಒಕ್ಕೊರಲಿನಿಂದ ಅಭಿಪ್ರಾಯಪಟ್ಟರು. ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದ ಕುಟುಂಬದ ಮುಕುಂದ್ ಮಾತನಾಡಿ, ತಮ್ಮ ಪೂರ್ವಜರು ಈ ಸ್ಥಳವು ದೇವಾಲಯಕ್ಕೆ ಸೇರಿದ್ದಾಗಿ ಹೇಳಿದ್ದರು. ಸಣ್ಣ ಪ್ರಮಾಣದ ಹಣವನ್ನು ಬಾಡಿಗೆ ರೂಪದಲ್ಲಿ ಸ್ವಲ್ಪ ದಿನಗಳ ಕಾಲ ನೀಡುತ್ತಿದ್ದರು. ಆದರೆ ದೇವಾಲಯ ಜೀರ್ಣೋದ್ಧಾರ ಮಾಡಲು ಮುಂದಾಗಿರುವುದರಿಂದ ಮನೆಯನ್ನು ಸಂತೋಷವಾಗಿ ತೆರವುಗೊಳಿಸುವುದಾಗಿ ಪ್ರಕಟಿಸಿದರು.

    ಸಾರ್ವಜನಿಕರು, ಪಟ್ಟಣದ ಎಲ್ಲ ಜನಾಂಗಗಳ ಮುಖಂಡರು ಹಾಗೂ ವರ್ತಕರ ಸಲಹೆ ಮೇರೆಗೆ ದೇವಾಲಯಕ್ಕೆ ಹೊಂದಿಕೊಂಡಿದ್ದ ವಾರಸುದಾರರಿಲ್ಲದ ಒಂದು ಮನೆಯನ್ನು ತೆರವುಗೊಳಿಸಲಾಯಿತು. ಇನ್ನು ಎರಡು ಮನೆಗಳನ್ನು ತೆರವುಗೊಳಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಯಿತು.

    ಕಳೆದ ಒಂದು ಶತಮಾನದಿಂದ ದೇವಾಲಯದ ರಥ ಶಿಥಿಲವಾಗಿ ರಥೋತ್ಸವ ನಿಂತುಹೋದ ನಂತರ ಖಾಲಿ ಇದ್ದ ಈ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದರು. ಕೆಲವರು ಬರುಬರುತ್ತ ದೇವಾಲಯವನ್ನು ಸೇರಿಸಿ ಮನೆಗಳನ್ನು ನಿರ್ಮಿಸಿಕೊಂಡು ಕೆಲವು ವರ್ಷಗಳವರೆಗೆ ಸ್ವಲ್ಪ ಹಣವನ್ನು ಬಾಡಿಗೆ ರೂಪದಲ್ಲಿ ಕೊಡುತ್ತಿದ್ದರು. ಇದರಿಂದ ದೇವಾಲಯದ ರಥೋತ್ಸವ ಹಾಗೂ ನಾನಾ ಕಾರ್ಯಗಳಿಗೆ ಸ್ಥಳದ ಕೊರತೆಯುಂಟಾಗಿತ್ತು. ದೇವಸ್ಥಾನದ ಸಮಿತಿಯವರು ಒತ್ತುವರಿ ತೆರವಿಗೆ ಮುಂದಾಗಿದ್ದರೂ ಸಾಧ್ಯವಾಗಿರಲಿಲ್ಲ. ಸಭೆಯಲ್ಲಿ ಸಮಿತಿಯ ಸದಸ್ಯರಾದ ಗಿರೀಶ್, ಪುಟ್ಟಸ್ವಾಮಿ, ನಾಗೇಶ್, ಶಂಕರನಾರಾಯಣ ಜೋಯಿಸ್ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts