More

    ದೇವರ ನಾಡಲ್ಲಿ ಮದ್ಯದ ಕಿಕ್

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಅದು ಹುಣ್ಣಿಮೆಗೊಂದು ಸಾರಿ ಸಾವಿರಾರು ಹಾಗೂ ಜಾತ್ರೆಗೊಮ್ಮೆ ಲಕ್ಷಾಂತರ ಭಕ್ತರು ಸೇರುವ ಪುಣ್ಯಕ್ಷೇತ್ರ. ವಿಪರ್ಯಾಸ ಎಂದರೆ ಅದೇ ಊರಲ್ಲಿ ಮಹಿಳೆಯರು, ಮಕ್ಕಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡಿಸಲಾಗುತ್ತಿದೆ. ಹೀಗಾಗಿ, ದೇವರ ದರ್ಶನಕ್ಕೆ ಬರುವ ಭಕ್ತರು ಮದ್ಯದ ಕಿಕ್ ಏರಿಸಿಕೊಂಡೇ ಗ್ರಾಮದಿಂದ ಹೊರ ಬರುತ್ತಿದ್ದಾರೆ.ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಚಿತ್ರಣವಿದು.

    ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಹೊಂದಿಕೊಂಡಿರುವ ಹೋಟೆಲ್, ಕಿರಾಣಿ, ಪಾನ್​ಶಾಪ್ ಸೇರಿ ಪ್ರತಿ ಅಂಗಡಿಯಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಮದ್ಯ ಮಾರಾಟ ಮಾಡುವವರು ಮಹಿಳೆಯರು, ಮಕ್ಕಳು ಎಂಬುದು ಗಮನಾರ್ಹ ಸಂಗತಿ.

    ಆದರೆ, ಮಹಿಳೆ, ಮಕ್ಕಳ ರಕ್ಷಣೆ ಮಾಡಬೇಕಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಣೆಬೆನ್ನೂರಿನಿಂದ ಪಾರ್ಸಲ್: ರಾಣೆಬೆನ್ನೂರ ನಗರದಲ್ಲಿರುವ ಕೆಲ ಮದ್ಯದಂಗಡಿ ಮಾಲೀಕರು ಕೆಲ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ದೇವರಗುಡ್ಡದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರುವ ಕಾರಣ ದಂಧೆಕೋರರು ಹೆಚ್ಚಾಗಿ ಇದೇ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆ ಸುಮಾರಿಗೆ ನಗರದಿಂದ ಆಟೋ, ಬೈಕ್​ಗಳಲ್ಲಿ ಮದ್ಯ ಸಾಗಿಸಲಾಗುತ್ತಿದೆ ಎನ್ನಲಾಗುತ್ತಿದೆ.

    ಮಹಿಳೆ, ಮಕ್ಕಳ ಬಳಕೆ ಏಕೆ?: ಮಕ್ಕಳು ಹೇಳಿದಂತೆ ಕೇಳಿಕೊಂಡು ಮದ್ಯ ಮಾರಾಟ ಮಾಡುತ್ತಾರೆ. ಅವರಂತೂ ಮದ್ಯ ಸೇವನೆ ಮಾಡದೇ ವ್ಯಾಪಾರ ಮಾಡಿದ ದುಡ್ಡನ್ನು ಸರಿಯಾಗಿ ತಂದು ಕೊಡುತ್ತಾರೆ ಎಂಬುದೊಂದು ಕಾರಣ. ಇನ್ನು ಮಹಿಳೆಯರನ್ನು ಮದ್ಯ ಮಾರಾಟಕ್ಕೆ ನಿಲ್ಲಿಸಿದರೆ ಅಕ್ರಮ ಎಂದು ಪ್ರಶ್ನಿಸುವವರ ವಿರುದ್ಧ ಅದೇ ಮಹಿಳೆಯರನ್ನು ಬಳಸಿಕೊಂಡು ಬೇರೆ ಬೇರೆ ರೀತಿಯ ದೂರುಗಳನ್ನು ದಾಖಲಿಸುವ ಬೆದರಿಕೆ ಹಾಕಲು ಅನುಕೂಲವಾಗುತ್ತದೆ ಎಂಬುದು ಅಕ್ರಮ ದಂಧೆಕೋರರ ಲೆಕ್ಕಾಚಾರವಾಗಿದೆ ಎಂಬ ಆರೋಪವಿದೆ.

    ದೇವರಗುಡ್ಡ ಮಾಲತೇಶ ದೇವರು ಈ ಭಾಗದಲ್ಲಿ ಹೆಸರುವಾಸಿ. ಇಂಥ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ದೇವಸ್ಥಾನಕ್ಕೆ ಬರುವ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಆದ್ದರಿಂದ ಅಬಕಾರಿ, ಪೊಲೀಸ್ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

    ಭರ್ಜರಿ ದಂಧೆಗೆ ಸಿದ್ಧತೆ?
    ಭಾರತ ಹುಣ್ಣಿಮೆಗೆ ದೇವರಗುಡ್ಡ ಮಾಲತೇಶ ದೇವರ ಜಾತ್ರೆ ಆರಂಭವಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಅಕ್ರಮ ಮದ್ಯ ಮಾರಾಟಗಾರರು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರಂತೆ. ಜಾತ್ರೆ ಸಮಯದಲ್ಲಿ ಮದ್ಯ ಸೇವಿಸಿದ ಎಷ್ಟೋ ಜನ ರಸ್ತೆ, ಬೀದಿಗಳಲ್ಲಿ ಬಿದ್ದು ಅನಾಹುತ ಮಾಡಿಕೊಂಡ ಘಟನೆಗಳು ಈ ಹಿಂದೆ ಬಹಳಷ್ಟು ನಡೆದಿವೆ. ಆದ್ದರಿಂದ ಈ ಬಾರಿಯ ಜಾತ್ರೆಯ ಸಮಯದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ.

    ದೇವರಗುಡ್ಡದಲ್ಲಿ ಮಹಿಳೆಯರು, ಮಕ್ಕಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡಿಸುವುದನ್ನು ಈ ಹಿಂದೆ ತಡೆದಿದ್ದೇವೆ. ಜಾತ್ರೆಯ ಸಲುವಾಗಿ ಮತ್ತೆ ಮದ್ಯ ಮಾರಾಟ ಮಾಡಲು ಮುಂದಾದರೆ ಅಂಥವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಜಾತ್ರೆ ಮುಗಿಯುವವರೆಗೂ ಅಲ್ಲಿಯೇ ಸಿಬ್ಬಂದಿ ನೇಮಕ ಮಾಡಿ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ಕೈಗೊಳ್ಳುತ್ತೇವೆ.
    | ಪರಶುರಾಮ ವಡ್ಡರ ಅಬಕಾರಿ ಉಪ ಅಧೀಕ್ಷಕ ರಾಣೆಬೆನ್ನೂರ

    ದೇವರ ದರ್ಶನ ಮಾಡಿಕೊಂಡು ಚಹಾ ಕುಡಿಯೋಣ ಅಂತಾ ಹೋಟೆಲ್​ಗೆ ಹೋದರೆ ಪಕ್ಕದಲ್ಲಿಯೇ ಮದ್ಯ ಸೇವನೆ ಮಾಡುತ್ತಿದ್ದರು. ಅದು ಕೂಡ ಮಕ್ಕಳು ಮತ್ತು ಮಹಿಳೆಯರು ಮದ್ಯ ಹಾಕಿ ಕೊಡ್ತಾ ಇದ್ದರೂ ಇದನ್ನು ಕಂಡು ಅಚ್ಚರಿ, ಗಾಬರಿ ಅನಿಸಿತು. ಹಾವೇರಿ ಜಿಲ್ಲೆಯಲ್ಲಿ ಇದನ್ನು ತಡಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲವೇ?

    | ಮಲ್ಲೇಶ ಆನೂರ ಹುಬ್ಬಳ್ಳಿಯ ಭಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts