More

    ದುರ್ಗಕ್ಕೆ ನಮೋ ಕೊಡುಗೆ ದೊಡ್ಡದು

    ಚಿತ್ರದುರ್ಗ: ನಗರದ ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಸಮೀಪದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೆ ಸೇತುವೆಗಳ ನಿರ್ಮಾಣಕ್ಕಾಗಿ ರೂಪಿಸಿರುವ ಯೋಜನೆಯನ್ನು ರೈಲ್ವೆ ಮಂಡಳಿ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
    ಪ್ರಧಾನಿ ನರೆಂದ್ರ ಮೋದಿ ಅವರು ಅಮೃತ ಭಾರತ ರೈಲು ನಿಲ್ದಾಣ ಕಾಯಕಲ್ಪ ಯೋಜನೆಯಡಿ, 41 ಸಾವಿರ ಕೋಟಿ ರೂ. ವೆಚ್ಚದ ದೇಶದ ವಿವಿಧ 554 ಪ್ರಮುಖ ರೈಲು ನಿಲ್ದಾಣಗಳ ಅಭಿವೃದ್ಧಿ, 1500 ಮೇಲು ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟಿಸುವ ವರ್ಚುವಲ್ ಸಮಾರಂಭದ ಅಂಗವಾಗಿ ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಶಾಸಕರು ಮಾತನಾಡಿದರು.
    ಜೂನ್ ವೇಳೆಗೆ ಎರಡೂ ಸೇತುವೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ. ಎಬಿಎಸ್‌ಎಸ್ ಅಡಿ 11.78 ಕೋಟಿ ರೂ. ವೆಚ್ಚದಲ್ಲಿ ನಗರದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗುತ್ತಿದ್ದು, ವರ್ಷಾಂತ್ಯಕ್ಕೆ ಇದರ ಕಾಮಗಾರಿ ಆರಂಭವಾಗಲಿದೆ ಎಂದರು.
    ಚಿತ್ರದುರ್ಗ ರೈಲು ನಿಲ್ದಾಣ ಪುನರಾಭಿವೃದ್ಧಿ ಯೋಜನೆಯು ಜಿಲ್ಲೆಗೆ ಪ್ರಧಾನಿ ನೀಡಿದ ಅತಿದೊಡ್ಡ ಕೊಡುಗೆಯಾಗಿದೆ. ನೈಋತ್ಯ ರೈಲ್ವೇ ವಿಭಾಗದಲ್ಲಿ 31 ನಿಲ್ದಾಣಗಳ ಅಭಿವೃದ್ಧಿಯಾಗುತ್ತಿವೆ. ಚಿತ್ರದುರ್ಗದಲ್ಲಿ ರೈಲ್ವೇ ಆಸ್ಪತ್ರೆ ನಿರ್ಮಾಣ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಪ್ರಧಾನಿ ಭೇಟಿ ಮಾಡಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿದರು. ಎಡಿಸಿ ಬಿ.ಟಿ.ಕುಮಾರಸ್ವಾಮಿ, ನೈಋತ್ಯ ರೈಲ್ವೇ ಮುಖ್ಯ ಇಂಜಿನಿಯರ್ ಟಿ.ವಿ.ಭೂಷಣ್, ಹಿರಿಯ ವಿಭಾಗೀಯ ಇಂಜಿನಿಯರ್ ಬಿ.ರೋಹನ್ ಡೊಂಗ್ರೇ, ಡಿಎಸ್‌ಒ ಡಾ.ಚಂದ್ರಶೇಖರ್ ಕಂಬಾಳಿಮಠ್, ನಗರಸಭಾ ಸದಸ್ಯರಾದ ವೆಂಕಟೇಶ್, ತಾರಕೇಶ್ವರಿ ಮತ್ತಿತರರು ಇದ್ದರು.
    ನವ ಭಾರತೀಯ ರೈಲ್ವೇ ಕುರಿತಂತೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
    ವರ್ಚುವಲ್ ಕಾರ‌್ಯಕ್ರಮದಲ್ಲಿ ಕೇಂದ್ರದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ವಿವಿಧ ರಾಜ್ಯಗಳ ರಾಜ್ಯಪಾಲರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕೇಂದ್ರ, ವಿವಿಧ ರಾಜ್ಯಗಳ ಮಂತ್ರಿಗಳು, ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

    ಆಧುನಿಕ ರೈಲ್ವೇ ನಿಲ್ದಾಣ
    ಚಿತ್ರದುರ್ಗ ರೈಲು ನಿಲ್ದಾಣವನ್ನು ಆಧುನಿಕರಣಗೊಳಿಸಲಾಗುತ್ತಿದೆ. ವಿಶಾಲ ಬುಕಿಂಗ್ ಕಚೇರಿ, ಪ್ಲಾಟ್‌ಫಾರಂ, ಸುಸಜ್ಜಿತ ಶೌಚಗೃಹಗಳು, ಶಿಶು ಆರೈಕೆ ಕೇಂದ್ರ, ವಿಐಪಿ ಲಾಂಚ್, ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳು, ಕೋರಿಯರ್ ಹಾಗೂ ಪಾರ್ಸೆಲ್ ಸೇವಾ ಕೇಂದ್ರಗಳು, ಕ್ಲಾಕ್ ರೂಂ, ಕೆಫೆ ಟೇರಿಯಾ, ಪ್ರತ್ಯೇಕ ಪಾರ್ಕಿಂಗ್, ಸಿಸಿಟಿವಿ, ಉಚಿತ ವೈಫೈ, ಎಟಿಎಂ ಕೇಂದ್ರಗಳ ನಿರ್ಮಾಣದ ಜತೆಗೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸ್ನೇಹಿಯಾಗಿ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts