More

    ದುರಸ್ತಿಯಾದ ಶುದ್ಧ ನೀರಿನ ಘಟಕ, ಜೀವಜಲಕ್ಕಾಗಿ ಅಲೆಯುವ ಸ್ಥಿತಿ, ಅಧಿಕಾರಿಗಳ ಗಮನ ಸೆಳೆದರೂ ನೀಗದ ಸಮಸ್ಯೆ

    ಜಿ.ಕೆ.ಸುಗ್ಗರಾಜು ನೆಲಮಂಗಲ
    ಜನರಿಗೆ ಶುದ್ಧ ಮತ್ತು ಆರೋಗ್ಯ ಪೂರ್ಣ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿವೆ.

    ನಗರಸಭೆ ವ್ಯಾಪ್ತಿಯ ರೇಣುಕಾನಗರ, ಲೋಹಿತ್‌ನಗರದ ಭೂಮಿಕಾ ಬಡಾವಣೆ, ಬಸವನಹಳ್ಳಿ ಗ್ರಾಪಂ ಮುಂಭಾಗದಲ್ಲಿ ನಿರ್ಮಿಸಿರುವ ಘಟಕಗಳು ನಾಲ್ಕೈದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ.
    ಶುದ್ಧ ನೀರಿನ ಘಟಕ ಕೆಟ್ಟು ಹಲವು ತಿಂಗಳಾಗಿವೆ. ಉಳ್ಳವರು ದ್ವಿಚಕ್ರ ವಾಹನದಲ್ಲಿ ನಗರಕ್ಕೆ ತೆರಳಿ ಖಾಸಗಿ ಘಟಕದಿಂದ ನೀರು ತರುತ್ತಾರೆ. ಅಶಕ್ತರು ಏನು ಮಾಡಬೇಕು. ಸಮಸ್ಯೆ ಬಗ್ಗೆ ಗ್ರಾಪಂ ಸದಸ್ಯರ ಜತೆಗೆ ನಗರಸಭೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆಯಾದರೂ ಪ್ರಯೋಜನವಾಗಿಲ್ಲ ಎಂದು ಬಸವನಹಳ್ಳಿ ನಿವಾಸಿ ಸಿದ್ದಮ್ಮ ಅಲವತ್ತುಕೊಂಡರು.

    ಜನರ ಅನುಕೂಲಕ್ಕಾಗಿ 2 ವರ್ಷದ ಹಿಂದೆ ಘಟಕ ಆರಂಭಿಸಿದ್ದಾರೆ. ನಾಲ್ಕೈದು ತಿಂಗಳಿಂದ 15 ದಿನಕೊಮ್ಮೆ ಘಟಕ ದುರಸ್ತಿಗೆ ಬರುತ್ತಿದೆ. ಅನಿವಾರ್ಯವಾಗಿ ದೂರದ ಲೋಹಿತ್ ನಗರದ ಕೃಷಿ ಇಲಾಖೆ ಕಟ್ಟಡದಲ್ಲಿರುವ ಘಟಕದಿಂದ ನೀರು ತೆಗೆದುಕೊಂಡು ಬರಬೇಕು. ಇದರಿಂದ ವೃದ್ಧರಿಗೆ ತೊಂದರೆಯಾಗುತ್ತದೆ. ಗ್ರಾಮದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿ ಮಾಡಿಸಿಲ್ಲ ಎಂದು ಭೂಮಿಕಾ ಬಡಾವಣೆ ನಿವಾಸಿ ರೇಣುಕಮ್ಮ ದೂರಿದರು.

    ಬೇಜವಾಬ್ದಾರಿ ಉತ್ತರ: ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸುವಂತೆ ಗ್ರಾಪಂ ಮಾಜಿ ಸದಸ್ಯರ ಗಮನಕ್ಕೆ ತಂದರೆ ನಮಗೆ ಅಧಿಕಾರವಿಲ್ಲ ನಗರಸಭೆಯಿಂದ ಮಾಡಬೇಕು ಎಂದು ಹೇಳುತ್ತಾರೆ. ಗ್ರಾಮದಲ್ಲಿ ಈ ಬಾರಿ ಗ್ರಾಪಂ ಚುನಾವಣೆ ನಡೆಯದೆ ಇರುವುದರಿಂದ ಮಾಜಿ ಸದಸ್ಯರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ (ಆರ್‌ಡಬ್ಲ್ಯುಎಸ್)ನಿಂದ ನಗರದಾದ್ಯಂತ ಸುಮಾರು 31 ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ. ಸಾಕಷ್ಟು ಘಟಕಗಳು ಕೆಟ್ಟಿವೆ ಎಂದು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ. ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ನಗರಸಭೆಗೆ ಹಸ್ತಾಂತರ ಮಾಡುವಂತೆ ಅರ್ಜಿ ಸಲ್ಲಿಸಲಾಗಿದ್ದು ಹಸ್ತಾಂತರಿಸಿದ ಬಳಿಕ ದುರಸ್ತಿ ಮಾಡಿಸಲಾಗುವುದು.
    ಮಂಜುನಾಥ್, ನಗರಸಭೆ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts