More

    ದುಪ್ಪಟ್ಟು ಬೆಲೆಗೆ ಮಾಸ್ಕ್, ಸ್ಯಾನಿಟೈಸರ್ ಮಾರಾಟ

    ಹುಬ್ಬಳ್ಳಿ: ಕರೊನಾ ಸೋಂಕು ಭೀತಿಯನ್ನೇ ಬಂಡವಾಳ ಮಾಡಿಕೊಂಡ ಕೆಲ ಫಾರ್ಮಸಿಸ್ಟ್​ಗಳು ದುಪ್ಪಟ್ಟು ದರಕ್ಕೆ ಮಾಸ್ಕ್, ಸ್ಯಾನಿಟೈಸರ್​ಗಳನ್ನು ಮಾರಾಟ ಮಾಡುವ ದಂಧೆಗೆ ಇಳಿದಿದ್ದಾರೆ.

    ನಗರದಲ್ಲಿ ಕೆಲ ದಿನಗಳಿಂದ ಮಾಸ್ಕ್, ಸ್ಯಾನಿಟೈಸರ್ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗುತ್ತಿದೆ. ಅಲ್ಲದೆ, ಕೆಲವರು ಎಂಆರ್​ಪಿ(ಗರಿಷ್ಠ ಮಾರಾಟ ಬೆಲೆ) ತಿದ್ದಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

    ಮೊದಲು ಸಗಟು ರೂಪದಲ್ಲಿ ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಖರೀದಿಸಿದರೆ 1ರೂ 75 ಪೈಸೆ ಬೀಳುತ್ತಿತ್ತು. ಈಗ ಎಂಆರ್​ಪಿ ದರವನ್ನೇ ಬದಲಾಯಿಸಿ 14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬಿಡಿಯಾಗಿ ಖರೀದಿಸಿದರೆ ಮಾರುಕಟ್ಟೆಯಲ್ಲಿ ಸದ್ಯ 70 ರೂ. ದರವಿದೆ. ಎನ್-95 ಮಾಸ್ಕ್ (ವಿತ್ ಫಿಲ್ಟರ್) ಮೊದಲು 150 ರೂ. ಇತ್ತು. ಈಗ 350 ರೂ.ಗೆ ಒಂದು ಮಾರಾಟವಾಗುತ್ತಿದೆ. ವಿತೌಟ್ ಫಿಲ್ಟರ್​ನ ದರ 150 ರೂ. ಇದ್ದದ್ದನ್ನು 250 ರೂ. ಮಾಡಲಾಗಿದೆ. ಸಗಟು ರೂಪದಲ್ಲಿ ಕೇಳದಂತೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಸರ್ ಬೆಲೆ 285 ರೂ. (500ಎಂಎಲ್) ದರವಿತ್ತು. ಈಗ 600 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಯಾಕಿಷ್ಟು ರೇಟ್? ಎಂದು ಕೇಳಿದರೂ ಅದಕ್ಕೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಬೇಕಿದ್ದರೆ ತೆಗೆದುಕೊಳ್ಳಿ ಇಲ್ಲವೆಂದರೆ ಬಿಡಿ ಎಂಬ ಮಾತುಗಳನ್ನು ಕೇಳುವ ಪರಿಸ್ಥಿತಿ ಎದುರಾಗಿದೆ.

    ಮೊದಲು ಅಧಿಕೃತ ಕಂಪನಿಗಳಿಂದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್​ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈಗೀಗ ನಕಲಿ ಕಂಪನಿಗಳು ಮಾರುಕಟ್ಟೆಯಲ್ಲಿ ತಲೆ ಎತ್ತಿವೆ. ಮಾಸ್ಕ್​ಗಳನ್ನು ತೊಳೆದು ಮರು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಸ್ಯಾನಿಟೈಸರ್​ನಲ್ಲಿ ಬರೀ ಬಣ್ಣ ಮಿಶ್ರಿತ ನೀರು ಸಂಗ್ರಹಿಸಿ ಕೊಡಲಾಗುತ್ತಿದೆ ಎಂಬ ಆರೋಪ ದಟ್ಟವಾಗಿದೆ. ಕೆಲವರು ಜಿಎಸ್​ಟಿ ತಪ್ಪಿಸಿ ಮಾರಾಟ ಮಾಡುವ ಹಪಾಹಪಿಯನ್ನೂ ಬೆಳೆಸಿಕೊಂಡಿದ್ದಾರೆ. ಕರೊನಾ ಭೀತಿಯಿಂದ ಜನರು ತತ್ತರಿಸಿದ್ದರೆ ಮಾಸ್ಕ್, ಸ್ಯಾನಿಟೈಸರ್ ಮಾರಾಟ ಮಾಡುವ ಕೆಲವರು ದುಡ್ಡು ಹೊಡೆಯುವ ಧಾವಂತಕ್ಕಿಳಿದಿದ್ದಾರೆ.

    ಔಷಧ ಅಂಗಡಿಗಳ ಮೇಲೆ ದಾಳಿ

    ಕರೊನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್​ಗಳನ್ನು ಪೂರೈಸದ ಹಿನ್ನೆಲೆಯಲ್ಲಿ ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಕರ್ನಾಟಕ ಮೆಡಿಕಲ್ ಶಾಪ್, ಕಾಮಧೇನು ಮೆಡಿಕಲ್ ಸ್ಟೋರ್ ಸೇರಿದಂತೆ ವಿವಿಧ ಔಷಧ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಎಂಆರ್​ಪಿ ದರದಲ್ಲಿ ಪೂರೈಸಬೇಕು ಎಂದು ಸೂಚಿಸಲಾಯಿತು. ಬೇಡಿಕೆ ಆಧರಿಸಿ ಸಾಮಗ್ರಿಗಳ ದಾಸ್ತಾನು ಸಂಗ್ರಹ ಇಟ್ಟುಕೊಳ್ಳಲು ನಿರ್ದೇಶನ ನೀಡಲಾಯಿತು. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ದಾಳಿಯ ನೇತೃತ್ವ ವಹಿಸಿದ್ದರು. ಸಹಾಯಕ ನಿರ್ದೇಶಕ ಮಂಜುನಾಥ ರೇವಣಕರ್, ಸಹಾಯಕ ಔಷಧ ನಿಯಂತ್ರಕ ಮಲ್ಲಿಕಾರ್ಜುನ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಎಸ್.ಬಿ. ಪೂಜಾರ ಇತರರು ತಂಡದಲ್ಲಿ ಇದ್ದರು.

    ದುಪ್ಪಟ್ಟು ಬೆಲೆಗೆ ಮಾಸ್ಕ್, ಸ್ಯಾನಿಟೈಸರ್ ಮಾರಾಟ ಮಾಡುವ ಔಷಧ ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದೇವೆ. ನಕಲಿ ಕಂಪನಿಗಳ ಮೇಲೆ ಕಣ್ಣಿಡಲಾಗುವುದು. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ದಾಳಿ ನಿರಂತರ ಇರಲಿದೆ.
    | ದೀಪಾ ಚೋಳನ್, ಧಾರವಾಡ ಜಿಲ್ಲಾಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts