More

    ದಾವಿವಿ ಹೆಚ್ಚುವರಿ ಶುಲ್ಕ ಹಿಂಪಡೆಯಲು ಆಗ್ರಹ -ಸಿಎಂ, ಉನ್ನತ ಶಿಕ್ಷಣ ಸಚಿವರಿಗೆ ಪತ್ರ 

    ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ ಅವೈಜ್ಞಾನಿಕವಾಗಿ ರೂಪಿಸಿರುವ ಹೆಚ್ಚುವರಿ ಶುಲ್ಕ ಹಿಂಪಡೆಯಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಒತ್ತಾಯಿಸಿದರು.
    ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಇಲ್ಲದೇ ಇರುವ ನಿಯಮಗಳನ್ನು, ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸದೆ ಜಾರಿಗೊಳಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಕೋರಿ ಬರುವ ವಿದ್ಯಾರ್ಥಿಗೆ ಪ್ರವೇಶಾತಿ ನಿರಾಕರಿಸಬಾರದು ಎಂಬುದಾಗಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ. ಆದರೆ ದಾವಣಗೆರೆ ವಿವಿ ಕುಲಪತಿ, ಕುಲಸಚಿವರು ತಮ್ಮ ಅಧೀನದ ಪ್ರತಿ ಕಾಲೇಜಿಗೂ ವಿದ್ಯಾರ್ಥಿಗಳ ಮಿತಿ ನಿಗದಿಪಡಿಸಿದ್ದಾರೆ. ನಿಗದಿತ ಸೀಟುಗಳ ಭರ್ತಿಯಾದ ನಂತರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕಕ್ಕಿಂತ ಮೂರುಪಟ್ಟು ಹೆಚ್ಚುವರಿ ಶುಲ್ಕ ಪಡೆಯುವಂತೆ ಆದೇಶಿಸಿರುವುದು ಬಡ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದರು.
    ಪದವಿ ಪೂರ್ವ ಶಿಕ್ಷಣ ಹಾಗೂ ಐಟಿಐ ತತ್ಸಮಾನ ತರಗತಿಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕಾರಣಾಂತರಗಳಿಂದ ತಮ್ಮ ವ್ಯಾಸಂಗ ಮೊಟಕುಗೊಳಿಸಿ ನಂತರ ವಿವಿಯಲ್ಲಿ ಪ್ರವೇಶ ಪಡೆಯಬೇಕೆಂದರೆ ಕಡ್ಡಾಯ ಅನುಮತಿ ಪಡೆಯಬೇಕು. ಅನುಮತಿ ಪತ್ರಕ್ಕೆ 1500 ರೂ. ಪಾವತಿಸಬೇಕು. 2020 ಇಸವಿಗೂ ಮುನ್ನ ತೇರ್ಗಡೆಯಾದವರು ಪ್ರತಿವರ್ಷಕ್ಕೆ 500 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು. ಅನ್ಯ ರಾಜ್ಯ ಅಥವಾ ಬೋರ್ಡ್‌ಗಳ ವ್ಯಾಪ್ತಿಯಲ್ಲಿ ಓದಿದ ವಿದ್ಯಾರ್ಥಿಗಳು 2667 ರೂ. ಶುಲ್ಕ ಪಾವತಿಸಿ ಅನುಮೋದನೆ ಪಡೆಯುವಂತೆ ಜೂನ್ 13 ರಂದು ಸುತ್ತೋಲೆ ಹೊರಡಿಸಲಾಗಿದೆ.
    ಇನ್ನು ಉನ್ನತ ಶಿಕ್ಷಣ ಬಲಪಡಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಯುಯುಸಿಎಂಎಸ್ ತಂತ್ರಾಂಶದ ಲೋಪದಿಂದ ಹಲವಾರು ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಅಲ್ಲದೆ ಹೆಚ್ಚಿನ ದಂಡ ಪಾವತಿಸುವಂತಾಗಿದೆ. 2023-24ನೇ ಸಾಲಿನ ಸೆಮಿಸ್ಟರ್ ತರಗತಿಗಳನ್ನು ಜು. 24 ರಿಂದ ಪ್ರಾರಂಭಿಸುವುದಾಗಿ ಆದೇಶಿಸಿ ಪ್ರವೇಶ ಪ್ರಕ್ರಿಯೆ ಜುಲೈ 31ರ ವರೆಗೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
    ಶುಲ್ಕ ಹೆಚ್ಚಳಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗುವುದು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗುವುದು. ವಿದ್ಯಾರ್ಥಿ ವಿರೋಧಿ ನೀತಿ ಸರಿಪಡಿಸಿಕೊಳ್ಳದಿದ್ದರೆ ವಿಶ್ವವಿದ್ಯಾಲಯಕ್ಕೆ ಪ್ರಗತಿಪರ ಸಂಘಟನೆಗಳೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
    ದಸಂಸ (ಭೀಮವಾದ) ಸಂಚಾಲಕ ಎಲ್.ಆರ್.ಚಂದ್ರಪ್ಪ, ಇಪ್ಟಾ ಸಂಚಾಲಕ ಪುರಂದರ್ ಲೋಕಿಕೆರೆ, ವೆಂಕಟೇಶ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts