More

    ದಾವಣಗೆರೆ ಜಿಲ್ಲೆ ಮತದಾನಕ್ಕೆ ಸಜ್ಜು- ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

    ದಾವಣಗೆರೆ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ನಡೆಯಲಿರುವ ಮತದಾನ ಸಂಬಂಧ ಮತಗಟ್ಟೆ ಸೇರಿ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 1685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 1347 ಸಾಮಾನ್ಯ ಮತ್ತು 338 ಕ್ರಿಟಿಕಲ್ ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗೂ ಕುಡಿವ ನೀರು, ನೆರಳಿನ ಅಗತ್ಯವಿದ್ದೆಡೆ ಶಾಮಿಯಾನ ವ್ಯವಸ್ಥೆ ಮಾಡಲಾಗುತ್ತಿದೆ. ವಿಕಲಾಂಗರಿಗಾಗಿ ರ‌್ಯಾಂಪ್, ವ್ಹೀಲ್‌ಚೇರ್ ಕೂಡ ಆಯೋಜನೆ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜಗಳೂರು ಕ್ಷೇತ್ರದಲ್ಲಿ 48, ಹರಿಹರದಲ್ಲಿ 58, ದಾವಣಗೆರೆ ಉತ್ತರದಲ್ಲಿ 37,ದಾವಣಗೆರೆ ದಕ್ಷಿಣದಲ್ಲಿ 61, ಮಾಯಕೊಂಡದಲ್ಲಿ 30, ಚನ್ನಗಿರಿ-40 ಹಾಗೂ ಹೊನ್ನಾಳಿಯಲ್ಲಿ 64 ಕ್ರಿಟಿಕಲ್ ಮತಗಟ್ಟೆಗಳಿವೆ ಎಂದರು.
    ಜಿಲ್ಲೆಯಲ್ಲಿ 8104 ಮತದಾನ ಅಧಿಕಾರಿ-ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ ತಲಾ 2026 ಪಿಆರ್‌ಒ ಹಾಗೂ ಎಪಿಆರ್‌ಒ, 4052 ಮತಗಟ್ಟೆ ಅಧಿಕಾರಿ ನೇಮಿಸಲಾಗಿದೆ. ದಾವಣಗೆರೆ- 1256, ಹರಿಹರ-1096, ದಾವಣಗೆರೆ ಉತ್ತರ- 1164, ದಾವಣಗೆರೆ ದಕ್ಷಿಣ-1028, ಮಾಯಕೊಂಡ-1152, ಚನ್ನಗಿರಿ- 1228, ಹೊನ್ನಾಳಿ ಕ್ಷೇತ್ರದಲ್ಲಿ 1180 ಮತಗಟ್ಟೆ ಸಿಬ್ಬಂದಿ ಕಾರ್ಯ ನಿರ್ವಹಿಸುವರು. ನಿಯೋಜಿತ 98 ಮೈಕ್ರೋ ಅಬ್ಸರ್ವರ್ ಎಲ್ಲ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸುವರು ಎಂದರು.
    ವಿಕಲಾಂಗ ಮತದಾರರಿಗೆ ಜಿಲ್ಲೆಯಲ್ಲಿ ಒಟ್ಟು 29 ಸ್ವಯಂಸೇವಕರು ಸಹಾಯಕರಾಗಿ ಕಾರ್ಯ ನಿರ್ವಹಿಸುವರು. ಮತಗಟ್ಟೆಯ ಮತದಾನದ ನೇರ ವೀಕ್ಷಣೆಗೆ 869 ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್‌ಗೆ ಗುರುತಿಸಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಸೋಮವಾರ ಕೊನೆಯ ಹಂತದ ತರಬೇತಿ ನಡೆಯಲಿದೆ ಎಂದು ತಿಳಿಸಿದರು.
    * ಮತಕ್ಷೇತ್ರ ತೆರವಿಗೆ ಸೂಚನೆ
    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭೆ ಚುನಾವಣೆ ಕುರಿತ ಬಹಿರಂಗ ಪ್ರಚಾರ ಮೇ 8ರ ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದ್ದು ಮತ ಕ್ಷೇತ್ರಕ್ಕೆ ಒಳಪಡದವರು ಕ್ಷೇತ್ರ ಬಿಟ್ಟು ತೆರಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
    ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಮತಗಟ್ಟೆ ಬಳಿ ಮತದಾರರ ಹೊರತಾಗಿ ಐವರಿಗಿಂತ ಹೆಚ್ಚಿನ ಜನರು ಗುಂಪುಗೂಡುವುದು, ಒಟ್ಟಿಗೆ ಓಡಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
    ಈ ಅವಧಿಯಲ್ಲಿ ಸಾರ್ವಜನಿಕ ಸಭೆ, ಕಾನೂನುಬಾಹಿರ ಚಟುವಟಿಕೆ ನಡೆಸುವಂತಿಲ್ಲ. ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡದವರು ಮೆರವಣಿಗೆ ಅಥವಾ ಪ್ರತಿಭಟನೆ ಮಾಡುವಂತಿಲ್ಲ. ಧ್ವನಿಧರ್ವಕಗಳನ್ನು ಬಳಸಲು ಅನುಮತಿಯಿಲ್ಲ. ಈ ಅವಧಿಯಲ್ಲಿ ಮಧ್ಯಪಾನ ನಿಷೇಧಿಸಲಾಗಿದೆ.
    ಮೇ 10ರಂದು ಜರುಗುವ ವಾರದ ಸಂತೆಗಳನ್ನು ನಿಷೇಧಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಾಗುವ ವಾಹನಗಳ ತಪಾಸಣೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಚೆಕ್‌ಪೋಸ್ಟ್‌ಗಳ ಚಲನವಲನಗಳನ್ನು ಸಿಸಿ ಟಿವಿ ಮೂಲಕ ಗಮನಿಸಲಾಗುತ್ತಿದೆ.
    ಅತಿಥಿಗೃಹ, ಧರ್ಮಶಾಲೆ, ವಸತಿಗೃಹಗಳಲ್ಲಿನ ಹೊರಪ್ರದೇಶದ ಜನರನ್ನು ಗುರುತಿಸಲು, ಮತದಾರರ ಮೇಲೆ ಪ್ರಭಾವ ಬಿರುವ ವ್ಯಕ್ತಿಗಳಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಅಭ್ಯರ್ಥಿಗಳಿಗೆ ನೀಡಲಾದ ವಾಹನಗಳ ದುರ್ಬಳಕೆ ಆಗದಂತೆ ಕಣ್ಗಾವಲು ಪಡೆಗಳಿಂದ ಮರುಪರಿಶೀಲನೆ ಮಾಡಲು ಸೂಚಿಸಿದೆ. ಧರ್ಮ-ಜಾತಿ ಆಧಾರಿತ ದ್ವೇಷ ಭಾಷಣ ಮಾಡುವುದನ್ನು ನಿಷೇಧಿಸಲಾಗಿದೆ.
    ಮತಗಟ್ಟೆ ಕೇಂದ್ರದ 100 ಮೀ. ಒಳಗೆ ಮತ ಪ್ರಚಾರ ಮಾಡುವಂತಿಲ್ಲ. ರಾಜಕೀಯ ಪಕ್ಷಗಳು ವಿತರಿಸುವ ವೋಟರ್ ಸ್ಲಿಪ್‌ಗಳ ಮೆಲೆ ಪಕ್ಷದ, ಅಭ್ಯರ್ಥಿಯ ಹೆಸರು, ಚಿಹ್ನೆ ಇರುವಂತಿಲ್ಲ. ಮತದಾರರು ಮತದಾರರ ಗುರುತಿನ ಚೀಟಿ ಹೊರತಾಗಿ ಆಧಾರ್ ಕಾರ್ಡ್, ನರೇಗಾ ಉದ್ಯೋಗಚೀಟಿ, ಪಾಸ್‌ಬುಕ್, ಪ್ಯಾನ್ ಕಾರ್ಡ್ ಸೇರಿ 12 ಬಗೆಯ ದಾಖಲೆಗಳನ್ನು ಬಳಸಿ ಮತದಾನ ಮಾಡಬಹುದು ಎಂದು ತಿಳಿಸಿದರು.
    * ಸೂಕ್ತ ಬಂದೋಬಸ್ತ್
    ಶಾಂತಿಯುತ ಮತದಾನ ನಡೆಯುವ ಸಂಬಂಧ ಎಲ್ಲ ಮತಗಟ್ಟೆಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 2215 ಗೃಹರಕ್ಷಕರು, ಡಿಎಆರ್ ಸಿಬ್ಬಂದಿ, ಸಿಎಪಿಎಫ್‌ನ 1520 (20 ತಂಡ), ಕೆಎಸ್‌ಆರ್‌ಪಿಯ 150 ಸಿಬ್ಬಂದಿ( 7 ತುಕಡಿ) ನಿಯೋಜಿಸಲಾಗಿದೆ ಎಂದು ಎಸ್ಪಿ ಡಾ.ಕೆ. ಅರುಣ್ ತಿಳಿಸಿದರು.
    1685 ಜನರ ಬಾಂಡ್‌ಓವರ್ ಪಡೆಯಲಾಗಿದೆ. 23 ಜನರನ್ನು ಗಡಿಪಾರು ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ 66 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕರು ಯಾವುದೇ ತರಹದ ಸಮಸ್ಯೆಗಳು ಎದುರಾದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದರು.
    * ಶೇ.85ರಷ್ಟು ಮತದಾನದ ಗುರಿ
    ಜಿಲ್ಲೆಯಲ್ಲಿ ಕಳೆದ ಬಾರಿ ಹರಪನಹಳ್ಳಿ ಕ್ಷೇತ್ರವನೂ ಒಳಗೊಂಡು ಶೇ.75.96ರಷ್ಟು ಮತದಾನವಾಗಿತ್ತು. ಇದರಲ್ಲಿ ದಾವಣಗೆರೆ ದಕ್ಷಿಣದಲ್ಲಿ ಶೇ.65 ಮತ್ತು ಶೇ.66ರಷ್ಟು ಕಡಿಮೆ ಮತದಾನವಾಗಿತ್ತು. ಈ ಬಾರಿ ಸರಾಸರಿ ಮತದಾನ ಪ್ರಮಾಣವನ್ನು 10ರಷ್ಟು ಹೆಚ್ಚಿಸುವ ಗುರಿ ಇದೆ. ಇದಕ್ಕಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಜಿಪಂ ಸಿಇಒ ಸುರೇಶ್ ಇಟ್ನಾಳ್ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts