More

    ದಾವಣಗೆರೆ: ಗೃಹಬಳಕೆ ವಿದ್ಯುತ್‌ನ 17.60 ಕೋಟಿ ರೂ. ಹಿಂಬಾಕಿ -ಭಾಗ್ಯಜ್ಯೋತಿ ಹಿಂದೆ ಕರಿನೆರಳು   -ಬೆಸ್ಕಾಂ ಸಿಬ್ಬಂದಿಗೆ ವಸೂಲಾತಿ ಚಿಂತೆ 

    ಡಿ.ಎಂ. ಮಹೇಶ್, ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಜ್ಯೋತಿ ಲಾಭ ಪಡೆಯುವತ್ತ ಎಲ್ಲರ ಕಣ್ಣು ನೆಟ್ಟಿದೆ. ಆದರೆ, ದಾವಣಗೆರೆ ಜಿಲ್ಲೆಯ ಗೃಹಬಳಕೆದಾರರಿಂದ 17.60 ಕೋಟಿ ರೂ.ಗಳ ವಿದ್ಯುತ್ ಹಿಂಬಾಕಿ ವಸೂಲಾತಿಯೇ ಬೆಸ್ಕಾಂಗೆ ಚಿಂತೆಯಾಗಿದೆ.
    ಜು.25ರೊಳಗೆ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್‌ನಲ್ಲಿ ಶೂನ್ಯ ಬಿಲ್ ಬರಲಿದೆ. ಜುಲೈನಲ್ಲಿ ಬಳಸಿದ ವಿದ್ಯುತ್‌ಗೆ ಶುಲ್ಕವಿರುವುದಿಲ್ಲ. ಆಗಸ್ಟ್ 25ರೊಳಗೆ ನೋಂದಣಿಯಾದವರಿಗೆ ಸೆಪ್ಟೆಂಬರ್ ಬಿಲ್ ಫ್ರೀ ಆಗಿರಲಿದೆ. ಅರ್ಜಿ ಸಲ್ಲಿಕೆಗೆ ಅಂತಿಮ ಗಡುವಿಲ್ಲ. ಹಿಂಬಾಕಿ ಇದ್ದವರೂ ನೋಂದಣಿ ಮಾಡಿಸಿ ಯೋಜನೆ ಲಾಭ ಪಡೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
    ಈ ನಿರ್ಧಾರದಿಂದಾಗಿ ಬಹುತೇಕ ಗ್ರಾಹಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಹೀಗಾಗಿ, ಹಿಂಬಾಕಿ ತಿಂಗಳಿಂದ ತಿಂಗಳಿಗೆ ದ್ವಿಗುಣವಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 4,74,198 ಮಂದಿ ಗೃಹಬಳಕೆದಾರರಿದ್ದಾರೆ. ಇವರಲ್ಲಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರು 4.63 ಲಕ್ಷ ಜನರಿದ್ದಾರೆ.
    ಮೇ ತಿಂಗಳ( ಏಪ್ರಿಲ್ ವಿದ್ಯುತ್ ಬಳಕೆಯಾದದ್ದು)ಲ್ಲಿ 22.95 ಕೋಟಿ ರೂ. ಬೇಡಿಕೆ ಪೈಕಿ 16.97 ಕೋಟಿ ರೂ. ವಸೂಲಾಗಿದ್ದರೆ, 5.97 ಕೋಟಿ ರೂ. ಬಾಕಿ ಇದೆ. ಜೂನ್‌ನಲ್ಲಿ ಬೇಡಿಕೆಯಿದ್ದ 29.56 ಕೋಟಿ ರೂ.ಗಳಲ್ಲಿ 17.93 ಕೋಟಿ ರೂ. ಸಂಗ್ರಹವಾಗಿದ್ದು 11.63 ಕೋಟಿ ರೂ. ಬರಬೇಕಿದೆ.
    ಮೇ ತಿಂಗಳಲ್ಲಿ 2194 ಲಕ್ಷ ಯೂನಿಟ್, ಜೂನ್‌ನಲ್ಲಿ 1794 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಸರಾಸರಿ ಬಳಕೆಗಿಂತ ಶೇ.10ರಷ್ಟು ಹೆಚ್ಚುವರಿ ಯೂನಿಟ್ ಬಳಸಲು ಅನುಮತಿಸಿರುವುದರಿಂದಲೂ ಮುಂಬರುವ ತಿಂಗಳಲ್ಲಿ ಬಳಕೆ ಹೆಚ್ಚುವ ಸಾಧ್ಯತೆಯೂ ಇಲ್ಲದಿಲ್ಲ.
    ಎಲ್ಲೆಡೆ ವಾಡಿಕೆ ಮಳೆಯಾಗಿಲ್ಲ. ಹೀಗಾಗಿ, ಖಾಸಗಿಯವರಿಂದ ವಿದ್ಯುತ್ ಖರೀದಿಸಿ, ವೆಚ್ಚದ ಸರಾಸರಿ ಮೊತ್ತವನ್ನು ಬೆಸ್ಕಾಂ, ಇಂಧನ ಹೊಂದಾಣಿಕೆ ಶುಲ್ಕವಾಗಿ ಬಿಲ್‌ನಲ್ಲಿ ಸೇರ್ಪಡೆ ಮಾಡುತ್ತಿದೆ. ನಿರೀಕ್ಷಿತ ಮಳೆಯಾಗದಿದ್ದಲ್ಲಿ ಮುಂದಿನ ದಿನದಲ್ಲಿ ಖಾಸಗಿ ವಿದ್ಯುತ್ ಖರೀದಿ ಮೊತ್ತ ತುಟ್ಟಿಯಾಗಬಹುದು ಎನ್ನಲಾಗುತ್ತಿದೆ.
    ಜಿಲ್ಲೆಯಲ್ಲಿನ 18203 ಸರ್ಕಾರಿ ಕಟ್ಟಡಗಳೂ ಮೇ ತಿಂಗಳಲ್ಲಿ 2.88 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಜಿಲ್ಲೆಯ 12562 ಕೈಗಾರಿಕಾ ಸ್ಥಾವರಗಳಿಂದಲೂ ಮೇ ನಲ್ಲಿ 1.63 ಕೋಟಿ ರೂ, ಜೂನ್‌ನಲ್ಲಿ 3.10 ಕೋಟಿ ರೂ. ಬಾಕಿ ಇದೆ.
    ಹೀಗಿರುವಾಗ, ಗೃಹಜ್ಯೋತಿ ಉಚಿತ ವಿದ್ಯುತ್ ಲಾಭ ಪಡೆಯುವಿಕೆ ಆರಂಭವಾದಲ್ಲಿ ಗ್ರಾಹಕರು ಬಾಕಿ ಮೊತ್ತ ಕಟ್ಟುವುದು ಸುಲಭವಲ್ಲ. ಅವರ ಮನ ಒಲಿಸುವುದಾದರೂ ಹೇಗೆ ಎಂಬುದು ಬೆಸ್ಕಾಂ ಸಿಬ್ಬಂದಿಗೆ ಸದ್ಯದ ಯೋಚನೆಯಾಗಿದೆ.
    ಬಾಕ್ಸ್..
    ಅರ್ಜಿ ಸಲ್ಲಿಕೆ ಬಿರುಸು
    ಸೇವಾಸಿಂಧು, ಗ್ರಾಮ ಒನ್ ಮಾತ್ರವಲ್ಲದೇ ಬೆಸ್ಕಾಂ ಕಚೇರಿಗಳ ಕೌಂಟರ್‌ಗಳಲ್ಲಿಯೂ ಅರ್ಜಿ ಸಲ್ಲಿಸಲು ಸಾರ್ವಜನಿಕರ ದಂಡೇ ಬರುತ್ತಿದೆ. ಆಧಾರ್‌ಕಾರ್ಡ್, ಕರೆಂಟ್ ಬಿಲ್, ಮೊಬೈಲ್ ನಂಬರ್ ಪಡೆದುಕೊಳ್ಳಲಾಗುತ್ತಿದೆ. ಅರ್ಜಿದಾತರಿಗೆ ಕರೆ ಮಾಡುವ ಸಿಬ್ಬಂದಿ ಒಟಿಪಿ ಪಡೆದು ನೋಂದಣಿ ಮಾಡುತ್ತಿದ್ದಾರೆ.
    ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಯೋಜನೆಯಡಿ ಹಾಲಿ 40 ಯೂನಿಟ್ ಒಳಗೆ ಉಚಿತ ವಿದ್ಯುತ್ ಬಳಸುವ 72196 ಮಂದಿ, 40 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಸುತ್ತಿರುವ 35369 ಮಂದಿ ಫಲಾನುಭವಿಗಳಿದ್ದಾರೆ. ಇವರೂ ಕೂಡ ಗೃಹಜ್ಯೋತಿ ಯೋಜನೆಗೆ ಸೇರಬಹುದು.
    ಬಾಕ್ಸ್
    ಇಂಧನ ಹೊಂದಾಣಿಕೆ ಶುಲ್ಕ ಗೊಂದಲ
    ಖಾಸಗಿ ವಿದ್ಯುತ್ ಉತ್ಪಾದಕರಿಂದ ಖರೀದಿಸಿದ ಮೊತ್ತವನ್ನು ಇಂಧನ ಹೊಂದಾಣಿಕೆ ಶುಲ್ಕದ ರೂಪವಾಗಿ ಬಿಲ್‌ನಲ್ಲಿ ಅಳವಡಿಸಲಾಗುತ್ತದೆ. ಅದರಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಜೂ. 30ರಂದು ಮಾಡಿದ ಆದೇಶದಲ್ಲಿ ಜೂನ್‌ನಲ್ಲಿ ಬಳಸಲಾದ ಪ್ರತಿ ಯೂನಿಟ್‌ಗೆ 90 ಪೈಸೆ ಹೆಚ್ಚುವರಿಯಾಗಿ ಇಂಧನ ಹೊಂದಾಣಿಕೆ ಶುಲ್ಕವಾಗಿ ಜುಲೈ ಬಿಲ್‌ನಲ್ಲಿ ನೀಡಲಾಗಿದೆ.
    ಏಪ್ರಿಲ್‌ನಲ್ಲಿ ಬಳಸಿದ ವಿದ್ಯುತ್‌ಗೆ ಮೇ ಬಿಲ್‌ನಲ್ಲಿ ತಲಾ ಯೂನಿಟ್‌ಗೆ 6 ಪೈಸೆ ನಮೂದಿಸಿರಲಿಲ್ಲ. ಇದನ್ನೂ ಸಹ ಸೇರಿಸಿ ಒಟ್ಟಿಗೆ ನೀಡಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ, ಬೆಸ್ಕಾಂ ಸಿಬ್ಬಂದಿ ಜತೆ ಸಾರ್ವಜನಿಕರು ನಿತ್ಯ ಸಂವಾದಕ್ಕಿಳಿವ ದೃಶ್ಯ ಸಾಮಾನ್ಯವಾಗಿದೆ. ‘ಈ ದರಕ್ಕೂ ಗೃಹಜ್ಯೋತಿ ಯೋಜನೆಗೂ ಸಂಬಂಧವಿಲ್ಲ. ಇದೊಂದು ತಿಂಗಳು ಸಹಕರಿಸಿ’ ಎಂದೂ ಸಿಬ್ಬಂದಿ ಹೇಳುತ್ತಿದ್ದಾರೆ. ಕೆಲ ಗ್ರಾಹಕರು ಗ್ರಾಹಕರ ಕೋರ್ಟ್‌ಗೆ ಹೋಗುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
    ‘ಹೆಚ್ಚು ಬಿಲ್ ಬರೆದಿದ್ದೀಯಾ, ಸ್ಪಷ್ಟನೆ ನೀಡದ ಹೊರತು ಬಿಡುವುದಿಲ್ಲ’ ಎಂದು ನಗರದ ಬಡಾವಣೆಯೊಂದರಲ್ಲಿ ಎಂದು ಜನರು ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿಯನ್ನು ಹಿಡಿದಿಟ್ಟಿದ್ದು, ಅಧಿಕಾರಿಯೊಬ್ಬರು ಮನವೊಲಿಸಿ ಬಿಡಿಸಿ ಕರೆತಂದ ಪ್ರಸಂಗ ನಡೆದಿದೆ.

    ಕೋಟ್
    ಕೆಇಆರ್‌ಸಿಯಿಂದ ಯಾವುದೇ ಶುಲ್ಕ ಸೇರ್ಪಡೆಗೆ ನಿರ್ಧಾರ ಮಾಡಿದರೂ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದರೆ ಯಾರಿಗೂ ಗೊಂದಲವಾಗುವುದಿಲ್ಲ. ಪ್ರತಿ ತಿಂಗಳಿಗೂ ಪ್ರತ್ಯೇಕ ದರ ವಿಧಿಸುವುದು ಸಲ್ಲದು.
    ವಿ.ಆರ್.ನಾಡಿಗೇರ್
    ಹಿರಿಯ ನಾಗರಿಕ.

    ಕೋಟ್
    ಇಂಧನ ಹೊಂದಾಣಿಕೆ ಶುಲ್ಕ ಕುರಿತು ಜನರಲ್ಲಿ ಗೊಂದಲ ಬೇಡ. ಸಾರ್ವಜನಿಕರು ಬಾಕಿ ಕಟ್ಟುವ ಮೂಲಕ ಸಹಕಾರ ನೀಡಬೇಕು. ಈ ಸಂಬಂಧ ಬೆಸ್ಕಾಂ, ಗ್ರಾಹಕರ ಮನವೊಲಿಸುವ ಕೆಲಸ ಮಾಡಲಿದೆ.
    ಎಸ್.ಕೆ. ಪಟೇಲ್,
    ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್, ದಾವಣಗೆರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts