More

    ದಾವಣಗೆರೆಯಿಂದ ಬಳ್ಳಾರಿ ವರೆಗೆ ಸಾರಿಗೆ ಬಸ್‌ನಲ್ಲಿ ನಾಯಿ ಮರಿಗೆ ಅರ್ಧ ಟಿಕೆಟ್ !

    ಕೊಟ್ಟೂರು: ಸರ್ಕಾರಿ ಬಸ್‌ನಲ್ಲಿ ಮಕ್ಕಳಿಗೆ ಪಾಲಕರು ಅರ್ಧ ಟಿಕೆಟ್ ತೆಗೆಸುವ ಸಂಬಂಧ ಕಂಡಕ್ಟರ್ ಜತೆ ವಾದಕ್ಕೆ ಇಳಿವ ಈಗಿನ ಸನ್ನಿವೇಶದಲ್ಲಿ ಇಲ್ಲೊಬ್ಬ ಪ್ರಯಾಣಿಕ ತನ್ನ ಜತೆಗೆ ತಂದಿದ್ದ ನಾಯಿಮರಿಗೆ ಅರ್ಧ ಟಿಕೆಟ್ ತೆಗೆಸಿ ಅಚ್ಚರಿ ಮೂಡಿಸಿದ್ದಾರೆ. ಸೀಟ್ ಮೇಲೆ ನಾಯಿಮರಿ ಇರಿಸಿದ್ದ ಬ್ಯಾಸ್ಕೇಟನ್ನು ಕೆಳಗಿಳಿಸುವ ಸಂಬಂಧ ನಡೆದ ಜಟಾಪಟಿಯಲ್ಲಿ ಈ ವಿಷಯ ಬಹಿರಂಗಗೊಂಡಿತು.

    ದಾವಣಗೆರೆಯಿಂದ ಬಳ್ಳಾರಿಗೆ ಸೋಮವಾರ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಚಾಲಕನ ಪಕ್ಕದ ಸೀಟ್ ಮೇಲೆ ಪುಟ್ಟದಾದ ಪ್ಲಾೃಸ್ಟಿಕ್ ಬ್ಯಾಸ್ಕೇಟ್ ಇಡಲಾಗಿತ್ತು. ಜನರಿಂದ ಬಸ್ ತುಂಬಿದ್ದ ಕಾರಣ ಈ ಬ್ಯಾಸ್ಕೇಟ್ ಕೆಳಗಿಟ್ಟು ಅಲ್ಲಿ ಕೂಡಲು ಮುಂದಾದ ಪ್ರಯಾಣಿಕನನ್ನು ಡ್ರೈವರ್ ಮತ್ತು ಕಂಡಕ್ಟರ್ ತಡೆಹಿಡಿದರು. ಏಕೆಂದು ಪ್ರಶ್ನಿಸಿದಾಗ ‘ಅದಕ್ಕೂ ಟಿಕೆಟ್ ನೀಡಲಾಗಿದೆ, ಕೆಳಗೆ ಇಡದಿರಿ’ ಎಂಬ ಉತ್ತರ ಬಂತು. ಈ ಮಾತು ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿತು. ಆಶ್ಚರ್ಯದಿಂದ ಬ್ಯಾಸ್ಕೇಟ್‌ನತ್ತ ಗಮನ ಹರಿಸಿದಾಗ ‘ಕುಂಯ್.. ಕುಂಯ್’ ಎಂಬ ಸದ್ದು ಕೇಳಿಸಿತು. ‘ಕಂಡಕ್ಟರ‌್ರೇ.. ಇದರಲ್ಲಿ ನಾಯಿಮರಿ ಇದೆಯಲ್ರಿ..’ ಎಂದು ಪ್ರಯಾಣಿಕ ರಾಗ ಎಳೆದರು. ಪ್ರತಿಕ್ರಿಯಿಸಿದ ನಿರ್ವಾಹಕ ‘ಹೌದು. ಅದು ನಾಯಿಮರಿಯೇ. ಅದರ ಮಾಲೀಕರು 92 ರೂ. ಕೊಟ್ಟು ದಾವಣಗೆರೆಯಿಂದ ಬಳ್ಳಾರಿವರೆಗೆ ಅರ್ಧ ಟಿಕೆಟ್ ಪಡೆದಿದ್ದಾರೆ’ ಎಂದರು.

    ಇದಕ್ಕೆ ಪ್ರಯಾಣಿಕರೆಲ್ಲ ಅಚ್ಚರಿ ವ್ಯಕ್ತಪಡಿಸಿದರು. ಮಾತು ಮುಂದುವರಿಸಿದ ನಿರ್ವಾಹಕ ‘ಅದು ಬೀಗಲ್‌ಬ್ರೀಡ್ ನಾಯಿ ಮರಿ. ಇದರ ಬೆಲೆ 46 ಸಾವಿರ ರೂ. ಇದೆ. ಒಂದು ವೇಳೆ ದೊಡ್ಡದಾಗಿದ್ದರೆ ಫುಲ್ ಚಾರ್ಜ್ ಹಣ ಪಡೆಯುತ್ತಿದ್ದೆ. ಮರಿಯಾಗಿದ್ದರಿಂದ ಅರ್ಧ ಚಾರ್ಜ್ ಹಣ ಪಡೆದಿರುವೆ. ಇದೇ ರೀತಿ ಕೋಳಿ, ಕುರಿಗೂ ಟಿಕೆಟ್ ಕೊಡುತ್ತೇವೆ’ ಎಂದು ವಿವರಣೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts