More

    ದಾಂಡೇಲಿಯಲ್ಲಿ ದಾಖಲಾದ ಹುಲಿಯ ಗುರುತು

    ಕಾರವಾರ: ಮಹಾರಾಷ್ಟ್ರದ ಹುಲಿಯೊಂದು ಸುಮಾರು 300 ಕಿಮೀ ದೂರದ ದಾಂಡೇಲಿಗೆ ಬಂದು ಸೇರಿಕೊಂಡಿದೆ.

    ಹುಲಿಗಳು ಈ ರೀತಿ ನೂರಾರು ಕಿಮೀ ಪ್ರಯಾಣ ಬೆಳೆಸುವುದು ಸಾಮಾನ್ಯ ಆದರೆ, ಈ ಬಾರಿ ಹುಲಿಯ ಗುರುತು ಅಧಿಕೃತವಾಗಿ ದಾಖಲಾಗಿದೆ. 2018ರಲ್ಲಿ ಮಹಾರಾಷ್ಟ್ರದ ಚಂದೋಳಿ ರಾಷ್ಟ್ರೀಯ ಉದ್ಯಾನದ ನಂದುರ್ಬಾರ್ ಸಹ್ಯಾದ್ರಿ ಹುಲಿ ಸಂರಕ್ಷಿತ ಅಭಯಾರಣ್ಯದ ವ್ಯಾಪ್ತಿಯ ಕ್ಯಾಮರಾದಲ್ಲಿ ಹುಲಿ ಟಿ-31 ದಾಖಲಾಗಿತ್ತು. 2020ರ ಮೇ ನಲ್ಲಿ ಅದೇ ಹುಲಿ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಗೆ ಬಂದಿದ್ದು, ಕ್ಯಾಮರಾದಲ್ಲಿ ಕಾಣಿಸಿಕೊಂಡಿದೆ. ಮಹಾರಾಷ್ಟ್ರ, ಗೋವಾದ ಅರಣ್ಯ ಪ್ರದೇಶ ಹಾಗೂ ಊರುಗಳನ್ನು ದಾಟಿ ಹುಲಿ ರಾಜ್ಯಕ್ಕೆ ಕಾಲಿರಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಕಾಳಿ ಅಭಯಾರಣ್ಯ ಸರ್ಕಾರಕ್ಕೆ ವರದಿ ನೀಡಿದೆ.

    ಸಂಖ್ಯೆ ಹೆಚ್ಚಳ: ಹುಲಿಗಳು ಹಾಗೂ ಇತರ ಪ್ರಾಣಿಗಳನ್ನು ಗುರುತಿಸುವ ಸಲುವಾಗಿ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಾಕಷ್ಟು ಕ್ಯಾಮರಾಗಳನ್ನು ಇಡಲಾಗಿದೆ. 2018 ರಲ್ಲಿ ನಡೆದ ಹುಲಿ ಗಣತಿಯಲ್ಲಿ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ 8 ಹುಲಿಗಳು ಕಾಣಿಸಿಕೊಂಡಿದ್ದವು ಎಂಬುದು ಸ್ಥಳೀಯ ಆಡಳಿತ ನೀಡುವ ಮಾಹಿತಿ. ಆದರೆ, ಕೇಂದ್ರ ಸರ್ಕಾರ ನೀಡಿದ ಹುಲಿ ಗಣತಿಯ ವರದಿಯಲ್ಲಿ 4 ಎಂದು ಮಾತ್ರ ಗುರುತಿಸಲಾಗಿದೆ. ಏಕೆ ಹೀಗಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. 2020 ರಲ್ಲಿ ಇದುವರೆಗೆ 25 ಬೇರೆ ಬೇರೆ ಹುಲಿಗಳು ಕ್ಯಾಮರಾದಲ್ಲಿ ಕಾಣಿಸಿಕೊಂಡಿದ್ದು, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

    ಹೆಜ್ಜೆ ಗುರುತು: 2006 ರಲ್ಲಿ ನಮ್ಮ ದೇಶದಲ್ಲಿ ಹುಲಿ ಗಣತಿ ಪ್ರಾರಂಭವಾಯಿತು. 2010, 2014 ಹಾಗೂ 2018 ರಲ್ಲಿ ಹುಲಿ ಗಣತಿ ನಡೆಸಲಾಗಿದೆ. 2014 ರಲ್ಲಿ ದಾಂಡೇಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ 5 ಹುಲಿಗಳಿದ್ದವು ಎಂಬ ದಾಖಲೆ ಇದೆ. ಹುಲಿಗಳ ಹೆಜ್ಜೆ, ಅವುಗಳ ಸಗಣಿಗಳ ಮೂಲಕ ಹುಲಿಗಳ ಆವಾಸ ಸ್ಥಾನ ಗುರುತಿಸಲಾಗುತ್ತದೆ. ನಂತರ ಧ್ವನಿ ದಾಖಲೀಕರಣ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕ್ಯಾಮರಾ ಟ್ಯ್ರಾಪಿಂಗ್ ಮೂಲಕ ಹುಲಿಗಳ ಗಣತಿಯನ್ನು ಖಚಿತವಾಗಿ ನಡೆಸಲಾಗುತ್ತಿದೆ. ಮನುಷ್ಯರ ಪಿಂಗರ್ ಪ್ರಿಂಟ್ ಇದ್ದಂತೆ ಹುಲಿಯ ಪಟ್ಟೆ. ಒಂದು ಹುಲಿಗೆ ಇದ್ದಂತೆ ಇನ್ನೊಂದು ಹುಲಿಯ ಪಟ್ಟೆ ಇರುವುದಿಲ್ಲ. ಅದನ್ನು ಆಧರಿಸಿ ಹುಲಿಯ ಫೋಟೋಗಳನ್ನು ಗುರುತಿಸಿ ಅವುಗಳನ್ನು ಎಣಿಕೆ ಮಾಡಲಾಗುತ್ತದೆ.

    ಹುಲಿಗಳು ಆಹಾರ, ಸಂತಾನೋತ್ಪತ್ತಿಗಾಗಿ ಆವಾಸ ಸ್ಥಾನಗಳನ್ನು ನಿಗದಿತ ಸಮಯದಲ್ಲಿ ಬದಲಿಸಬಹುದು. ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಅವುಗಳ ಸಂರಕ್ಷಣೆಗೆ ಸಾಕಷ್ಟ ಬಿಗು ಕ್ರಮ ವಹಿಸಲಾಗಿದೆ. | ಮಾರಿಯಾ ಕ್ರಿಸ್ತರಾಜು ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts