More

    ದಲಿತರ ಸ್ವಾಭಿಮಾನದ ಉತ್ಸವ ಆಗಲಿ – ಭೀಮಾ ಕೋರೆಗಾಂವ್ ವಿಜಯೋತ್ಸವ ವರ್ಷಾಚರಣೆ

    ದಾವಣಗೆರೆ: ಭೀಮಾ ಕೋರೆಗಾಂವ್ ವಿಜಯೋತ್ಸವ ದಲಿತರ ಸ್ವಾಭಿಮಾನದ ಉತ್ಸವ ಆಗಬೇಕು ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಹೇಳಿದರು.
    ಜಿಲ್ಲಾ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ನಗರದ ಜಯದೇವ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ-206ನೇ ವರ್ಷಾಚರಣೆಯಲ್ಲಿ ಮಾತನಾಡಿದರು.
    ಮಹಾರಾಷ್ಟ್ರದ ಕೋರೆಗಾಂವ್‌ನ ಭೀಮಾನದಿ ತೀರದಲ್ಲಿ 1818ರ ಜನವರಿ 1ರಂದು ನಡೆದ ಮರಾಠ ಪೇಶ್ವೆ 2ನೇ ಬಾಜೀರಾಯನ 28000 ಜನರಿದ್ದ ಸೈನ್ಯ ಕೇವಲ 500 ಜನರಿದ್ದ ಮಹರ್ ರೆಜಿಮೆಂಟ್‌ಗೆ ಸೋತು ಪಲಾಯನಗೊಂಡು ಪೇಶ್ವೆಗಳ ಆಡಳಿತ ಶಾಶ್ವತವಾಗಿ ಕೊನೆಯಾದದ್ದು ಬಹಳ ದೊಡ್ಡ ಇತಿಹಾಸ ಎಂದು ತಿಳಿಸಿದರು.
    ದೇಶದಲ್ಲಿ ಇಂತಹ ಇತಿಹಾಸ ಹೆಚ್ಚು ಬೆಳಕಿಗೆ ಬಾರದೆ ಕೇವಲ ಮೇಲ್ವರ್ಗದವರ ವಿಚಾರಗಳೇ ನೈಜ ಇತಿಹಾಸವಾಗಿ ಬಿಂಬಿತವಾಗಿವೆ. ದಲಿತರು ಪ್ರಜ್ಞಾವಂತರಾಗಿ ಸಮುದಾಯದ ಅಭಿವೃದ್ಧಿಗೆ ದುಡಿಯಬೇಕಾಗಿದೆ ಎಂದರು.
    ವಕೀಲ ಅನಿಸ್‌ಪಾಷಾ ಮಾತನಾಡಿ, ಸರ್ಕಾರ ಕಾಂತರಾಜು ಆಯೋಗ ಸಿದ್ಧಪಡಿಸಿರುವ ಜಾತಿ ಜನಗಣತಿ ವರದಿ ಬಹಿರಂಗಗೊಳಿಸಿದರೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಹೆಚ್ಚಿದ್ದಾರೆಂಬುದು ಬಹಿರಂಗವಾಗಿ ಜನಸಂಖ್ಯಾಧಾರಿತ ರಾಜಕೀಯ ಪ್ರಾತಿನಿಧ್ಯ ಪಡೆಯಲು ಹೋರಾಟ ಆರಂಭವಾಗುತ್ತದೆಂಬ ಕಾರಣಕ್ಕೆ ವರದಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ತಿಳಿಸಿದರು.
    ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವ ದಲಿತರ ಪ್ರಥಮ ಸ್ವಾತಂತ್ರ್ಯೋತ್ಸವ. ಇದರಲ್ಲಿ ಹುತಾತ್ಮರಾದ 22 ಜನ ಯೋಧರ ಶೌರ್ಯ, ಸಾಹಸ, ಮೇಲು-ಕೀಳು, ತಾರತಮ್ಯದ ವಿರುದ್ಧದ ಹೋರಾಟ. ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ಹೋರಾಟ ಎಂಬುದನ್ನು ದಲಿತರು ಮನಗಾಣಬೇಕು. ಅದರಿಂದ ಉತ್ತೇಜಿತರಾಗಿ ಚಳವಳಿ ರೂಪಿಸಬೇಕು ಎಂದರು.
    ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಚ್.ಮಲ್ಲೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಒಕ್ಕೂಟದ ಸಿ. ಬಸವರಾಜ್, ದ.ಸಂ.ಸ. ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್, ಕಾರ್ಮಿಕ ಮುಖಂಡರಾದ ಆನಂದರಾಜ್, ತುಪ್ಪದಹಳ್ಳಿ ಹನುಮಂತಪ್ಪ, ಬಿಎಸ್‌ಪಿಯ ಯಶೋದಾ, ಗಾಂಧಿನಗರದ ಚಿದಾನಂದಪ್ಪ ಮಾತನಾಡಿದರು.
    ದಲಿತ ಮುಖಂಡರಾದ ಕತ್ತಲಗೆರೆ ತಿಪ್ಪಣ್ಣ, ರಾಘವೇಂದ್ರ ಕಡೇಮನಿ, ಟಿ. ರವಿಕುಮಾರ್, ಚಂದ್ರಪ್ಪ ಬನ್ನಿಹಟ್ಟಿ, ರವಿ ಕೆ.ಟಿ.ಜೆ. ನಗರ, ವೆಂಕಟೇಶ್‌ಬಾಬು, ಎಚ್.ಸಿ. ಮಲ್ಲಪ್ಪ ಇತರರು ಇದ್ದರು. ಕಾರ್ಯಕ್ರಮದ ನಂತರ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts