More

    ದಲಿತರ ಭೂಮಿ ಕಬಳಿಕೆ ಆರೋಪ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

    ನೆಲಮಂಗಲ: ದಲಿತರಿಗೆ ನೀಡಿದ್ದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿರುವ ಅಧಿಕಾರಿಗಳು ಹಾಗೂ ನೋಂದಣಿ ಮಾಡಿಸಿಕೊಂಡಿರುವ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕೆಲ ದಲಿತಪರ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ನಗರದ ಅಂಬೇಡ್ಕರ್ ವೃತ್ತದ ಬಳಿ ಗುರುವಾರ ಸಮಾವೇಶಗೊಂಡ ರಾಜ್ಯ ಆದಿಜಾಂಬವ ಸಂಘ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕಾಲ್ನಡಿಗೆ ಮೂಲಕ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಇತ್ತೀಚೆಗೆ ನಗರದ ಕೆಂಪಲಿಂಗನಹಳ್ಳಿಯ ದಲಿತ ಸಮುದಾಯದವರಿಗೆ ಸೇರಿದ ಜಮೀನನ್ನು ಶಾಸಕರು ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಂಘಟನೆಗಳು ಆರೋಪಿಸಿದವು.
    ಆದಿಜಾಂಬವ ಸಂಘದ ಅಧ್ಯಕ್ಷ ಸಿದ್ಧರಾಜು ಮಾತನಾಡಿ, ಶಾಸಕರು ದಲಿತ ಸಮುದಾಯದವರ ಪರ ವಹಿಸಬೇಕಿತ್ತು. ಅವರೇ ಅಧಿಕಾರ ಬಳಸಿಕೊಂಡು ಆ ಭೂಮಿಯನ್ನು ಸ್ನೇಹಿತ ಉಮಾಶಂಕರ್ ಎಂಬುವವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದು, ಈಗ ಶಾಸಕರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿದರು.

    ಸಮದಾಯದ ಸಚಿವರು ಕೂಡಲೇ ಎಚ್ಚೆತ್ತುಕೊಂಡು ದಾಖಲೆ ಪತ್ರ ಪರಿಶೀಲಿಸಬೇಕು. ಶಾಸಕರು ಹಾಗೂ ಅವರ ಸ್ನೇಹಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಕುಟುಂಬಗಳ ರಕ್ಷಣೆಗೆ ಮೊರೆ: ಸರ್ಕಾರ 1981ರಲ್ಲಿ ಮಂಜೂರು ಮಾಡಿದ್ದ ಜಮೀನಿನಲ್ಲಿ 10ಕ್ಕೂ ಹೆಚ್ಚು ಕುಟುಂಬದವರು ಬೇಸಾಯ ಮಾಡುತ್ತಿದ್ದಾರೆ. ದಲಿತ ಕುಟುಂಬಕ್ಕೆ ನೀಡಿದ್ದ 3.39ಎಕರೆ ಜಮೀನನ್ನು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಕಾನೂನುಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಭೂಮಿ ವಿವಾದದಲ್ಲಿದ್ದು, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಹೀಗಿದ್ದೂ ಶಾಸಕರು ಆ ಜಮೀನನ್ನು ಕಬಳಿಸಿದ್ದಾರೆ. ಅಲ್ಲಿ ಬೇಸಾಯ ಮಾಡುತ್ತಿರುವವರಿಗೆ ಶಾಸಕರ ಕಡೆಯವರು ಜೀವಬೆದರಿಕೆ ಹಾಕುತ್ತಿದ್ದು, ತಾಲೂಕು ಆಡಳಿತ ರಕ್ಷಣೆ ಒದಗಿಸಬೇಕು ಎಂದು ಗ್ರಾಮಸ್ಥ ಮುನಿರಾಜು ಒತ್ತಾಯಿಸಿದರು.

    ವಿಧಾನಸೌಧ ಬಳಿ ಪ್ರತಿಭಟನೆ: ಶಾಸಕರ ವಿರುದ್ಧ ಎಸಿಬಿ, ಸಿಎಂ, ಗೃಹ ಸಚಿವ, ಕಂದಾಯ ಸಚಿವ, ಅನುಸೂಚಿತ ಜಾತಿ ಪಂಗಡ ಆಯೋಗ, ದಲಿತ ಕಲ್ಯಾಣ ಸಮಿತಿ ಸೇರಿ ಹಲವೆಡೆ ದಾಖಲೆ ಸಹಿತ ದೂರು ನೀಡಲಾಗಿದೆ. ಆದರೂ ಇದುವರೆಗೆ ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಹಾಗಾಗಿ, ವಿವಾದಿತ ಜಮೀನಿನಲ್ಲಿ ಬೇಸಾಯ ಮಾಡುತ್ತಿರುವವರ ಕುಟುಂಬಗಳ ಸಮೇತ ವಿಧಾನಸೌಧ ಬಳಿ ಪ್ರತಿಭಟನೆ ಮಾಡಲಾಗುವುದು ಎಂದು ಮುನಿರಾಜು ಎಚ್ಚರಿಕೆ ನೀಡಿದರು.
    ಮುಖಂಡರಾದ ಬಿ.ಎಂ.ಬೆಟ್ಟಸ್ವಾಮಿ, ಬೈಲ್ಲಪ್ಪ, ರಾಮಾಂಜಿನಯ್ಯ, ಕೃಷ್ಣ, ಮನೋಹರ್, ಗೀತಾ, ವಿನುತಾ, ಗಂಗಮ್ಮ, ಸಿದ್ದಮುನಿಯಪ್ಪ, ಗಂಗಹನುಮಯ್ಯ ಮತ್ತಿತರರು ಇದ್ದರು.

    ವಿವಿಧ ಸಂಘಟನೆಯವರು ಕೊಟ್ಟಿರುವ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ರಾಜ್ಯಪಾಲರಿಗೆ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರವಾನಿಸಲಾಗುವುದು. ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
    ಕೆ.ಮಂಜುನಾಥ್, ತಹಸೀಲ್ದಾರ್

    ಭೂಕಬಳಿಕೆ ಆರೋಪ ಸತ್ಯಕ್ಕೆ ದೂರವಾಗಿದೆ. ಭೂ ಮಾಲೀಕರು 40 ವರ್ಷಗಳ ಹಿಂದೆಯೇ ಜಮೀನು ಮಾರಾಟ ಮಾಡಿದ್ದು, ಮೂವರಿಗೆ ನೋಂದಣಿಯಾಗಿತ್ತು. ಈ ಮೂವರಿಂದ ನಾನು ಖರೀದಿಸಿದ್ದೇನೆ. ನ್ಯಾಯಾಲಯದಲ್ಲೂ ನನ್ನ ಪರವಾಗಿ ಆದೇಶವಾಗಿದೆ. ಈಗ ಕಾನೂನು ರೀತಿ ನನ್ನ ಹೆಸರಿಗೆ ವರ್ಗಾವಣೆಯಾಗಿದೆ.
    ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts