More

    ದರ ಕುಸಿತದಿಂದ ರೈತರು ಕಂಗಾಲು: ಗ್ರಾಹಕರ ಜೇಬಿಗೆ ಕತ್ತರಿ ಜಮೀನಿನಲ್ಲಿ ಕೊಳೆಯುತ್ತಿದೆ ಸಲು

    ರಾಮೇಗೌಡ ಎಂ. ನಂದಗುಡಿ
    ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬು ಸುಡುತ್ತಿದ್ದರೆ, ತರಕಾರಿ ಬೆಳೆದ ರೈತರಿಗೆ ಸರಿಯಾದ ದರ ಸಿಗುತ್ತಿಲ್ಲ.
    ಹೊಸಕೋಟೆ ತಾಲೂಕಿನ ನಂದಗುಡಿ ಮತ್ತು ಸೂಲಿಬೆಲೆ ಹೋಬಳಿ ಸುತ್ತಮುತ್ತಲ ಹೆಕ್ಟೇರ್‌ಗಟ್ಟಲೆ ಬೆಳೆದ ತರಕಾರಿಗೆ ಮಾರುಕಟ್ಟೆಗಳಲ್ಲಿ ಸರಿಯಾದ ದರ ಸಿಗುತ್ತಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ಇದೇ ರೈತರಿಂದ ಕಡಿಮೆ ದರಕ್ಕೆ ಖರೀದಿ ಮಾಡುವ ದಲ್ಲಾಳಿಗಳು ಹೆಚ್ಚಿನ ಲಾಭಾಂಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ತರಕಾರಿ ಬೆಳೆಗಾರರಿಗೆ ಒಳ್ಳೆಯ ಲಾಭ ಸಿಕ್ಕಿದೆ ಎಂಬಂತೆ ಕಂಡುಬಂದರೂ ವಾಸ್ತವವಾಗಿ ಹಾಕಿದ ಬಂಡವಾಳವೂ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
    ನೀರಿನ ತೊಂದರೆಯಲ್ಲೂ ಬೆಳೆ: ಜಲಮೂಲವಿಲ್ಲದ ತಾಲೂಕಿನಲ್ಲಿ ಕೊಳವೆಬಾವಿಗಳನ್ನು ಅವಲಂಬಿಸಿ ಕಷ್ಟಪಟ್ಟು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ ಎಂದು ರೈತರು ಕೊರಗುತ್ತಿದ್ದಾರೆ. ಕಳೆದ ಬಾರಿ ಅತೀವೃಷ್ಟಿಯಿಂದಾಗಿ ಬೆಳೆ ತೋಟಗಳಲ್ಲೇ ಕೊಳೆಯುವಂಥ ಪರಿಸ್ಥಿತಿ ಎದುರಾಗಿತ್ತು, ಪ್ರಸ್ತುತ ಸನ್ನಿವೇಶದಲ್ಲಿ ಸಮರ್ಪಕ ಬೆಲೆ ಸಿಗದೆ ಬೆಳೆ ಕಟಾವು ಮಾಡುವ ಕೂಲಿಯೂ ಸಿಗದಂತಾಗಿದೆ ಎಂಬ ಸನ್ನಿವೇಶ ನಿರ್ಮಾಣವಾಗಿದೆ ಎಂಬುದು ರೈತರ ಅಳಲಾಗಿದೆ.
    ಇಂಧನ ದರ, ರಸಗೊಬ್ಬರ, ಕ್ರಿಮಿನಾಶಕ ದರಗಳು ಆಕಾಶದೆತ್ತರದಲ್ಲಿವೆ. ಆದರೆ, ರೈತರು ಬೆಳೆದ ಹಸಿ ತರಕಾರಿಗಳ ದರ ಪಾತಾಳಕ್ಕೆ ಇಳಿದಿದೆ. ಬೀನ್ಸ್, ಟೊಮ್ಯಾಟೊ, ಕ್ಯಾರಟ್, ಆಲೂಗೆಡ್ಡೆ, ಮೆಣಸಿನ ಕಾಯಿ ಸೇರಿ ಇನ್ನಿತರ ತರಕಾರಿ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಟೊಮ್ಯಾಟೊ 10 ಕೆಜಿ ಬುಟ್ಟಿಗೆ 60ರಿಂದ 100 ರೂ.ಗೆ ಮಾರಾಟವಾಗುತ್ತಿತ್ತು, ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕೇವಲ ಹತ್ತಿಪ್ಪತ್ತು ರೂಪಾಯಿಗೆ ಕೇಳುತ್ತಿದ್ದಾರೆ. ಹಾಕಿದ ಬಂಡವಾಳಕ್ಕೂ ಕುತ್ತು ಬಂದಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ರೈತರು ಜಮೀನಿನಲ್ಲಿ ಕಟಾವು ಮಾಡುವುದನ್ನೇ ಬಿಟ್ಟಿದ್ದಾರೆ. ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದಿರುವ ತರಕಾರಿ ಅಲ್ಲಿಯೇ ಒಣಗುತ್ತಿವೆ. ಕಟಾವು ಮಾಡಲು ಕೂಲಿ ಎಲ್ಲಿಂದ ತರಬೇಕು ಎಂಬುದು ರೈತರ ಅಸಹಾಯಕ ಸ್ಥಿತಿಯಾಗಿದೆ.

    ತಲೆಮಾರುಗಳಿಂದ ತೋಟಗಾರಿಕೆ ಬೆಳೆಯನ್ನೇ ಅವಲಂಬಿಸಿದ್ದೇವೆ. ಕಳೆದ ಬಾರಿ ಧಾರಾಕಾರ ಮಳೆಗೆ ಜಮೀನಿನಲ್ಲಿದ್ದ ಎಲ್ಲ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ಬಾರಿ ಕೊಳವೆಬಾವಿ ಆಶ್ರಯದಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿದ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ತೋಟದಲ್ಲೇ ಬೆಳೆ ಕೊಳೆಯುವಂತಾಗಿದೆ.
    ಮಂಜುನಾಥ್ ಬನ್ನಳ್ಳಿ ರೈತ

    ಹೊಸಕೋಟೆ ತಾಲೂಕಿನ 8, 600ಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಅವುಗಳಲ್ಲಿ 3600 ಹೆಕ್ಟೇರ್ ಮಾವು, 180 ಹೆಕ್ಟೇರ್ ತರಕಾರಿ ಬೆಳೆಯುತ್ತಾರೆ. ಮಾವು, ದ್ರಾಕ್ಷಿ ಮತ್ತು ಟೊಮ್ಯಾಟೊಗೆ ಮಾತ್ರ ವಿಮೆ ಅನ್ವಯವಾಗುತ್ತದೆ, ರೈತರು ವಿಮೆ ಮಾಡಿಸಿದರೆ ಅತಿವೃಷ್ಟಿ-ಅನಾವೃಷ್ಟಿ ಕಾರಣಕ್ಕೆ ಸಂಭವಿಸಬಹುದಾದ ನಷ್ಟಕ್ಕೆ ಪರಿಹಾರ ಸಿಗುತ್ತದೆ.
    ರೇಖಾ ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕಿ, ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts