More

    ದರೋಡೆಕೋರರ ಗುಂಪಿನ ನಾಲ್ವರ ಬಂಧನ

    ಗದಗ: ಜಿಲ್ಲೆಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ನಡೆಸಿ, ಕಳ್ಳತನ ಮಾಡುತ್ತಿದ್ದ ದರೋಡೆಕೋರರ ಗ್ಯಾಂಗ್​ನ ನಾಲ್ವರನ್ನು ಬಂಧಿಸಲಾಗಿದೆ.

    ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಈ ವಿಷಯ ತಿಳಿಸಿದ್ದಾರೆ.

    ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಉಪೇಂದ್ರ ಯಲ್ಲಪ್ಪ ಮೋಡಿಕೇರ, ಲಕ್ಷ್ಮಣ ಯಲ್ಲಪ್ಪ ಮೋಡಿಕೇರ, ದುರುಗಪ್ಪ ರಾಮಣ್ಣ ಮೋಡಿಕೇರ, ಶಿವಾಜಿ ರಾಮಣ್ಣ ಮೋಡಿಕೇರ ಬಂಧಿತರು. ಇದಲ್ಲದೆ, ಇನ್ನೂ ನಾಲ್ಕು ಜನರು ಬೊಲೆರೋ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಿದರು.

    ನಗರದ ಲಕ್ಷ್ಮೇಶ್ವರ ರಸ್ತೆಯ ಆರ್.ಕೆ. ನಗರದ ಕ್ರಾಸ್ ಹತ್ತಿರ ಬೊಲೆರೋ ವಾಹನದಲ್ಲಿ ಆರೋಪಿಗಳು ದರೋಡೆ ಮಾಡಲು ಹೊಂಚುಹಾಕಿದ್ದರು ಎಂಬ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪಿಎಸ್​ಐ ಅಜಿತ್ ಹೊಸಮನಿ ನೇತೃತ್ವದ ತಂಡ ದಾಳಿ ನಡೆಸಿ, ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ, ಆರೋಪಿಗಳ ವಾಹನದಲ್ಲಿದ್ದ ಕಬ್ಬಿಣದ ರಾಡು, ಖಾರದ ಪುಡಿ, ಸಣ್ಣ ಕಂದಲಿ, ಖಾಲಿ ಬಾಟಲ್ ಹಾಗೂ ಹಗ್ಗವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಎಂಟು ಜನರ ಗ್ಯಾಂಗ್ ಇದಾಗಿದ್ದು, ಇದರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ನಾಲ್ವರು ಬೊಲೆರೋ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದ ಅವರು ವಿವರಿಸಿದರು.

    ಬಂಧಿತ ಆರೋಪಿಗಳು ಈಗಾಗಲೇ ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಗದಗ ಗ್ರಾಮೀಣ ಮತ್ತು ಶಿರಹಟ್ಟಿ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದ ಇವರು ಮತ್ತೆ ಕಳ್ಳತನ ಮಾಡಲಾರಂಭಿಸಿದ್ದಾರೆ ಎಂದು ಎಸ್ಪಿ ಹೇಳಿದರು.

    ಕಳೆದ ಒಂದು ವಾರದಿಂದ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ಮಾಡುವುದು, ಬೆದರಿಸಿ ಹಣ ವಸೂಲಿ ಮಾಡುವುದು, ಮೊಬೈಲ್​ಫೋನ್ ಕಿತ್ತುಕೊಳ್ಳುವಂತಹ ಪ್ರಕರಣಗಳು ನಡೆದಿದ್ದವು. ಈ ಕುರಿತು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಹೆದ್ದಾರಿ ದರೋಡೆಕೋರರನ್ನು ಬಂಧಿಸಬೇಕು ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಾರ್ಯಾಚರಣೆಯಲ್ಲಿ ಸಿಪಿಐಗಳಾದ ಆರ್.ಎಸ್. ಕಪ್ಪತ್ತನವರ, ಪಿ.ವಿ. ಸಾಲಿಮಠ, ಪಿಎಸ್​ಐಗಳಾದ ಸುನೀಲ ನಾಯಕ, ಅಜಿತ್ ಹೊಸಮನಿ, ಸಿಬ್ಬಂದಿ ಆರ್.ಪಿ. ಹಿರೇಮಠ, ಎಂ.ರಂಗರೇಜ್, ಪಿ.ಎಸ್. ಗಾಣಗೇರ, ಡಿ.ಎಸ್. ನದಾಫ, ಗಣೇಶ ಗ್ರಾಮ ಪುರೋಹಿತ, ಗಂಗಾಧರ ಕರಿಲಿಂಗಣ್ಣವರ, ವಿ.ಎಸ್. ಶೆಟ್ಟಣ್ಣವರ, ಎಸ್.ಎ. ಗುಡ್ಡಿಮಠ, ಎ.ಪಿ. ದೊಡ್ಡಮನಿ, ಎಂ.ವಿ. ಹೂಲಿಹಳ್ಳಿ ಮತ್ತಿತರರ ಕಾರ್ಯವನ್ನು ಎಸ್ಪಿ ಯತೀಶ್ ಶ್ಲಾಘಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts