More

    ದರಕಾರಿಲ್ಲದ ದವಾಖಾನೆ !

    ಮೋರಟಗಿ: ಇದೊಂದು 24*7 ಸಮಯ ಸೇವೆ ಸಲ್ಲಿಸುವ ಸಮುದಾಯ ಆರೋಗ್ಯ ಕೇಂದ್ರ. ಇದನ್ನು ನಂಬಿ ಯಾರಾದರೂ ಇಲ್ಲಿಗೆ ತುರ್ತು ಸಂದರ್ಭ ಎಂದು ರೋಗಿಗಳನ್ನು ಕರೆದುಕೊಂಡು ಬಂದರೆ ಅವರನ್ನು ದೇವರೇ ಕಾಪಾಡಬೇಕು….!

    ಇದಕ್ಕೆ ಕಾರಣ ಇಲ್ಲಿ ತಜ್ಞ ವೈದ್ಯರೇ ಇರುವುದಿಲ್ಲ… ಹೋಗಲಿ ಬೇಗ ರೋಗಿಯನ್ನು ಬೇರೆ ಕಡೆ ಕರೆದೊಯ್ಯೋಣ ಎಂದು ಆಂಬುಲೆನ್ಸ್ ಕೇಳಿದರೆ ಅದೂ ದುರಸ್ತಿಯಲ್ಲಿದೆ… ರೋಗಿಗೆ ಕುಡಿಯಲು ನೀರಾದರೂ ಕುಡಿಸಿ ಎಂದರೂ ಅದಕ್ಕೂ ಬರ…..!

    ಇದು ಮೋರಟಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ದುಃಸ್ಥಿತಿ. ಅಷ್ಟೇ ಅಲ್ಲ ಇಲ್ಲಿ ಎರಡು ವರ್ಷಗಳಿಂದ ವೈದ್ಯಾಧಿಕಾರಿಯೇ ಇಲ್ಲ. ಸುತ್ತಲಿನ ಬಗಲೂರು, ಕಕ್ಕಳಮೇಲಿ, ಕುಳೇಕುಮಟಗಿ, ಹಾವಳಗಿ, ಶಿರಸಗಿ, ಗಬಸಾವಳಗಿ, ಹಂಚನಾಳ, ಕೆರೂರ ಸೇರಿ 30ಕ್ಕೂ ಹೆಚ್ಚು ಗ್ರಾಮಗಳ ಜನತೆ ಈ ಆಸ್ಪತ್ರೆಯನ್ನು ನಂಬಿಕೊಂಡಿದ್ದಾರೆ. ಅತ್ಯವಶ್ಯವೆಂದೇ ಪ್ರಾರ್ಥಮಿಕ ಆರೋಗ್ಯ ಕೇಂದ್ರವಿದ್ದದ್ದನ್ನು ಸಮುದಾಯ ಆರೋಗ್ಯ ಕೇಂದ್ರವೆಂದು ಪರಿವರ್ತಿಸಿ ಏಳೆಂಟು ವರ್ಷಗಳು ಸಂದಿವೆ. ಆದರೆ ಅದಕ್ಕೆ ತಕ್ಕಂತೆ ಯಾವುದೇ ಸೂಕ್ತ ವ್ಯವಸ್ಥೆಯೇ ಇಲ್ಲದೆ ಸೊರಗಿ ಹೋಗಿದೆ.

    ನಿಯಮಾನುಸಾರ ಈ ಆಸ್ಪತ್ರೆಯಲ್ಲಿ ಕನಿಷ್ಠ ಐವರು ವೈದ್ಯರು ಸೇವೆಯಲ್ಲಿ ಇರಬೇಕು. ಆದರೆ ಇಲ್ಲಿರುವುದು ದಂತ ವೈದ್ಯರು ಹಾಗೂ ಎನ್‌ಸಿಡಿ ವೈದ್ಯರು ಮಾತ್ರ. ಇಂಥ ಪರಿಸ್ಥಿತಿಯಲ್ಲಿ ಗ್ರಾಮೀಣ ಜನತೆ ಹೆಚ್ಚು ಬರುವುದರಿಂದ ಹಾಗೂ ತುರ್ತು ಸಂದರ್ಭವೂ ಇರುವುದರಿಂದ ಇಲ್ಲಿರುವ ಶುಶ್ರೂಷಕರೇ ರೋಗಿಗಳ ಸಂಬಂಧಿಕರ ಒತ್ತಾಯದ ಮೇರೆಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಅನಿವಾರ್ಯವಾಗಿ ಹೊರ ರೋಗಿಗಳಿಗೂ ಅವರೇ ಚಿಕಿತ್ಸೆ ಕೊಟ್ಟು ಕಳಿಸುತ್ತಿದ್ದಾರೆ.

    ಮೋರಟಗಿ ಗ್ರಾಮವು ರಾಷ್ಟ್ರೀಯ ಹೆದ್ದಾರಿ 218ಕ್ಕೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ನಿರಂತರವಾಗಿ ಅಪಘಾತಗಳೂ ಮೇಲಿಂದ ಮೇಲೆ ಸಂಭವಿಸುತ್ತಿರುತ್ತದೆ. ಆದರೆ ತುರ್ತು ಸ್ಥಿತಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲದ್ದರಿಂದ ಗಾಯಾಳುಗಳನ್ನು ಅಪಘಾತ ಸ್ಥಳದಿಂದ ಕರೆದುಕೊಂಡು ಬರಲು, ತುರ್ತು ಸ್ಥಿತಿಯಾದರೆ ಅವರನ್ನು ತಾಲೂಕು, ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಅವಕಾಶವೇ ಇಲ್ಲದಂತಾಗಿದೆ. ಸುತ್ತಲಿನ ಗ್ರಾಮದಿಂದ ಹೆರಿಗೆ ನೋವಿನಿಂದ ಬರುವ ಗರ್ಭಿಣಿಯರಿಗೆ ಬಹಳ ತೊಂದರೆಯಾಗಿದೆ. ಇಲ್ಲಿ ವೈದ್ಯರೇ ಇಲ್ಲದಿರುವುದರಿಂದ ಅವರು ಸರ್ಕಾರದ ಈ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ 24 ಕಿ.ಮೀ. ದೂರದ ಸಿಂದಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ.

    ಅಲ್ಲದೇ ಮೋರಟಗಿ ಗ್ರಾಮದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ಅದಕ್ಕೆ ಪಕ್ಕದ ಜೇವರ್ಗಿ ತಾಲೂಕಿನ ಕೆಲವು ಗ್ರಾಮಗಳ ಜನತೆ ಸೇರಿ ಆರೇಳು ಸಾವಿರ ಜನ ಆಗಮಿಸುತ್ತಾರೆ. ಅಂದು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಆದರೆ ಸೂಕ್ತ ವೈದ್ಯರಿಲ್ಲದೆ ರೋಗಿಗಳು ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತ ನೋವಿನಲ್ಲೇ ಮರಳುತ್ತಿದ್ದಾರೆ.

    ಈ ಮೊದಲು ಪ್ರತಿ ತಿಂಗಳು 4ನೇ ತಾರೀಖು ಆಸ್ಪತ್ರೆಯಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಈಗ ಅದೂ ನಡೆಯುತ್ತಿಲ್ಲ. ಆರು ತಿಂಗಳಿಂದ ಬೋರ್‌ವೆಲ್ ಕೆಟ್ಟುನಿಂತಿದೆ, ಅದನ್ನು ದುರಸ್ತಿ ಮಾಡಿಸುವವರೂ ಇಲ್ಲದಂತಾಗಿದೆ.

    ತಕ್ಷಣಕ್ಕೆ ಆಗಬೇಕಾಗಿರುವುದು…!
    ಮೋರಟಗಿ ಸಮುದಾಯ ಕೇಂದ್ರಕ್ಕೆ ವೈದ್ಯಾಧಿಕಾರಿಯ ನೇಮಕವಾಗಬೇಕಿದೆ. ಜೊತೆಗೆ ಐವರು ತಜ್ಞ ವೈದ್ಯರನ್ನು ಆಯೋಜಿಸಬೇಕಿದೆ. ಒಬ್ಬ ಶಸ್ತ್ರಚಿಕಿತ್ಸಕ, ಚಿಕ್ಕಮಕ್ಕಳ ತಜ್ಞ, ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ನಿರಂತರವಾಗಿ ಒಬ್ಬ ಸೂಕ್ತ ತಜ್ಞ ವೈದ್ಯರ ಅವಶ್ಯಕತೆ ಇಲ್ಲಿದೆ. ಸ್ವಚ್ಛತೆ ಹಾಗೂ 24*7 ನೀರಿನ ವ್ಯವಸ್ಥೆಗೆ ಏರ್ಪಾಡು ಮಾಡಬೇಕಿದೆ. ಜನತೆಗೆ ತುರ್ತು ಚಿಕಿತ್ಸೆಗೆ ಅಗತ್ಯವಿರುವ 108 ಆಂಬುಲೆನ್ಸ್ ಅಗತ್ಯವಿದೆ.

    ಮೋರಟಗಿ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಜಿಲ್ಲಾಧಿಕಾರಿ ಜಿಲ್ಲಾ ವೈದ್ಯಾಧಿಕಾರಿಯೊಂದಿಗೆ ಮಾತನಾಡಿ ಅಗತ್ಯ ವೈದ್ಯರ ನೇಮಕ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಹಾಗೂ ಬೋರ್‌ವೆಲ್ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು.
    ಅಶೋಕ ಮನಗೂಳಿ, ಸಿಂದಗಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts