More

    ಥಿಯೇಟರ್ ತೆರೆಯಲು ಕೆಲವರಿಗೆ ತವಕ

    ಕೋಲಾರ: ಕರೊನಾ ಪರಿಣಾಮ ಕಳೆದ 6 ತಿಂಗಳ ಹಿಂದೆ ಲಾಕ್‌ಡೌನ್ ಆಗಿರುವ ಸಿನಿಮಾ ಥಿಯೇಟರ್‌ಗಳನ್ನು ಪುನರಾರಂಭಿಸಲು ಸರ್ಕಾರ ಅನುಮತಿ ನೀಡಿದೆಯಾದರೂ ಕರೊನಾ ಹಾವಳಿ ನಿಯಂತ್ರಣಕ್ಕೆ ಬಾರದಿರುವುದರಿಂದ ಚಿತ್ರ ಪ್ರದರ್ಶನಕ್ಕೆ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

    ಜಿಲ್ಲಾ ಕೇಂದ್ರ ಕೋಲಾರದಲ್ಲಿ 5, ಮುಳಬಾಗಿಲು-3, ಬಂಗಾರಪೇಟೆ-2, ಮಾಲೂರು-1, ಕೆಜಿಎಫ್-2 ಶ್ರೀನಿವಾಸಪುರ-1 ಸೇರಿ ಒಟ್ಟು 14 ಥಿಯೇಟರ್‌ಗಳಿವೆ. ಬಹುತೇಕ ಥಿಯೇಟರ್‌ಗಳನ್ನು ಮಾಲೀಕರು ಕಾರಣಾಂತರಗಳಿಂದ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.

    ಜಿಲ್ಲೆಯ ಒಂದೆರಡು ಥಿಯೇಟರ್ ಮಾಲೀಕರು ಬಾಗಿಲು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಉಳಿದವರು ಕಾದು ನೋಡಲು ನಿರ್ಧರಿಸಿದ್ದಾರೆ. ಕರೊನಾದಿಂದ ಥಿಯೇಟರ್ ಮುಚ್ಚಿದ್ದರಿಂದ ಕೆಲಸ ಮಾಡುವ ತಾಂತ್ರಿಕ ಸಿಬ್ಬಂದಿ, ಕಾರ್ಮಿಕರಿಗೆ ಆರ್ಥಿಕ ಹೊಡೆತ ಬಿದ್ದಿದೆ. ಸಿನಿಮಾ ಪ್ರದರ್ಶನವಾದರೆ ಕಾರ್ಮಿಕರಿಗೆ ಸಂಬಳಕ್ಕಾದರೂ ಆಗಬಹುದೆಂಬುದು ಬಾಡಿಗೆದಾರರ ಲೆಕ್ಕಾಚಾರ.

    ಜಿಲ್ಲೆಯು ಆಂಧ್ರ ಮತ್ತು ತಮಿಳುನಾಡಿನ ಗಡಿಯಲ್ಲಿರುವುದರಿಂದ ಕನ್ನಡಕ್ಕಿಂತ ತೆಲುಗು ಚಿತ್ರಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕನ್ನಡದ ಸ್ಟಾರ್ ನಟರ ಚಿತ್ರಗಳು ಕನಿಷ್ಠ ಎರಡು ವಾರ ಪ್ರದರ್ಶನವೇ ಕಷ್ಟ. ಹೊಸ ಚಿತ್ರಗಳ ಪ್ರದರ್ಶನ ವಿಳಂಬವಾದರೆ ನೆರೆಯ ಮದನಪಲ್ಲಿ, ಚಿತ್ತೂರು, ಪಲಮನೇರು ಇನ್ನಿತರೆಡೆ ಹೋಗಿ ಚಿತ್ರ ನೋಡಿ ಬರುತ್ತಾರೆ.

    ಕರೊನಾದಿಂದ ಚಿತ್ರ ಪ್ರದರ್ಶನ ಬಂದ್ ಬಳಿಕ ಸಿನಿ ಪ್ರಿಯರು ಮೊಬೈಲ್‌ಗಳಲ್ಲಿ ಸಿನಿಮಾ ನೋಡಿಕೊಂಡಿದ್ದರು. ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿರುವುದರಿಂದ ಥಿಯೇಟರ್‌ಗಳಿಗೆ ಹೋಗಿ ಸಿನಿಮಾ ನೋಡಲು ಎಷ್ಟರ ಮಟ್ಟಿಗೆ ಆಸಕ್ತಿ ತೋರುತ್ತಾರೋ ಎಂಬುದು ಜಿಜ್ಞಾಸೆಯನ್ನುಂಟು ಮಾಡಿದೆ.

    ಪ್ರತಿ ಶೋಗೆ 50 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಶೋ ಮುಗಿದ ಮೇಲೆ ಪೂರ್ತಿ ಸ್ಯಾನಿಟೈಸ್ ಮಾಡಬೇಕು, ಧೂಮಪಾನಕ್ಕೆ ಅವಕಾಶವಿಲ್ಲ, ಮಾಸ್ಕ್ ಕಡ್ಡಾಯ. ಶೌಚಗೃಹದಲ್ಲಿ ಶುಚಿತ್ವದ ಮಾರ್ಗಸೂಚಿ ಪಾಲಿಸಲು ಸೂಚಿಸಿದೆ.

    ಒಂದು ಶೋಗೆ 50 ಜನ ಬಂದರೆ ನಿರ್ವಹಣೆ ಕಷ್ಟವಾಗುತ್ತದೆ, ಹೊಸ ಸಿನಿಮಾ ಪ್ರದರ್ಶನವಾದರೆ ಕಾರ್ಮಿಕರಿಗೆ ಕನಿಷ್ಠ ಸಂಬಳ ನೀಡಬಹುದು, ತೆರಿಗೆ ಪಾವತಿಗೆ ವಿನಾಯಿತಿ ಅಗತ್ಯ ಎಂಬ ಅಭಿಪ್ರಾಯ ಮಾಲೀಕರು ಮತ್ತು ಬಾಡಿಗೆದಾರರಿಂದ ಕೇಳಿ ಬಂದಿದೆ.
    ಇವತ್ತಿನ ಪರಿಸ್ಥಿತಿಯಲ್ಲಿ ಜನ ಬರುವುದು ಅನುಮಾನ, ಹೀಗಾಗಿ ಸರ್ಕಾರ ಅನುಮತಿ ನೀಡಿದ್ದರೂ ಥಿಯೇಟರ್ ಪುನರಾರಂಭಿಸಲು ಮಾಲೀಕರು ಹಾಗೂ ಬಾಡಿಗೆದಾರರು ಹಿಂದು ಮುಂದು ನೋಡುತ್ತಿದ್ದಾರೆ.

    ಲಾಕ್‌ಡೌನ್ ನಂತರ ಥಿಯೇಟರ್ ಬಂದ್ ಮಾಡಿದ ಮೇಲೆ ಅಲ್ಲಿನ ಕಾರ್ಮಿಕರಿಗೆ ಸಂಬಳವಿಲ್ಲದೆ ಜೀವನ ಕಷ್ಟವಾಗಿತ್ತು. ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ. ಥಿಯೇಟರ್ ಪುನರಾರಂಭಕ್ಕೆ ಅವಕಾಶ ನೀಡಿದ್ದರಿಂದ ಕನಿಷ್ಠ ಕಾರ್ಮಿಕರಿಗೆ ಒಂದಿಷ್ಟು ಹಣ ಕೊಡಲು ಮಾಲೀಕರಿಗೆ ಅಥವಾ ಬಾಡಿಗೆದಾರರಿಗೆ ಅನುಕೂಲವಾಗುತ್ತದೆ, ಜೀವ ಮತ್ತು ಜೀವನ ಎರಡೂ ಮುಖ್ಯವಾಗಿರುವುದರಿಂದ ಜಾಗ್ರತೆವಹಿಸಿ ಥಿಯೇಟರ್ ಬಾಗಿಲು ತೆರೆಯಬೇಕು.
    ಇಂಚರ ಗೋವಿಂದರಾಜು , ಎಮ್ಮೆಲ್ಸಿ, ಕೋಲಾರ

    ಕರೊನಾದ ಹಾವಳಿ ತಗ್ಗಿಲ್ಲ, ಥಿಯೇಟರ್ ತೆರೆಯಲು ಸರ್ಕಾರ ಅನುಮತಿ ನೀಡಿರುವುದು ಸರಿ. ಜನ ಸಿನಿಮಾ ನೋಡಲು ಬರದಿದ್ದರೆ ನಷ್ಟಕ್ಕೆ ಪರಿಹಾರ ನೀಡುವವರು ಯಾರು? ಹೊಸ ಚಿತ್ರ ಸಹ ಸಿದ್ಧವಾಗಿಲ್ಲ, ಹಳೇ ಚಿತ್ರಗಳಿಂದ ಹೆಚ್ಚು ಲಾಭವಾಗಲ್ಲ, ಥಿಯೇಟರ್ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತೇವೆ, ಅಮಾವಾಸ್ಯೆ ಮುಗಿದ ಬಳಿಕ ಬಾಗಿಲು ತೆರೆಯುತ್ತೇವೆ.
    ರಂಗನಾಥ್, ಮಾಲೀಕರು, ಬಾಲಾಜಿಚಿತ್ರ ಮಂದಿರ, ಮಾಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts