More

    ತೊಗರ್ಸಿಯಲ್ಲಿ ತಹಸೀಲ್ದಾರ್ ನಡೆ ಹಳ್ಳಿ ಕಡೆ: ಕಂದಾಯ ಇಲಾಖೆ ಕಾರ್ಯ ವೈಖರಿ ಬಗ್ಗೆ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ ಬೇಸರ

    ಶಿಕಾರಿಪುರ: ಮಾಸಾಶನಗಳ ಸದುಪಯೋಗವಾಗುತ್ತಿಲ್ಲ. ಸಾಕಷ್ಟು ಫಲಾನುಭವಿಗಳಲ್ಲದವರಿಗೆ ತಲುಪುತ್ತಿವೆ. ಕಂದಾಯ ಇಲಾಖೆ ಅರ್ಹರನ್ನು ಗುರ್ತಿಸುವ ಕೆಲಸ ಮಾಡಬೇಕು ಎಂದು ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ ಹೇಳಿದರು.
    ಶನಿವಾರ ಸಮೀಪದ ತೊಗರ್ಸಿಯಲ್ಲಿ ಹಮ್ಮಿಕೊಂಡಿದ್ದ ತಹಸೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಂದಾಯ ಇಲಾಖೆಯವರು ಪ್ರಾಮಾಣಿಕವಾಗಿ ಮಾಡಬೇಕು. ಸಾಮಾನ್ಯ ಜನರಿಗೆ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಬೇಕು ಎಂದರು.
    ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಇಲಾಖೆಗಳು ಸಾಕಷ್ಟು ಪರಿಶ್ರಮಿಸುತ್ತಿವೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಕೆಲವರಿಗೆ 50 ವರ್ಷಕ್ಕೆ ಸಂಧ್ಯಾಸುರಕ್ಷಾ ನೀಡಲಾಗಿದೆ. ಸಾಕಷ್ಟು ಶಾಲೆಗಳಿರುವ ಜಾಗಗಳು ಇನ್ನೂ ಶಾಲೆಯ ಹೆಸರಿಗೆ ಆಗಿಲ್ಲ. ಸ್ಮಶಾನ ಭೂಮಿಗಳ ಸಮಸ್ಯೆಗಳಿವೆ. ಕೆಲವು ಊರುಗಳಲ್ಲಿ ಸ್ಮಶಾನವೇ ಇಲ್ಲ. ಮಹಿಳಾ ಗ್ರಾಮ ಲೆಕ್ಕಿಗರು ಹೆಚ್ಚಿದ್ದು ಅವರಿಗೆ ಇಲಾಖೆಯ ಮೇಲಧಿಕಾರಿಗಳು ಅವರಿಗೆ ಸರಿಯಾದ ಮಾಹಿತಿ ನೀಡಿ ಕೆಲಸ ಮಾಡಿಸಬೇಕು ಎಂದು ತಿಳಿಸಿದರು.
    ತಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಕಂದಾಯ ಅಧಿಕಾರಿಗಳು ರೈತರು, ಜನಸಾಮಾನ್ಯರು ತಮ್ಮ ಬಳಿ ಬಂದಾಗ ಸರಿಯಾಗಿ ವರ್ತಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದರು.
    ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಯಾವುದೇ ರೀತಿಯ ಮಧ್ಯವರ್ತಿಗಳ ಮಾತಿಗೆ ಬೆಲೆ ಕೊಡಬೇಡಿ. ಒಂದು ವಾರದಲ್ಲಿ ವಿಎಗಳು ಯಾವ ಸಮಯದಲ್ಲಿ ಎಲ್ಲಿ ಇರುತ್ತಾರೆ ಎನ್ನುವುದನ್ನು ಎಲ್ಲ ಪಂಚಾಯಿತಿಗಳಿಗೂ, ಸ್ಥಳೀಯ ಜನಪ್ರತಿನಿಧಿಗಳಿಗೂ ತಲುಪಿಸುತ್ತೇವೆ. ಎಲ್ಲ ಗ್ರಾಮಗಳಿಗೆ ಮಾಹಿತಿ ತಲುಪಿಸುತ್ತೇವೆ. ಯಾವುದೇ ರೀತಿಯ ತೊಂದರೆಗಳಿದ್ದರೂ ಕಾನೂನಿನ ವ್ಯಾಪ್ತಿಯಲ್ಲಿ ಅದನ್ನು ಬಗೆಹರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts