More

    ತೈಲ ಬೆಲೆ ಏರಿಕೆಗೆ ಖಂಡನೆ

    ಯಲ್ಲಾಪುರ: ತೈಲ ಬೆಲೆ ಏರಿಕೆ ಖಂಡಿಸಿ ಆಲ್ ಇಂಡಿಯಾ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ದೇಶದಾದ್ಯಂತ ಕರೆ ನೀಡಿದ್ದ ಲಾರಿ ಮುಷ್ಕರವನ್ನು ಬೆಂಬಲಿಸಿ, ಪಟ್ಟಣದಲ್ಲಿ ತಾಲೂಕು ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

    ಪಟ್ಟಣದ ಬಸ್ ನಿಲ್ದಾಣದ ಬಳಿಯಿಂದ ಗಾಂಧಿ ಚೌಕ, ರಾಷ್ಟ್ರೀಯ ಹೆದ್ದಾರಿ, ಶಿವಾಜಿ ಸರ್ಕಲ್ ಮೂಲಕ ತಹಸೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ನಾಯ್ಕ, ರಿಕ್ಷಾ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ನಾಯ್ಕ, ಬಸವೇಶ್ವರ ಲಗೇಜ್ ಆಟೊ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಪ್ರಮುಖರಾದ ನವೀನ ನಾಯ್ಕ, ಸಂಜಯ ಮರಾಠಿ, ಧೀರಜ ತಿನೆಕರ್, ಖಾಜಾ ಅತ್ತರ್, ಗಜು ಪಟಗಾರ, ಅಶೋಕ ನಾಯ್ಕ, ಸಂಜು ಜಾಧವ, ವಿನಾಯಕ ಗುತ್ತಲ್, ರಾಜು ಮೆಂಡನ್ ಇತರರಿದ್ದರು.

    ಬಿಜೆಪಿ ಕಾರ್ಯಕರ್ತರೇ ಹೆಚ್ಚು! ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧದ ಈ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಾಗಿ ಭಾಗವಹಿಸಿದ್ದು ಕಂಡು ಬಂತು. ಪ್ರತಿನಿತ್ಯ ಸರ್ಕಾರದ ಧೋರಣೆಯನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಕಾರ್ಯಕರ್ತರು, ಬೆಲೆ ಏರಿಕೆಯನ್ನು ಖಂಡಿಸುವಲ್ಲಿ ಯಾವುದೇ ಮುಲಾಜಿಲ್ಲದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

    ಬೇಡಿಕೆ ಏನು?: ಮಾರುಕಟ್ಟೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಏರಿಕೆಯಾಗುತ್ತಿರುವ ತೈಲಬೆಲೆ ಇಳಿಸಬೇಕು. ಅದನ್ನು ಜಿಎಸ್​ಟಿ ವ್ಯಾಪ್ತಿಗೆ ಒಳಪಡಿಸಬೇಕು.

    • ಟೋಲ್ ಗೇಟ್​ಗಳಲ್ಲಿ ದುಪ್ಪಟ್ಟು ದರ ವಸೂಲಿಗೆ ಕಡಿವಾಣ ಹಾಕಬೇಕು.
    • ಟ್ರಕ್ ಮಾಲೀಕರ ಥರ್ಡ್​ಪಾರ್ಟಿ ವಿಮೆ ಕಂತಿನ ಹಣವನ್ನು ಕಡಿಮೆ ಮಾಡಬೇಕು.
    • ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಕೈಬಿಡಬೇಕು.
    • ಗ್ರೀನ್ ಟ್ಯಾಕ್ಸ್ ನಿಯಮ ರದ್ದುಪಡಿಸಬೇಕು. ವಾಹನಗಳ ಬಿಡಿಭಾಗಗಳ ದರ ಕಡಿಮೆ ಮಾಡಬೇಕು.
    • ಪ್ಯಾಸೆಂಜರ್ ಆಟೊರಿಕ್ಷಾ ಪಟ್ಟಣದ 7 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಲು ಅವಕಾಶವಿದ್ದು, ಅದನ್ನು ತಾಲೂಕು ವ್ಯಾಪ್ತಿಗೆ ಒಳಪಡಿಸಬೇಕು.
    • ಲೋಡಿಂಗ್ ಮತ್ತು ಅನ್​ಲೋಡಿಂಗ್ ಹಣವನ್ನು ಖರೀದಿದಾರ ಮತ್ತು ಮಾರಾಟಗಾರರೇ ಪಾವತಿ ಮಾಡಬೇಕು.
    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts