More

    ತೆವಳುತ್ತಿದೆ ಡ್ರೋನ್ ಸರ್ವೆ

    ರಾಜೇಂದ್ರ ಶಿಂಗನಮನೆ ಶಿರಸಿ

    ರೈತರ ಜಮೀನು ಮತ್ತು ಸರ್ಕಾರಿ ಆಸ್ತಿಗಳ ಮರುಮಾಪನ ಹಾಗೂ ಡಿಜಿಟಲೀಕರಣಕ್ಕೆ ಪೂರಕವಾಗಿ ಸರ್ಕಾರವು 2019ರ ಆರಂಭದಲ್ಲಿ ಕೈಗೆತ್ತಿಕೊಂಡಿದ್ದ ಡ್ರೋನ್ ಆಧರಿತ ಸಮೀಕ್ಷೆ ಕಾರ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.

    ಕರ್ನಾಟಕ ಭೂ ಕಂದಾಯ ಕಾಯ್ದೆ ಪ್ರಕಾರ ಪ್ರತಿ 30 ವರ್ಷಗಳಿಗೊಮ್ಮೆ ಕಂದಾಯ ಇಲಾಖೆಯಲ್ಲಿ ಬರುವ ಎಲ್ಲ ಆಸ್ತಿಗಳ ಮರು ಸರ್ವೆ ಮಾಡಬೇಕಾಗುತ್ತದೆ. ಡ್ರೋನ್ ಆಧರಿತ ಸರ್ವೆ ವಸ್ತುನಿಷ್ಠ ಆಗಿರುತ್ತದೆ. ದೋಷಪೂರಿತ ಗಡಿ ನಿಗದಿಗೆ ಇದರಿಂದ ತಡೆ ನೀಡಬಹುದು ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿಯೇ ಸಮೀಕ್ಷೆ ನಡೆಸುವಂತೆ 2019ರ ಮಾರ್ಚ್​ನಲ್ಲಿ ಸೂಚಿಸಲಾಗಿತ್ತು. ಆದರೆ, ಯೋಜನೆ ಜಾರಿಗೊಂಡು ಒಂದೂವರೆ ವರ್ಷ ಕಳೆದರೂ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಯಾವೊಂದು ಬೆಳವಣಿಗೆ ಜಿಲ್ಲೆಯಲ್ಲಿ ನಡೆದಿಲ್ಲ.

    ಅಚ್ಚರಿಯ ಸಂಗತಿ ಏನೆಂದರೆ, ನೂತನವಾಗಿ ಜಾರಿಗೊಂಡ ಡ್ರೋನ್ ಸರ್ವೆ ನಡೆಸುವ ವ್ಯವಸ್ಥೆಯ ಬಗ್ಗೆ ಮಾಹಿತಿಯಿರದ ಜಿಲ್ಲೆಯ ಸರ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಈವರೆಗೆ ಸರ್ಕಾರದಿಂದಾಗಲೀ, ಒಡಂಬಡಿಕೆ ಮಾಡಿಕೊಂಡ ಸಂಸ್ಥೆ ಯಿಂದಾಗಲೀ ತರಬೇತಿಯನ್ನೇ ನೀಡಿಲ್ಲ!

    ಚೆಕ್ ಪಾಯಿಂಟ್ ಸಾಧನೆ: ಡ್ರೋನ್ ಸರ್ವೆ ಕಾರ್ಯದ ಸಂಬಂಧ ರಾಜ್ಯ ಸರ್ಕಾರವು ಭಾರತೀಯ ಸರ್ವೆಕ್ಷಣಾ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಇಲ್ಲಿನ ಅಧಿಕಾರಿಗಳು ಡ್ರೋನ್ ಸರ್ವೆ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಭೂ ದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಬೇಕಿದೆ. ಆದರೆ, ಈವರೆಗೂ ಈ ಕಾರ್ಯವಾಗಿಲ್ಲ. ಒಂದೂವರೆ ವರ್ಷಗಳ ಅವಧಿಯಲ್ಲಿ ಏರಿಯಲ್ ಸರ್ವೆಗೆ ಅನುಕೂಲಕರವಾಗಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಕಂಟ್ರೋಲ್ ಪಾಯಿಂಟ್ ಮಾತ್ರ ನಿರ್ವಿುಸಲಾಗಿದೆ.

    ಇದರ ಹೊರತಾಗಿ ಇನ್ಯಾವ ಕಾರ್ಯಗಳು ಆಗಿಲ್ಲ. ಪ್ರಸ್ತುತ ಕರೊನಾ ಕಾರಣಕ್ಕೆ ಸರ್ಕಾರ ಮಟ್ಟದಲ್ಲೂ ಸರ್ವೆಗೆ ಸಂಬಂಧಿಸಿದ ಪ್ರಕ್ರಿಯೆ ಜರುಗಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಕೋವಿಡ್ ಹಾಗೂ ಇತರ ಕೆಲ ತಾಂತ್ರಿಕ ಕಾರಣಗಳಿಂದ ಡ್ರೋನ್ ಆಧರಿತ ಸಮೀಕ್ಷೆ ಕಾರ್ಯ ಆರಂಭವಾಗಿಲ್ಲ. ಇದನ್ನು ತ್ವರಿತವಾಗಿ ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಯಾವ ನಿರ್ದೇಶನ ಬರುತ್ತದೆ ಆ ರೀತಿ ನಡೆಯಲಾಗುವುದು.
    | ಕೆ. ಹರೀಶಕುಮಾರ ಜಿಲ್ಲಾಧಿಕಾರಿ

    ಗುಡ್ಡಗಾಡಿನದೇ ಸಮಸ್ಯೆ
    ಉತ್ತರ ಕನ್ನಡ ಗುಡ್ಡಗಾಡು ಜಿಲ್ಲೆಯಾಗಿದೆ. ಇಲ್ಲಿ ಕೆಲವೊಂದು ನಗರ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳ ಭೂಮಿ ಉಬ್ಬು-ತಗ್ಗು, ಗಿಡ- ಮರಗಳಿಂದ ಕೂಡಿವೆ. ಬಹುತೇಕ ಚಿಕ್ಕ ಹಿಡುವಳಿದಾರರಿದ್ದಾರೆ. ಇಲ್ಲಿ ಡ್ರೋನ್ ಸರ್ವೆ ನಡೆಸುವುದು ಕಷ್ಟ. ಸರ್ವೆ ನಡೆಸಿದರೂ ಆಸ್ತಿ ಹಾಗೂ ಭೂಮಿಯ ನಿಖರ ಮಾಹಿತಿ ಸಿಗುವುದು ಅನುಮಾನ. ಡ್ರೋನ್ ಸರ್ವೆ ಸಮರ್ಪಕವಾಗಿ ಬರದಿದ್ದರೆ ಮತ್ತೆ ಸಾಂಪ್ರದಾಯಿಕ ಸರ್ವೆ ನಡೆಸುವುದು ಅನಿವಾರ್ಯ. ಹೀಗಾಗಿ, ಸರ್ವೆ ಇಲಾಖೆಯವರು ಡ್ರೋನ್ ಸರ್ವೆಗೆ ಮುಂದಾಗಿಲ್ಲ ಎಂಬುದು ಇಲಾಖೆ ಮೂಲಗಳ ಮಾಹಿತಿಯಾಗಿದೆ.

    ಡ್ರೋನ್ ಮೂಲಕ ಸರ್ವೆ ನಡೆಸುವುದರಿಂದ ಕೆಲಸ ಶೀಘ್ರ ಮುಕ್ತಾಯವಾಗುತ್ತದೆ. ಗಣಕೀಕರಣ, ಜಿಯೋ ರೆಫರೆನ್ಸ್ ಜತೆ ನಿಖರವಾದ ನಕ್ಷೆ ಸಿದ್ಧಪಡಿಸಬಹುದು. ಭೂ ಮಾಪನವನ್ನು ಸಾಂಪ್ರದಾಯಿಕ ವಿಧಾನಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬಹುದು. ಪಕ್ಷಪಾತ ಹಾಗೂ ತಪ್ಪುಗಳಿಗೆ ಅವಕಾಶ ಇರುವುದಿಲ್ಲ. 2 ವರ್ಷದೊಳಗೆ ಪೂರ್ಣಗೊಳ್ಳಬೇಕಿದ್ದ ಸರ್ವೆ ಇನ್ನೂ ಆರಂಭವೇ ಆಗದಿರುವುದು ಖಂಡನೀಯ. ಈಗಲಾದರೂ ತ್ವರಿತವಾಗಿ ಡ್ರೋನ್ ಸರ್ವೆ ಆರಂಭಿಸಿ ವ್ಯವಸ್ಥಿತವಾದ ಭೂನಕ್ಷೆ ಸಿದ್ಧಪಡಿಸಲು ಮುಂದಾಗಬೇಕು.
    | ಪರಮಾನಂದ ಹೆಗಡೆ ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts