More

    ತೆರಿಗೆ ಸೋರಿಕೆ ತಡೆಗೆ ‘ಪಂಚತಂತ್ರ’

    ಬೆಳಗಾವಿ: ಗ್ರಾಪಂಗಳಲ್ಲಿ 2011ರಿಂದ ಬಳಕೆಯಲ್ಲಿದ್ದ ‘ಪಂಚತಂತ್ರ ತಂತ್ರಾಂಶ’ವನ್ನು ‘ಪಂಚತಂತ್ರ 2.0’ಗೆ ಉನ್ನತೀಕರಿಸಿ, ರಾಜ್ಯದ ಶೇ. 50ರಷ್ಟು ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಅಪವ್ಯಯ ತಡೆದು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವುದರ ಜತೆಗೆ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ತ್ವರಿತ ವಿಲೇವಾರಿ ಮಾಡಲು ಸರ್ಕಾರ ಅನುಕೂಲ ಕಲ್ಪಿಸಿದೆ.

    ಈ ತಂತ್ರಾಂಶವು ಡಿಜಿಟಲ್ ಸೇವೆ ನೀಡಲಿದ್ದು, ಪ್ರಮುಖವಾಗಿ ತೆರಿಗೆ ಸೋರಿಕೆ ತಡೆಯಲಿದೆ. ಎಲ್ಲ ಗ್ರಾಪಂಗಳಲ್ಲಿ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಪಂಗಳಲ್ಲಿ ಪಂಚತಂತ್ರ 2.0 ತಂತ್ರಾಂಶದ ತೆರಿಗೆ ಸಂಗ್ರಹಣೆ ಮಾಡ್ಯುಲ್‌ನಲ್ಲಿ ಗ್ರಾಪಂಗಳ ತೆರಿಗೆ ದರ ಮತ್ತು ಶುಲ್ಕಗಳನ್ನು ವಿಧಿಸಲು ಅನುವು ಮಾಡಿಕೊಡಲಾಗಿದೆ. ಜುಲೈನಿಂದಲೇ ರಾಜ್ಯದ ಶೇ.50 ಗ್ರಾಪಂಗಳಲ್ಲಿ ಈ ಕಾರ್ಯಗಳು ನಡೆಯುತ್ತಿವೆ. ಬಾಕಿ ಉಳಿದಿರುವ ಗ್ರಾಪಂಗಳಲ್ಲಿ ಒಂದು ತಿಂಗಳ ಅವಧಿಯಲ್ಲಿ ‘ಪಂಚತಂತ್ರ 2.0’ ಅಳವಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಒಂದು ವೇಳೆ ಸಾರ್ವಜನಿಕರು ಲಿಖಿತ ರೂಪದಲ್ಲಿ ಅರ್ಜಿಗಳನ್ನು ಸಲ್ಲಿಸಿದರೂ ಅವುಗಳನ್ನು ಕಡ್ಡಾಯವಾಗಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಸಿ ವಿಲೇವಾರಿ ಮಾಡಬೇಕು. ಇನ್ನು ಮುಂದೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 2006ರ ನಿಯಮ 21ರ ಅನ್ವಯ ರಸೀದಿ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಿಂದ ಅಥವಾ ಜಿಪಂಗಳ ಮೂಲಕ ನಮೂನೆ-3 ಮುದ್ರಿತ ಪುಸ್ತಕಗಳನ್ನು ಗ್ರಾಪಂಗಳು ಪಡೆದುಕೊಳ್ಳುವಂತಿಲ್ಲ. ಅಲ್ಲದೆ ಗ್ರಾಪಂಗಳ ತೆರಿಗೆ ದರ ಮತ್ತು ಶುಲ್ಕಗಳನ್ನು ಸಂಗ್ರಹಿಸಲು ನಮೂನೆ-3 ರಲ್ಲಿ ನಿಗದಿಪಡಿಸಿದ ಮಾನ್ಯುಯಲ್ ರಸೀದಿಗಳನ್ನು ನೀಡುವ ಬದಲು ಪಂಚತಂತ್ರ 2.0 ತಂತ್ರಾಂಶದ ಮೂಲಕ ಡಿಜಿಟಲ್ ರಸೀದಿಗಳನ್ನು ಮಾತ್ರವೆ ಸೃಜಿಸಿ ಸಾರ್ವಜನಿಕರಿಗೆ ನೀಡಿ ತೆರಿಗೆ, ದರ ಮತ್ತು ಶುಲ್ಕಗಳನ್ನು ಸಂಗ್ರಹಿಸಲು ತಿಳಿಸಲಾಗಿದೆ.

    ಗ್ರಾಪಂಗಳು ಸಾರ್ವಜನಿಕರಿಂದ ಸಂಗ್ರಹಿಸುವ ತರಿಗೆ, ಶುಲ್ಕಗಳ ಸ್ವೀಕೃತಕ್ಕೆ ಮಾನ್ಯುಯಲ್ ರಸೀದಿ ಬದಲು ಗ್ರಾಪಂಗಳು ಮುದ್ರಿತ ರಸೀದಿಗಳನ್ನು ವಿತರಿಸುವುದು ಕಡ್ಡಾಯವಾಗಿದೆ. ಆನ್‌ಲೈನ್ ಮೂಲಕ ನಾಗರಿಕರು 15 ಸೇವೆಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

    ಆ್ಯಪ್ ಮೂಲಕ 15 ಸೇವೆ

    ಮತ್ತೊಂದೆಡೆ ಸಾರ್ವಜನಿಕ ಸೇವೆಗಳನ್ನು ಆನ್‌ಲೈನ್ ಮೂಲಕ ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಪರವಾನಗಿ, ಸ್ವಾಧೀನ ಪತ್ರ, ಹೊಸ ನಲ್ಲಿ ಸಂಪರ್ಕ, ನಲ್ಲಿ ಸಂಪರ್ಕ ಕಡಿತ, ಬೀದಿ ದೀಪ ನಿರ್ವಹಣೆ, ಗ್ರಾಮ ನೈರ್ಮಲ್ಯ, ವ್ಯಾಪಾರ ಪರವಾನಗಿ, ನಿರಾಕ್ಷೇಪಣಾ ಪತ್ರ, ಉದ್ಯೋಗ ಚೀಟಿ ಸೇರಿ ಸುಮಾರು 15 ಸೇವೆಗಳನ್ನು ಪಡೆಯಲು ಬಾಪೂಜಿ ಸೇವಾ ತಂತ್ರಾಂಶ ಮತ್ತು ಬಾಪೂಜಿ ಸೇವಾ ಕೇಂದ್ರದ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳ ಮೂಲಕ ಕೂಡ ಗ್ರಾಪಂಗಳ ಆಸ್ತಿ ತೆರಿಗೆ ಪಾವತಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

    ರಾಜ್ಯದ ಶೇ. 50ರಷ್ಟು ಗ್ರಾಪಂಗಳಲ್ಲಿ ಪಂಚತಂತ್ರ ತಂತ್ರಾಂಶವನ್ನು ‘ಪಂಚತಂತ್ರ 2.0’ಗೆ ಉನ್ನತೀಕರಿಸಿ ಅಳವಡಿಸಲಾಗಿದೆ. ಈ ತಂತ್ರಾಂಶದ ಮೂಲಕ ಒಂದೂವರೆ ತಿಂಗಳಿಂದ ಗ್ರಾಪಂಗಳಲ್ಲಿ ಕಾರ್ಯಗಳು ನಡೆದಿವೆ. ಬಾಕಿ ಉಳಿದಿರುವ ಶೇ. 50ರಷ್ಟು ಗ್ರಾಪಂಗಳಲ್ಲಿ ಒಂದು ತಿಂಗಳಲ್ಲಿ ಈ ತಂತ್ರಾಂಶ ಅಳವಡಿಸಲಾಗುವುದು. ಇದರಿಂದ ಡಿಜಿಟಲ್ ಸೇವೆ ಲಭ್ಯವಾಗಲಿದ್ದು, ಪಾರದರ್ಶಕ ಸೇವೆ ನೀಡಬಹುದು.
    | ಶಿಲ್ಪಾ ನಾಗ, ಗ್ರಾಮೀಣಾಭಿವೃದ್ಧಿ ಆಯುಕ್ತೆ ಮತ್ತು ಇ-ಗವರ್ನನ್ಸ್ ನಿರ್ದೇಶಕಿ, ಬೆಂಗಳೂರು

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts