More

    ತುರ್ತು ಸೇವೆಯ ನಕಲಿ ಪಾಸ್ ತಯಾರಕರ ಬಂಧನ

    ವಿಜಯವಾಣಿ ಸುದ್ದಿಜಾಲ ಯಲ್ಲಾಪುರ: ಲಾಕ್​ಡೌನ್ ಸಂದರ್ಭದಲ್ಲಿ ತುರ್ತು ಸೇವೆಗೆಂದು ನಕಲಿ ಪಾಸ್ ಬಳಸಿದ್ದಲ್ಲದೇ, ಜನರಿಗೂ ನಕಲಿ ಪಾಸ್​ಗಳನ್ನು ನೀಡುತ್ತಿದ್ದ ಇಬ್ಬರನ್ನು ಪೊಲೀಸರು ಪಟ್ಟಣದಲ್ಲಿ ಬಂಧಿಸಿದ್ದಾರೆ.

    ಪಟ್ಟಣದ ರವೀಂದ್ರನಗರದ ನಿವಾಸಿ ಧೀರಜ್ ವಿಠ್ಠಲ ತಿನೇಕರ್ ಮತ್ತು ‘ವರ್ಷಾ ಸ್ಟುಡಿಯೋ’ ಮಾಲೀಕ ಪ್ರಕಾಶ ಬಸವರಾಜ ಕಟ್ಟಿಮನಿ ಬಂಧಿತರು. ಚರ್ಚ್ ಕಾಂಪ್ಲೆಕ್ಸ್ ಎದುರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಧೀರಜ್ ಅವರ ಕಾರು ಪರಿಶೀಲಿಸಿದಾಗ ಪಾಸ್ ನಕಲಿ ಆಗಿರುವುದು ಕಂಡು ಬಂದಿದೆ. ಈ ವೇಳೆ ಪೊಲೀಸರ ಜತೆಗೂ ಅನುಚಿತವಾಗಿ ವರ್ತಿಸಿದ್ದಾರೆ. ವಿಚಾರಿಸಿದಾಗ ಅದರ ಮೂಲ ವರ್ಷಾ ಸ್ಟುಡಿಯೋ ಎಂದು ತಿಳಿದ ನಂತರ ಸ್ಟುಡಿಯೋ ಮಾಲೀಕ ಪ್ರಕಾಶ ಕಟ್ಟಿಮನಿ ಅವರನ್ನು ವಶಕ್ಕೆ ಪಡೆದಾಗ ಸತ್ಯ ಬಹಿರಂಗಗೊಂಡಿದೆ.

    ಇವರಿಂದ ಸ್ಟುಡಿಯೋದಲ್ಲಿದ್ದ ಎರಡು ಕಾರುಗಳು, 65 ನಕಲಿ ಪಾಸ್​ಗಳು, 6 ಕಂಪ್ಯೂಟರ್​ಗಳು, 6 ಪ್ರಿಂಟರ್​ಗಳು, 1 ಸ್ಕಾ್ಯನರ್, ಸಿಸಿಟಿವಿ ಮತ್ತು ಡಿವಿಆರ್, 2 ಎಕ್ಟರ್​ನಲ್ ಹಾರ್ಡ್ ಡಿಸ್ಕ್, 1 ಲ್ಯಾಪ್​ಟಾಪ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ಜತೆ ಮತ್ತಷ್ಟು ಜನ ಶಾಮೀಲಾಗಿರುವ ಶಂಕೆಯಿದ್ದು, ಅವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಡಿವೈಎಸ್​ಪಿ ಜಿ.ಟಿ. ನಾಯ್ಕ ಅವರ ಮಾರ್ಗದರ್ಶನದಲ್ಲಿ ಪಿಐ ಸುರೇಶ ಯಳ್ಳೂರು, ಪಿಎಸ್​ಐ ಮಂಜುನಾಥ ಗೌಡರ್, ಸಿಬ್ಬಂದಿ ಗಜಾನನ ನಾಯ್ಕ, ಬಸವರಾಜ ಹಗರಿ, ಮಹಮ್ಮದ್​ಶಫಿ ಶೇಖ್, ನಾಗಪ್ಪ ಲಮಾಣಿ, ಕೃಷ್ಣ ಮಾತ್ರೋಜಿ, ಬಸವರಾಜ ಡಿ.ಕೆ., ವಿನೋದ ರೆಡ್ಡಿ, ಗಿರೀಶ ಲಮಾಣಿ, ಚೆನ್ನಕೇಶವ ಇತರರು ಕಾರ್ಯಾಚರಣೆಯಲ್ಲಿದ್ದರು.

    ವರ್ಷಾ ಸ್ಟುಡಿಯೋದಲ್ಲಿ 65 ನಕಲಿ ಪಾಸ್​ಗಳು ದೊರಕಿವೆ. ಅಲ್ಲಿಂದ ಪಾಸ್​ಗಳನ್ನು ಪಡೆದವರು ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಗೆ ಪಾಸ್​ಗಳನ್ನು ಮರಳಿ ಒಪ್ಪಿಸಬೇಕು. ಇಲ್ಲವಾದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಸ್ ಪಡೆದವರ ಮೇಲೂ ಕ್ರಮ ಕೈಗೊಳ್ಳಲಾಗುವುದು. | ಸುರೇಶ ಯಳ್ಳೂರು ಸಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts