More

    ತುಮಕೂರು ಪಿಯು ಫಲಿತಾಂಶ ಶೇ.62

    ತುಮಕೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆ ಶೇ.62.26 ಫಲಿತಾಂಶಗಳಿಸಿದ್ದು, ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 17ನೇ ಸ್ಥಾನದಲ್ಲಿತ್ತು. ಕುಣಿಗಲ್ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಅಲ್ಮಾಸ್ ಬಾನು ವಿಜ್ಞಾನ ವಿಭಾಗದಲ್ಲಿ (594/600) ರಾಜ್ಯಕ್ಕೆ 3ನೇ ಟಾಪರ್ ಆಗಿ ಹೊರಹೊಮ್ಮಿದ್ದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿತಂದಿದ್ದಾರೆ. ನಗರದ ವಿದ್ಯಾನಿಧಿ ಕಾಲೇಜಿನ ದೀಪ್ತಿ ಎ. (593/600) ರಾಜ್ಯಕ್ಕೆ 4ನೇ ಟಾಪರ್, ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ವಿದ್ಯಾನಿಧಿ ಕಾಲೇಜಿ ಜೆ.ತರುಣ್ (594/600) ರಾಜ್ಯಕ್ಕೆ 4ನೇ ಟಾಪರ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, ಅದೇ ಕಾಲೇಜಿನ ಶ್ರದ್ಧಾಭಟ್ (593/600) ರಾಜ್ಯಕ್ಕೆ 5ನೇ ಹಾಗೂ ಜಿಲ್ಲೆಗೆ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
    23ನೇ ಸ್ಥಾನಕ್ಕೆ ಕುಸಿದ ಜಿಲ್ಲೆ: ಕಳೆದ ಮಾರ್ಚ್ ಹಾಗೂ ಜೂನ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಜಿಲ್ಲೆಯ 23134 ವಿದ್ಯಾರ್ಥಿಗಳ ಪೈಕಿ 14404 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.62.26 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 65.81 ಫಲಿತಾಂಶದೊಂದಿಗೆ 17ನೇ ಸ್ಥಾನಗಳಿಸಿತ್ತು.

    ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 7338 ವಿದ್ಯಾರ್ಥಿಗಳಲ್ಲಿ 5681 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 77.42 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 9990 ವಿದ್ಯಾರ್ಥಿಗಳ ಪೈಕಿ 6449 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 64.55 ಹಾಗೂ ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 5806 ವಿದ್ಯಾರ್ಥಿಗಳ ಪೈಕಿ 2274 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 39.17 ಫಲಿತಾಂಶ ಬಂದಿದೆ.

    ನಗರದ ವಿದ್ಯಾರ್ಥಿಗಳ ಮೇಲುಗೈ: ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದವರಿಗಿಂತ ನಗರ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ನಗರ ಪ್ರದೇಶದ 17501 ವಿದ್ಯಾರ್ಥಿಗಳ ಪೈಕಿ 11284 ವಿದ್ಯಾರ್ಥಿಗಳು(ಶೇ. 64.48) ಹಾಗೂ ಗ್ರಾಮೀಣ ಪ್ರದೇಶದ 5633 ವಿದ್ಯಾರ್ಥಿಗಳ ಪೈಕಿ 3120 ವಿದ್ಯಾರ್ಥಿಗಳು(ಶೇ. 53.39) ಪಾಸಾಗಿದ್ದಾರೆ.
    ಬಾಲಕಿಯರೇ ಮೇಲುಗೈ: ಪರೀಕ್ಷೆಗೆ ಹಾಜರಾಗಿದ್ದ 12415 ಬಾಲಕರ ಪೈಕಿ 6268 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 50.49 ಹಾಗೂ 14690 ಬಾಲಕಿಯರ ಪೈಕಿ 9242 ವಿದ್ಯಾರ್ಥಿನಿಯರು ಪಾಸಾಗಿದ್ದು, ಶೇ. 62.91 ಫಲಿತಾಂಶ ಬಂದಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದಂತಾಗಿದೆ.

    ಕರೊನಾ ಕಾರಣ ಎಂದ ಡಿಡಿಪಿಯು! : ಕರೊನಾ ಭೀತಿಯಿಂದ ಇಂಗ್ಲಿಷ್ ವಿಷಯ ಪರೀಕ್ಷೆ ಮುಂದೂಡಲಾಗಿತ್ತು. 2 ತಿಂಗಳ ಬಳಿಕ ಪರೀಕ್ಷೆ ನಡೆಸಿದ್ದು, ಫಲಿತಾಂಶ ಕುಸಿಯಲು ಕಾರಣ. ಕಳೆದ ವರ್ಷ 17ನೇ ಸ್ಥಾನದಲ್ಲಿದ್ದು, ಈ ವರ್ಷ 23ನೇ ಸ್ಥಾನಗಳಿಸಿದ್ದೇವೆ. ಮುಂದಿನ ವರ್ಷದಲ್ಲಿ ಜಿಲ್ಲೆಯಲ್ಲಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ನರಸಿಂಹಮೂರ್ತಿ ತಿಳಿಸಿದರು.

    ತರುಣ್‌ಗೆ ಸಿಎ ಗುರಿ : ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಟಾಪರ್ ಜೆ.ತರುಣ್ ತುಮಕೂರು ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿ. ಆತನ ಏಕೈಕ ಕನಸು ಚಾರ್ಟ್‌ರ್ಡ್ ಅಕೌಂಟೆಂಟ್ ಆಗುವುದು. ತಂದೆ ಜಿನೇಂದ್ರ ಕುಮಾರ್ ಬೆಸ್ಕಾಂ ಉದ್ಯೋಗಿ. ತಾಯಿ ಬಿ.ಪಿ.ಮಾಲಾ ಎಲ್‌ಐಸಿ ಉದ್ಯೋಗಿ. ಪೋಷಕರು, ಶಿಕ್ಷಕರು, ಕಾಲೇಜಿನ ಆಡಳಿತ ಮಂಡಳಿ ಸಹಕಾರ ನನ್ನೀ ಸಾಧನೆಗೆ ಕಾರಣ ಎನ್ನುವ ತರುಣ್ ಸಾಧನೆ ಹಿಂದೆ ಅಮ್ಮಅಪ್ಪನ ಬೆಂಬಲ, ಪ್ರೋತ್ಸಾಹ ಸದಾ ಇದೆ. ಮನೆಪಾಠಕ್ಕೆ ಹೋದವನಲ್ಲ ತರುಣ್. ಆತ ಪುಸ್ತಕದ ಹುಳುವೂ ಅಲ್ಲ. ಕ್ರಿಕೆಟ್, ಮ್ಯೂಸಿಕ್ ಬಗ್ಗೆಯೂ ಹೆಚ್ಚಿನ ಆಸಕ್ತಿ ಇದೆ. ಜಿಲ್ಲೆಗೆ ಟಾಪರ್.

    ಕಿರಾಣಿ ಅಂಗಡಿ ಷರೀಫ್ ಪುತ್ರಿ ಪಿಯುಸಿ ಟಾಪರ್!: ಕುಣಿಗಲ್: ಪಟ್ಟಣದ ಗುಜ್ಜಾರಿ ಮೊಹಲ್ಲಾ ಬಡಾವಣೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವ ಮಹಮದ್ ಸನಾವುಲ್ಲಾ ಷರ್ೀ ಹಾಗೂ ಫರ್ಜಾನಾಬಾನು ದಂಪತಿ ಪುತ್ರಿ ಅಲ್ಮಾಸ್ ಬಾನು ವಿಜ್ಞಾನ ವಿಭಾಗದಲ್ಲಿ (594/600) ರಾಜ್ಯಕ್ಕೆ 3ನೇ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಅಲ್ಮಾಸ್‌ಬಾನು ತಾಯಿ ಪ್ರಥಮ ಪಿಯುಸಿವರೆಗೆ ಓದಿದ್ದರೆ ತಂದೆ ಶಾಲೆ ಮೆಟ್ಟಿಲು ಹತ್ತಿಲ್ಲ.ಕುಣಿಗಲ್ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಮನೆಪಾಠಕ್ಕೆ ಹೋದವಳಲ್ಲ. ಬಡತನ ಹಿನ್ನೆಲೆಯಲ್ಲೂ ಉತ್ತಮವಾಗಿ ಓದುತ್ತಿದ್ದ ಅಲ್ಮಾಸ್ ಭಾನು ಕಾಲೇಜಿನಲ್ಲಿ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ ಎನಿಸಿದ್ದರು. ವೈದ್ಯಳಾಗುವ ಆಸೆ ಇಟ್ಟುಕೊಂಡಿರುವ ಅಲ್ಮಾಸ್‌ಭಾನುಗೆ ತನ್ನ ಹೆತ್ತ ಅಪ್ಪ, ಅಮ್ಮನಿಗೆ ಆಸರೆಯಾಗುವ ಆಸೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts