More

    ತುಪ್ಪರಿ ಹಳ್ಳಕ್ಕೆ ಪರಿಸರ ಅಧಿಕಾರಿಗಳ ಭೇಟಿ

    ಧಾರವಾಡ: ತುಪ್ಪರಿ ಹಳ್ಳದಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರ ಕಲುಷಿತ ನೀರು ಹಳ್ಳಕ್ಕೆ ಸೇರಿ ಮೀನುಗಳು ಸಾಯುತ್ತಿವೆ ಎಂದು ದೂರಲಾಗಿತ್ತು. ಹೀಗಾಗಿ ಧಾರವಾಡ ಪ್ರಾದೇಶಿಕ ಕಚೇರಿಯ ಸಹಾಯಕ ಪರಿಸರ ಅಧಿಕಾರಿ ಹಾಗೂ ಬೆಳಗಾವಿ ಕಚೇರಿ ಅಧಿಕಾರಿಗಳು ಶಿರೂರ ಗ್ರಾಮಕ್ಕೆ ಭೇಟಿ ನೀಡಿ ಹಳ್ಳದ ನೀರಿನ ಪರೀಕ್ಷೆ ನಡೆಸಿದರು.

    ಹಳ್ಳದಲ್ಲಿ ಸತ್ತಿರುವ ಮೀನುಗಳನ್ನು ಗಮನಿಸಿರುವ ಅಧಿಕಾರಿಗಳು, ಎಷ್ಟು ದಿನಗಳಿಂದ ಈ ರೀತಿಯಾಗುತ್ತಿದೆ ಎಂಬುದು ಸೇರಿ ಅನೇಕ ಮಾಹಿತಿಗಳನ್ನು ಗ್ರಾಮದ ಜನರಿಂದ ಸಂಗ್ರಹಿಸಿದರು. ಬಳಿಕ ಹಳ್ಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಪ್ರದೇಶದಲ್ಲಿನ ನೀರನ್ನು ಪರೀಕ್ಷೆಗಾಗಿ ತೆಗೆದುಕೊಂಡರು. ಈ ನೀರನ್ನು ಬುಧವಾರ ಪ್ರಯೋಗಾಲಯಕ್ಕೆ ನೀಡಲಿದ್ದು, ವರದಿ ಬಂದ ಬಳಿಕವೇ ಮೀನುಗಳ ಸಾವಿಗೆ ಕಾರಣವೇನೆಂದು ತಿಳಿಯಲಿದೆ.

    ಹಳ್ಳಕ್ಕೆ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯಿಂದಲೇ ನೀರು ಬಂದಿರುವ ಸಾಧ್ಯತೆ ಇದೆ. ಈ ಕುರಿತು ಬೆಳಗಾವಿ ಜಿಲ್ಲೆ ಹಿರಿಯ ಅಧಿಕಾರಿಗಳಿಗೂ ಇಲ್ಲಿಯ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಅವರೂ ಕಾರ್ಖಾನೆಗೆ ಭೇಟಿ ನೀಡಿ, ಕಾರ್ಖಾನೆಯಿಂದ ನೀರು ಹೊರ ಬಿಡುವ, ನೀರು ಹರಿದು ಹೋಗುವ ಜಾಗದ ಕುರಿತು ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.

    ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳದ ನೀರನ್ನು ಸಂಗ್ರಹಿಸಲಾಗಿದೆ. ಈ ನೀರನ್ನು ಧಾರವಾಡದ ಪ್ರಯೋಗಾಲಯದಲ್ಲೇ ಪರೀಕ್ಷಿಸಲಾಗುವುದು. ವರದಿ ಬಂದ ಬಳಿಕವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. | ಶೋಭಾ ಪೋಳ, ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts