More

    ತುತ್ತಿಗಾಗಿ ತವರೂರಿನತ್ತ ಹೊರಟ ಶ್ರಮಿಕರು!

    ಹುಬ್ಬಳ್ಳಿ: ಕರೊನಾ ಸೋಂಕಿನ ಭೀತಿಯಿಂದ ಊರು ಬಿಟ್ಟು ತವರು ರಾಜ್ಯಕ್ಕೆ ಮರಳುತ್ತಿರುವ ಕೆಲವರಿಗೆ ಲಾಕ್​ಡೌನ್ ನಂತರ ಮರಳುವ ಆಸೆ. ಇನ್ನೂ ಹಲವರದ್ದು ಇಲ್ಲಿಯ ಸಹವಾಸವೇ ಬೇಡ. ನಮ್ಮೂರಲ್ಲಿಯೇ ಕೂಲಿ ಮಾಡಿ ಬದುಕಿದರೆ ಸಾಕೆಂಬ ನಿರ್ಧಾರ.

    ಲಾಕ್​ಡೌನ್​ನಿಂದಾಗಿ ಕಳೆದ 40 ದಿನಗಳಿಂದ ಕೆಲಸ ಇಲ್ಲದೆ, ಹೊತ್ತೊತ್ತಿನ ಊಟಕ್ಕೂ ಕಷ್ಟಪಟ್ಟು ಕೊನೆಗೆ ತಮ್ಮೂರಿಗೆ ಹೋದರೆ ಸಾಕೆಂಬ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ವಲಸೆ ಕಾರ್ವಿುಕರ ಸಂಕಟದ ಮಾತುಗಳಿವು.

    ಉತ್ತರಪ್ರದೇಶ ಹಾಗೂ ಬಿಹಾರಕ್ಕೆ ರೈಲುಗಳು ಶುಕ್ರವಾರವೇ ಹೊರಡಲಿವೆ ಎಂಬ ಗಾಳಿಸುದ್ದಿಯಿಂದ ಗುರುವಾರ ರಾತ್ರಿಯೇ ಹುಬ್ಬಳ್ಳಿಗೆ ಬಂದ ನೂರಾರು ಜನರು ಭಾನುವಾರದವರೆಗೆ ಇಲ್ಲಿಯೇ ಕಾಯುವ ಅನಿವಾರ್ಯತೆಯಲ್ಲಿದ್ದಾರೆ.

    ನರಗುಂದದಲ್ಲಿ ಹೆದ್ದಾರಿ ಕೆಲಸದಲ್ಲಿ ನಿರತರಾಗಿದ್ದ ಬಿಹಾರ ಮುಜಫ್ಪರಪುರ್ ಜಿಲ್ಲೆಯ ಯೋಗೇಶ ಯಾದವ ಹಾಗೂ ಆತನ 20ಕ್ಕೂ ಹೆಚ್ಚು ಸ್ನೇಹಿತರು ಹುಬ್ಬಳ್ಳಿಗೆ ನಡೆದುಕೊಂಡು ಬಂದಿದ್ದಾರೆ. ಲಾಕ್​ಡೌನ್​ನಿಂದಾಗಿ ಕೆಲಸ ಇಲ್ಲ. ಗುತ್ತಿಗೆದಾರರು ಊಟಕ್ಕೆ ಕೊಡುತ್ತಿದ್ದಾರಾದರೂ, ಕೂಲಿ ಇರಲಿಲ್ಲ. ಕೆಲಸ ಇಲ್ಲದೆ ಖಾಲಿ ಕುಳಿತು ಏನು ಮಾಡುವುದು? ಲಾಕ್​ಡೌನ್ ಮುಗಿಯುವವರೆಗೆ ಊರಿಗೆ ಹೋಗಿ ಕುಟುಂಬದವರನ್ನು ಕಂಡುಬಂದರಾಯಿತೆಂದು ಹೊರಟಿದ್ದೇವೆ ಎಂದರು.

    ಉತ್ತರ ಪ್ರದೇಶ ಮಹರ್​ಜಂಗ್ ಜಿಲ್ಲೆಯ ಅಕ್ಕಪಕ್ಕದ ಹಳ್ಳಿಯವರಾದ ಕಿರಣ ಮಲ್ಹೋತ್ರಾ ಹಾಗೂ ಆತನ ಸ್ನೇಹಿತರು ಬೆಳಗಾವಿಯ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್​ಡೌನ್​ನಿಂದಾಗಿ ಹೋಟೆಲ್​ಗಳು ಮುಚ್ಚಿವೆ. ಹೋಟೆಲ್ ಪುನಃ ತೆರೆಯುವುದರೊಳಗೆ ಮನೆಯವರನ್ನು ಕಂಡುಬರಬೇಕೆಂಬ ಆಶಯ ವ್ಯಕ್ತಪಡಿಸಿದರು.

    ಇನ್ಯಾವತ್ತೂ ಬರುವುದಿಲ್ಲ

    ಇನ್ಯಾವತ್ತೂ ಇತ್ತ ತಲೆ ಹಾಕುವುದಿಲ್ಲ. ಕೂಲಿ ಮಾಡಿಯಾದರೂ ಸರಿ, ನಮ್ಮೂರಲ್ಲಿಯೇ ಬದುಕುತ್ತೇವೆ ಎನ್ನುತ್ತಾರೆ ಬಿಹಾರ ರಾಜ್ಯದ ರ್ದಬಂಗ್ ಜಿಲ್ಲೆಯ ರಾಜೇಸಾಬ ನದಾಫ್ ಕುಟುಂಬದವರು. ಹೊಟ್ಟೆಪಾಡಿಗಾಗಿ ಬಿಹಾರದಿಂದ ಹುಬ್ಬಳ್ಳಿಗೆ ಬಂದಿದ್ದೆವು. ಇಂಡಿಪಂಪ್ ಬಳಿ ಬಾಡಿಗೆ ಮನೆಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಹೋಟೆಲ್, ಬಡಿಗತನ ಇತರ ಕೆಲಸಗಳನ್ನು ಮಾಡಿದ್ದೇವೆ. ಮೇ 4 ರಿಂದ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೇವೆ. ನಮ್ಮನ್ನು ಕೇಳುವವರೂ ಇಲ್ಲದಂತಾಗಿದೆ. ಕಷ್ಟವೋ, ಸುಖವೋ ನಮ್ಮೂರಿಗೆ ತೆರಳಿ ಅಲ್ಲಿಯೇ ಕೂಲಿ ಮಾಡುತ್ತೇವೆ. ಕಷ್ಟ ಬಂದಾಗ ಸಂಬಂಧಿಕರು ಒಂದು ಹೊತ್ತಿನ ಊಟವನ್ನಾದರೂ ನೀಡುತ್ತಾರೆ ಎನ್ನುತ್ತ ಸಂಕಟ ತೋಡಿಕೊಂಡರು.

    ಕಲಘಟಗಿ ಬಳಿಯ ಜಿನ್ನೂರಿನಲ್ಲಿ ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿರುವ ಬಿಹಾರದವರು, ಲಾಕ್​ಡೌನ್ ಮುಗಿದ ನಂತರ ವಾಪಸಾಗುವ ಆಶಯ ವ್ಯಕ್ತಪಡಿಸಿದರು. ಬಿಹಾರದಲ್ಲಿ ನಿರುದ್ಯೋಗದ ಸಮಸ್ಯೆ. ಇಲ್ಲಿ ತಿಂಗಳಿಗೆ 11 ಸಾವಿರ ರೂ. ಸಂಬಳ ನೀಡುತ್ತಾರೆ. ಹೀಗಾಗಿ ಕೆಲಸ ಪ್ರಾರಂಭವಾದ ತಕ್ಷಣ ವಾಪಸಾಗುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts