More

    ತುಂಗೆಯ ಹರಿವಿಗೆ ಅಡಚಣೆ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಭದ್ರಾ ಜಲಾಶಯದಿಂದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗಳಿಗೆ ನೀರು ಹರಿಸುವ ಸಮಯ ಬಂದರೂ ಇಂದಿಗೂ ಕಿರು ಕಾಲುವೆಗಳನ್ನು ಸ್ವಚ್ಛಗೊಳಿಸದ ಕಾರಣ ಈ ಬಾರಿ ರೈತರ ಬೆಳೆಗಳಿಗೆ ಕಾಲುವೆ ನೀರು ಹರಿಯುವುದು ಕಷ್ಟದಾಯಕವಾಗಲಿದೆ.ಈಗಾಗಲೇ ಸರ್ಕಾ ರವು ರೈತರ ಹಿತ ದೃಷ್ಟಿಯಿಂದ ಕಾಲು ವೆಗೆ ನೀರು ಹರಿಸುವ ಭರವಸೆ ನೀಡಿದೆ. ಆದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಲುವೆಗಳನ್ನು ಸ್ವಚ್ಛಗೊಳಿಸಿಲ್ಲ.

    ತುಂಗಾ ಮೇಲ್ದಂಡೆ ಯೋಜನೆಯಿಂದ ತಾಲೂಕಿನ 100ಕ್ಕೂ ಅಧಿಕ ಕಿ.ಮೀ.ನಷ್ಟು ನೀರಿನ ಕಿರು (ಉಪ) ಕಾಲುವೆ ನಿರ್ವಿುಸಲಾಗಿದೆ. ಇವುಗಳಿಗೆ ಮುಖ್ಯ ಕಾಲುವೆಗಳಿಂದ ನೀರು ಹರಿಸಲಾಗುತ್ತದೆ. ಆದರೆ, ಈ ಬಾರಿ ಕಿರು ಕಾಲುವೆ ತುಂಬ ಗಿಡಗಂಟಿಗಳು ಬೆಳೆದು ನೀರು ಹರಿಯದ ಸ್ಥಿತಿ ನಿರ್ವಣವಾಗಿದೆ.

    ತಾಲೂಕಿನ ಇಟಗಿ, ಮುಷ್ಟೂರು, ಮೈದೂರು, ಗುಡಗೂರ, ಅರೇಮಲ್ಲಾಪುರ ಹಾಗೂ ಇತರ ಗ್ರಾಮಗಳಲ್ಲಿನ ಕಾಲುವೆಗಳು ಹನಿ ನೀರೂ ಹರಿಯದ ಸ್ಥಿತಿಯಲ್ಲಿವೆ. ಕೆಲವೆಡೆ ಕಾಲುವೆಗಳನ್ನು ಮುಚ್ಚಿ ರಸ್ತೆ ಮಾಡಲಾಗಿದೆ. ಮತ್ತೆ ಕೆಲವೆಡೆ ರೈತರ ಜಮೀ ನುಗಳ ಬಳಿ ಕಾಲುವೆಗಳು ಸಂಪೂರ್ಣ ಒಡೆದು ಹೋಗಿವೆ. ಹೀಗಾಗಿ, ನೀರು ಹರಿಸಿದರೂ ಪ್ರಯೋಜನವಿಲ್ಲದ ಸ್ಥಿತಿ ನಿರ್ವಣವಾಗಿದೆ.

    ನಿಷ್ಕಾಳಜಿ ತೋರಿದ ಅಧಿಕಾರಿಗಳು: ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ, ಆಗಸ್ಟ್ ತಿಂಗಳಲ್ಲಿ ಭದ್ರಾ ಜಲಾಶಯದಿಂದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗಳಿಗೆ ನೀರು ಹರಿಸುವ ಸಾಧ್ಯತೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಒಡೆದ ಕಾಲುವೆಗಳನ್ನು ದುರಸ್ತಿಪಡಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

    ತುಂಗಾ ಮೇಲ್ದಂಡೆ ಯೋಜನೆ ಕಿರು ಕಾಲುವೆಗಳನ್ನು ಸ್ವಚ್ಛಗೊಳಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯಹಿಸಿದ್ದಾರೆ. ಇದರಿಂದಾಗಿ ಭದ್ರಾ ಜಲಾಶಯದಿಂದ ನೀರು ಹರಿಸಿದರೂ ರೈತರ ಜಮೀನುಗಳಿಗೆ ನೀರು ತಲುಪುವುದು ಕನಸಿನ ಮಾತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನೀರು ಹರಿಸುವ ಮುನ್ನವೇ ಕಾಲುವೆಗಳ ಸ್ವಚ್ಛತೆಗೆ ಮುಂದಾಗಬೇಕು. ಇಲ್ಲವಾದರೆ ಯುಟಿಪಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು.
    | ರವೀಂದ್ರಗೌಡ ಪಾಟೀಲ, ರೈತ ಮುಖಂಡ

    ಕಾಲುವೆಗಳನ್ನು ಸ್ವಚ್ಛಗೊಳಿಸುವ ಬಗ್ಗೆ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಆಯಾ ಇಲಾಖೆ ಇಂಜಿನಿಯರ್​ಗೆ ಸೂಚಿಸಿ, ನೀರು ಹರಿಸುವ ಮೊದಲೇ ಕಾಲುವೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
    | ಎಸ್.ಎಂ. ಕಾಂಬಳೆ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts