More

    ತುಂಗಾ ಸೇತುವೆ ದುರಸ್ತಿ ಕಾರ್ಯ ಪುನರಾರಂಭ

    ಶಿವಮೊಗ್ಗ: ಶಿವಮೊಗ್ಗದಲ್ಲಿ ತುಂಗಾ ನದಿಗೆ 1878ರಲ್ಲಿ ನಿರ್ವಿುಸಿದ ಸೇತುವೆ ಶಿಥಿಲಗೊಂಡಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಸೇತುವೆಯ ಕ್ಷಮತೆ ಹೆಚ್ಚಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಸೇತುವೆಯ ಬಿರುಕಿನಲ್ಲಿ ಬೆಳೆದಿರುವ ಗಿಡ, ಗಂಟಿಗಳನ್ನು ಸ್ವಚ್ಛಗೊಳಿಸಿ ರಾಸಾಯನಿಕ ಸಿಂಪಡಿಸಿ, ಗಿಡದ ಬೇರನ್ನು ನಾಶಪಡಿಸಿ ಪುನಃ ಆ ಬಿರುಕಿನಲ್ಲಿ ಯಾವುದೇ ಸಸ್ಯಗಳು ಬೆಳೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

    ಕಳೆದ ವರ್ಷ ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಯಿಂದ ತುಂಗಾ ನದಿಯಲ್ಲಿ ಇನ್ನಿಲ್ಲದ ಪ್ರವಾಹ ಎದುರಾದ ಸಂದರ್ಭದಲ್ಲಿ ಸೇತುವೆಯ ಅಂಚಿನ ರಸ್ತೆ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ ಜಿಲ್ಲಾಡಳಿತ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿತ್ತು. ಸೇತುವೆಯ ಎರಡೂ ತುದಿಗಳಲ್ಲಿ ಕಬ್ಬಿಣದ ಕಮಾನು ಅಳವಡಿಸಿ ಭಾರಿ ಗಾತ್ರದ ವಾಹನಗಳು ಈ ಸೇತುವೆ ಮೇಲೆ ಸಂಚರಿಸದಂತೆ ಕಟ್ಟೆಚ್ಚರ ವಹಿಸಿತ್ತು.

    ಈಗ ಸೇತುವೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸೇತುವೆ ಮೇಲೆ ಪಾದಚಾರಿಗಳು ಮಾತ್ರ ಸಂಚರಿಸಬಹುದಾಗಿದೆ. ವಾಹನಗಳ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. 45 ದಿನಗಳ ಕಾಲ ಲಾಕ್​ಡೌನ್ ಘೊಷಣೆಯಾದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಲಾಕ್​ಡೌನ್ ತೆರವುಗೊಂಡಿದ್ದು ಸೇತುವೆ ದುರಸ್ತಿ ಕಾರ್ಯ ಆರಂಭಗೊಂಡಿದೆ.

    1.50 ಕೋಟಿ ರೂ. ವೆಚ್ಚ: ಸೇತುವೆ ಇನ್ನಷ್ಟು ವರ್ಷ ಬಾಳಿಕೆ ಬರುವಂತೆ ಮಾಡಲು ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸಿದ್ದು, 1.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. ಬ್ರಿಟಿಷರ ಕಾಲದಲ್ಲಿ ನಿರ್ವಿುಸಿರುವ ಈ ಸೇತುವೆ 150ರ ಸನಿಹದಲ್ಲಿದೆ. ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸಿದರೂ ಸೇತುವೆಯ ಕ್ಷಮತೆಯಲ್ಲಿ ಬಹಳ ವ್ಯತ್ಯಾಸವಾಗಿಲ್ಲ.

    ಸೇತುವೆ ನಿರ್ವಣದ ಬಗ್ಗೆ: 1878ರಲ್ಲಿ ಈ ಸೇತುವೆಯನ್ನು 53.38 ಮೀ. ಎತ್ತರ, 761.25 ಅಡಿ ಉದ್ದ, 26.65 ಮೀ. ಅಗಲ ವಿಸ್ತೀರ್ಣದಲ್ಲಿ ನಿರ್ವಿುಸಲಾಗಿತ್ತು. ಇದಕ್ಕಾಗಿ ಸೈಜುಗಲ್ಲು, ಸುಣ್ಣದ ಕಲ್ಲು, ಬೆಲ್ಲ ಮರಳು ಇತ್ಯಾದಿ ಸಾಮಗ್ರಿ ಬಳಸಲಾಗಿದೆ ಎನ್ನುತ್ತಾರೆ ತಂತ್ರಜ್ಞರು. ಸೇತುವೆ ಒಟ್ಟು 15 ಪಿಲ್ಲರ್​ಗಳ ಮೇಲೆ ನಿಂತಿದೆ. ಅಲ್ಲದೆ 15 ಕಮಾನುಗಳಿವೆ. ಪ್ರತಿಯೊಂದು ಕಮಾನು 53.13 ಅಡಿ ಅಗಲವಿದೆ. ಕೆಂಪು ಇಟ್ಟಿಗೆ ಹಾಗೂ ಗಾರೆಯಿಂದ ಇದನ್ನು ನಿರ್ವಿುಸಲಾಗಿದೆ. ಇಷ್ಟು ವರ್ಷ ಕಳೆದರೂ ಇದು ಗಟ್ಟಿಯಾಗಿರುವುದು ವಿಶೇಷ ಎನ್ನುತ್ತಾರೆ ತಂತ್ರಜ್ಞರು.

    ಕಾಮಗಾರಿಗಳ ವಿವರ: ಸೇತುವೆಯ ಆಧಾರ ಸ್ತಂಭದ ಗಾರೆಯು ಕೆಲವು ಕಡೆ ಉದುರಿ ಹೋಗಿದ್ದು, ಇಟ್ಟಿಗೆ ಕಾಣುತ್ತಿದೆ. ಮತ್ತೆ ನೀರು ಹೆಚ್ಚಾದರೆ ಈ ಇಟ್ಟಿಗೆಗಳು ಕರಗಿ ಪಿಲ್ಲರ್​ಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಇಡೀ ಸೇತುವೆಯೇ ಅಪಾಯದ ಹಂತ ತಲುಪಲಿದೆ. ಈ ಹಿನ್ನೆಲೆಯಲ್ಲಿ ಪಿಲ್ಲರ್​ಗಳನ್ನು ರಕ್ಷಿಸಲು ಪಿಲ್ಲರ್​ಗಳಿಗೆ ಕಬ್ಬಿಣದ ಮೆಷ್ ಹಾಗೂ ಜಾಕೆಟ್​ಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಪಿಲ್ಲರ್ ಸುತ್ತಲೂ ಕಬ್ಬಿಣದ ಮೆಶ್ ರಚಿಸಿ ಅದಕ್ಕೆ ಮೈಕ್ರೋ ಕಾಂಕ್ರೀಟ್ ಹಾಕಿ ಮುಚ್ಚಲಾಗುತ್ತಿದೆ. ಸೇತುವೆ ತಳಭಾಗಕ್ಕೆ ಹೊಸ ತಂತ್ರಜ್ಞಾನದ ಮೂಲಕ ಗಾರೆ ಮಾಡಲಾಗುತ್ತಿದೆ.

    ಕುಂದಾಪುರದ ಫಿಲಿಪ್ ಡಿಕೊಸ್ಟಾ ಆಂಡ್ ಕಂಪನಿಯವರಿಗೆ ಕಾಮಗಾರಿ ಟೆಂಡರ್ ನೀಡಲಾಗಿದೆ. ಪ್ರತಿದಿನ 70ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್​ನಲ್ಲೇ ಕಾಮಗಾರಿ ಮುಗಿಸುವ ಗುರಿಯಿತ್ತು. ಆದರೆ ಲಾಕ್​ಡೌನ್​ನಿಂದ ಕಾಮಗಾರಿ ನಿಗದಿತ ಸಮಯದಲ್ಲಿ ಮುಕ್ತಾಯವಾಗಿಲ್ಲ. ಮಳೆಗಾಲ ಆರಂಭದೊಳಗೆ ಕಾಮಗಾರಿ ಮುಗಿಸುವ ದೃಷ್ಟಿಯಿಂದ ಭರದಿಂದ ಕಾರ್ಯನಿರ್ವಹಿಸಲಾಗುತ್ತಿದೆ.

    ಇದು ಶತಮಾನದ ಸೇತುವೆ. ಸಣ್ಣಪುಟ್ಟ ಹಾನಿಗಳನ್ನು ಮೈಕ್ರೋ ಕಾಂಕ್ರಿಟ್ ಬಳಕೆ ಮೂಲಕ ಸರಿಪಡಿಸಲಾಗುತ್ತಿದೆ. ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಮುಗಿಯಬೇಕಿತ್ತು. ಈಗ ಕೈಗೊಂಡಿರುವ ದುರಸ್ತಿ ಕಾರ್ಯದಿಂದ ಸೇತುವೆ ಇನ್ನೂ 20 ವರ್ಷ ಬಳಕೆಗೆ ಬರಲಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಕಿರಣ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts