More

    ತೀರ್ಥಹಳ್ಳಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ; ಮನಸೆಳೆದ ಮಕ್ಕಳ ಸಾಹಿತ್ಯ ಸಮ್ಮೇಳನ

    ತೀರ್ಥಹಳ್ಳಿ: ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಇದ್ದು, ಶಿಕ್ಷಣದಿಂದ ಇದನ್ನು ದೂರ ಮಾಡುವ ಪ್ರಯತ್ನ ಆಗಬೇಕಿದೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚಿರಾಗ್ ಪಟವರ್ಧನ್ ಹೇಳಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಣ ಇಲಾಖೆ, ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ತಾಲೂಕು ಜಾನಪದ ಪರಿಷತ್‌ನಿಂದ ಪಟ್ಟಣದ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 5ನೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಮನುಕುಲಕ್ಕೆ ಮಾರಕವಾಗಿರುವ ಮೌಢ್ಯವನ್ನು ತೊಡೆದುಹಾಕಿ ಪ್ರತಿಯೊಂದು ವಿಚಾರವನ್ನೂ ವೈಚಾರಿಕ ದೃಷ್ಟಿಕೋನದಿಂದ ನೋಡುವ ಪರಿಪಾಠವನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
    ಸಂಸ್ಕಾರಯುತ ಶಿಕ್ಷಣದ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಬಾಲಾಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ. ಅದರಲ್ಲೂ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದು, ಅಪಾಯಕಾರಿ ಹಂತ ತಲುಪಿರುವ ಮೊಬೈಲ್ ಬಳಕೆಗೆ ಕಡಿವಾಣ ಹಾಕುವುದು ಅಗತ್ಯ. ಹಿಂಸೆ, ಕ್ರೌರ್ಯ ಮಾದಕ ವ್ಯಸನ, ಕೀಳು ಅಭಿರುಚಿ ಬೆಳೆಯುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ. ಹೀಗಾಗಿ ಮಕ್ಕಳಿಗೆ ಚಿಕ್ಕಂದಿನಲ್ಲೇ ಉತ್ತಮ ಮಾರ್ಗದರ್ಶನ ನೀಡಿ, ಸಂಸ್ಕಾರ ಮೂಡಿಸುವ ಹೊಣೆಗಾರಿಕೆ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದರು.
    ಕನ್ನಡ ಭಾಷೆಯ ಜ್ಞಾನ ದೀವಿಗೆ ಬೆಳಗಿದ ಸಾಹಿತಿಗಳ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ವಿನಯ, ವಿಧೇಯತೆ ಮೈಗೂಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಂತೆ ಶಿಸ್ತಿನ ಸಿಪಾಯಿಗಳಾಗಿ ಉತ್ತಮ ಜೀವನ ರೂಪಿಸಿಕೊಂಡು ಭವ್ಯ ಭಾರತದ ಹೆಮ್ಮೆಯ ಪ್ರಜೆಗಳಾಗೋಣ ಎಂದು ಅಶಿಸಿದರು.
    ಸಭಾ ಕಾರ್ಯಕ್ರಮದ ನಂತರ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕಥೆ, ಕವನ ವಾಚನ ಮತ್ತು ಪ್ರಬಂಧ ಮಂಡನೆ ಮಾಡಿದರು. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಸಮೂಹ ಗಾಯನದಲ್ಲಿ ಪಾಲ್ಗೊಂಡಿದ್ದರು.
    ಬೌದ್ಧಿಕ ವಿಕಾಸಕ್ಕೆ ಪೂರಕವಾಗಿಲ್ಲ ಶಿಕ್ಷಣ:  ಪ್ರಸ್ತುತ ನಾವು ಕಲಿಯುತ್ತಿರುವ ಶಿಕ್ಷಣ ನಮ್ಮ ಆಸಕ್ತಿ, ಭವಿಷ್ಯಕ್ಕೆ ಪೂರಕವಾಗಿರದೆ ಕೇವಲ ಅಂಕ ಗಳಿಕೆಗಾಗಿ ಓದುವ ಅನಿವಾರ್ಯತೆ ಇದೆ ಎಂದು ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ.ಪಿ.ದೀಪ್ತಿ ಹೇಳಿದರು.
    ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆ ನಮ್ಮ ಬೌದ್ಧಿಕ ವಿಕಾಸಕ್ಕೂ ವಿರುದ್ಧವಾಗಿದೆ. ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾದ ಮತ್ತು ಸಾಹಿತ್ಯಕ್ಕೆ ಪೂರಕವಾದ ವಿಚಾರಗಳು ಇರಬೇಕು. ಇಂಗ್ಲಿಷ್ ಮಾತನಾಡಿದರೆ ಮಾತ್ರ ಸ್ಟಾೃಂಡರ್ಡ್ ಎಂಬ ಭಾವನೆ ಹೆಚ್ಚಿನವರಲ್ಲಿ ಇರುವುದು ಬೇಸರದ ಸಂಗತಿ. ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಯೋಣ. ಮಾತೃಭಾಷೆಯನ್ನು ಮರೆತು ಕನ್ನಡಿಗರಾದ ನಾವೇ ತಾಯ್ನಡಿಗೆ ವಂಚನೆ ಮಾಡಬಾರದು ಎಂದರು.
    16ನೇ ಶತಮಾನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತೀರ್ಥಹಳ್ಳಿ ತಾಲೂಕಿನ ಕೊಡುಗೆ ಅಪಾರವಾಗಿದೆ. ತಂಜಾವೂರಿನ ಆಸ್ಥಾನ ವಿದ್ವಾಂಸರಾದವರಿದ್ದಾರೆ. ಯಕ್ಷಗಾನ ಕಲೆಯ ಶ್ರೇಷ್ಠತೆಗೆ ಪೂರಕವಾಗಿ 50ಕ್ಕೂ ಹೆಚ್ಚು ಅತ್ಯಂತ ಜನಪ್ರಿಯವಾದ ಪೌರಾಣಿಕ ಪ್ರಸಂಗಗಳನ್ನು ಬರೆದು ಕೊಟ್ಟವರು ಸ್ವರ್ಗೀಯರಾದ ಹಲಸಿನಹಳ್ಳಿ ನರಸಿಂಹಶಾಸ್ತ್ರಿಗಳು. ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಗೌರವ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು, ಇನ್ನೋರ್ವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್.ಅನಂತಮೂರ್ತಿ, ಡಾ. ಹಾಮಾ ನಾಯಕ, ಎಂ.ಕೆ.ಇಂದಿರಾ ಮುಂತಾದವರು ನಮ್ಮ ತಾಲೂಕಿನವರಾಗಿದ್ದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
    ಹಿಂದಿ ಭಾಷೆಯೇ ಏಕೆ?: ಇಂಗ್ಲಿಷ್ ಮಾಧ್ಯಮದ ಸರಕನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರ ಬಗ್ಗೆ ಪಾಲಕರು ಚಿಂತನೆ ನಡೆಸುವ ಅಗತ್ಯವಿದೆ. ಉದ್ಯೋಗ ಭರವಸೆ ಮತ್ತು ಅನ್ನ ಕೊಡುವ ಶಿಕ್ಷಣದ ಹೆಸರಿನಲ್ಲಿ ಪಾಲಕರ ಆತ್ಮವಿಶ್ವಾಸವನ್ನೇ ಅಡಗಿಸುವ ಯತ್ನ ನಡೆಯುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು. ಈ ನೆಲದಲ್ಲಿ ಕನ್ನಡ ಭಾಷೆಯೇ ಬಾರದ ಮಕ್ಕಳಿದ್ದಾರೆ. ವೈವಿಧ್ಯತೆಯ ಈ ದೇಶದಲ್ಲಿ ಒಂದು ಭಾಷೆ ಮತ್ತು ಒಂದು ಧರ್ಮ ಅಸಾಧ್ಯ. 1,900 ಭಾಷೆಗಳಿರುವ ಈ ದೇಶದಲ್ಲಿ ಹಿಂದಿ ಭಾಷೆಯೇ ಯಾಕೆ ರಾಷ್ಟ್ರಭಾಷೆಯಾಗಬೇಕು ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts