More

    ತಿಂಗಳಲ್ಲಿ 433 ಜನರಿಗೆ ಸೋಂಕು

    ಹಾವೇರಿ: ಜಿಲ್ಲೆಯಲ್ಲಿ ಇದೀಗ ಕರೊನಾ ವೈರಸ್ ಹರಡುವಿಕೆ ಡೇಂಜರ್ ಸ್ಥಿತಿಗೆ ತಲುಪುತ್ತಿದೆ. ಮಳೆಗಾಲ ಆರಂಭದವರೆಗೆ ಅಲ್ಪ ಪ್ರಮಾಣದಲ್ಲಿದ್ದ ಸೋಂಕು ಒಂದು ತಿಂಗಳ ಅವಧಿಯಲ್ಲಿ 433 ಜನರಿಗೆ ಹರಡಿ ಕರಾಳತೆಯ ಮುನ್ಸೂಚನೆ ನೀಡಿದೆ.

    ಜೂನ್ 19ರ ವರೆಗೆ ಕೇವಲ 26 ಜನರಿಗೆ ಹರಡಿದ್ದ ಸೋಂಕು ಜುಲೈ 19ರ ವೇಳೆಗೆ ವೇಗವಾಗಿ ವಿಸ್ತರಿಸಿ 459 ಜನರಿಗೆ ಹರಡಿದೆ. ಮೇ 3ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಅಲ್ಲಿಂದ ಜೂ. 19ರವರೆಗೆ ಕೇವಲ 26 ಜನರಿಗೆ ಹರಡಿದ್ದ ವೈರಸ್ ಮಂದಗತಿಯಲ್ಲಿಯೇ ಸಾಗಿತ್ತು. ಯಾವಾಗ ಜಿಲ್ಲೆಯಲ್ಲಿ ಮಳೆಗಾಲ ಜೋರಾಯಿತೋ ಕರೊನಾ ಮಹಾಮಾರಿಯ ಹರಡುವಿಕೆಯೂ ಜೋರಾಯಿತು.

    18 ದಿನದಲ್ಲಿ ನಾಲ್ಕು ಪಟ್ಟು ಏರಿಕೆ: ಜುಲೈ 1ರವರೆಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 118ರಷ್ಟಿತ್ತು. ಜು. 2ರಿಂದ ಆರಂಭಗೊಂಡ ವೈರಸ್ ಅಟ್ಟಹಾಸ ಅಲ್ಲಿಂದ ಪ್ರತಿದಿನ ಹರಡಲು ಆರಂಭಿಸಿತು. ಜು. 2ರಿಂದ 13ರ ವರೆಗೆ ಪ್ರತಿದಿನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಹೋದವು. ಜು. 14ರಂದು ಬಿಡುವು ಕೊಟ್ಟಿತ್ತು. ಆದರೆ, ಜುಲೈ 15ರಿಂದ ಮತ್ತೆ ಸರಣಿ ಆರಂಭಗೊಂಡು 19ರವರೆಗೆ 151 ಜನರಿಗೆ ಸೋಂಕು ದೃಢಪಟ್ಟು ನಾಲ್ಕು ದಿನದಲ್ಲಿ ಮಹಾಸ್ಪೋಟವೇ ಆಯಿತು. ಅದರಲ್ಲಿಯೂ ಜು. 17ರಂದು 56, 19ರಂದು 54 ಜನರಿಗೆ ಸೋಂಕು ತಗುಲಿ ಒಂದೇ ದಿನ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ ದಾಖಲೆಯಾಯಿತು. ಜು. 2ರಿಂದ 19ರವರೆಗಿನ 18 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕು ಪಟ್ಟು ಏರಿಕೆಯಾಯಿತು.

    ಎಚ್ಚರಿಕೆ ವಹಿಸದಿದ್ದರೇ ಆಪತ್ತು : ಸದ್ಯ ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡುವಿಕೆಯ ಪ್ರಮಾಣವನ್ನು ಗಮನಿಸಿದರೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಕರೊನಾ ವೈರಸ್ ನಿಯಂತ್ರಣಕ್ಕೆ ಲಾಕ್​ಡೌನ್ ಮದ್ದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಆದರೆ, ಸರ್ಕಾರ ಲಾಕ್​ಡೌನ್ ಘೊಷಣೆಯೊಂದೇ ಪರಿಹಾರವಲ್ಲ ಎಂದು ಲಾಕ್​ಡೌನ್ ಘೊಷಣೆಗೆ ಮೀನಾಮೇಷ ಏಣಿಸುತ್ತಿದೆ. ಜಿಲ್ಲೆಯ ಕೆಲವೆಡೆ ಜನರೇ ಮಹಾಮಾರಿ ಹರಡುವಿಕೆಯನ್ನು ಗಮನಿಸಿ ಸ್ವಯಂ ಲಾಕ್​ಡೌನ್​ಗೆ ಮುಂದಾಗಿದ್ದಾರೆ. ಆದರೆ, ಅದು ಎಲ್ಲೆಡೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಹೀಗಾಗಿ ಎಚ್ಚರಿಕೆ ವಹಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಆಸ್ಪತ್ರೆಗಳಲ್ಲಿಯೂ ಬೆಡ್​ಗಳು ಸಿಗದ ಸ್ಥಿತಿ ನಿರ್ವಣವಾಗಬಹುದು.

    ಜಿಲ್ಲೆಯಲ್ಲಿ ಕೇವಲ 180 ಬೆಡ್​ಗಳು: ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 18ರಿಂದ 20 ಜನರಲ್ಲಿ ಸೋಂಕು ಕಂಡುಬರುತ್ತಿದೆ. ಆದರೆ, ಅವರಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಕೇವಲ 180 ಬೆಡ್​ಗಳು ಮಾತ್ರ ಇವೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 75, ರಾಣೆಬೆನ್ನೂರ ಆಸ್ಪತ್ರೆಯಲ್ಲಿ 30, ಹಿರೇಕೆರೂರ 30, ಸವಣೂರ ಆಸ್ಪತ್ರೆಯಲ್ಲಿ 45 ಬೆಡ್​ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 156 ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಬೆಡ್ ಸಿಕ್ಕಿವೆ. ಮುಂದೆ ಸೋಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿದಂತೆ ಚಿಕಿತ್ಸೆಗೆ ಬೆಡ್​ಗಳು ಸಿಗದ ಸ್ಥಿತಿ ನಿರ್ವಣವಾಗಬಹುದು. ಹೀಗಾಗಿ ಪಾಸಿಟಿವ್ ಬಂದರೂ ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದವರನ್ನು ಆಸ್ಪತ್ರೆಯ ಬದಲು ಕೋವಿಡ್ ಕೇರ್ ಸೆಂಟರ್​ನಲ್ಲಿಡಲು ಆರೋಗ್ಯ ಇಲಾಖೆ ಮುಂದಾಗಿದೆ. ಅದಕ್ಕಾಗಿ ಹಾವೇರಿ ತಾಲೂಕಿನ ಬಸಾಪುರ, ರಾಣೆಬೆನ್ನೂರ ನಗರ, ಹಾನಗಲ್ಲ ತಾಲೂಕು ಕಲಕೇರಿ, ಹಿರೇಕೆರೂರ ತಾಲೂಕು ದೂದಿಹಳ್ಳಿಯ ಸರ್ಕಾರಿ ವಸತಿ ನಿಲಯಗಳಲ್ಲಿ ತಲಾ 50 ಬೆಡ್​ಗಳ ಕೋವಿಡ್ ಸೆಂಟರ್ ನಿರ್ವಿುಸಿದೆ. ಇಲ್ಲಿ ಒಟ್ಟು 200 ಜನರನ್ನು ದಾಖಲಿಸಬಹುದಾಗಿದೆ.

    ಬೇಕಾಬಿಟ್ಟಿ ನಿರ್ಣಯ ಕಾರಣವಾಯಿತೇ: ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡಲು ಆರೋಗ್ಯ ಇಲಾಖೆಯ ಕೆಲವು ನಿರ್ಣಯಗಳು ಕಾರಣವಾಗುತ್ತಿವೆ ಎಂಬ ಸಂಶಯ ಮೂಡತೊಡಗಿದೆ. ಸೋಂಕು ಕಂಡು ಬಂದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿ ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗುತ್ತದೆ. ಆದರೆ, ಸ್ವ್ಯಾಬ್ ಟೆಸ್ಟ್ ವರದಿ ಕೆಲವೊಮ್ಮೆ ವಾರಗಟ್ಟಲೇ ಬರುವುದೇ ಇಲ್ಲ. ಅಲ್ಲದೆ, ವರದಿ ಬರುವ ಮುನ್ನವೇ ಕ್ವಾರಂಟೈನ್​ನಲ್ಲಿದ್ದವರನ್ನು ಮನೆಗೆ ಕಳಿಸಲಾಗುತ್ತಿದೆ. ಅವರು ಮನೆಗೆ ಹೋದ ನಂತರ ಪಾಸಿಟಿವ್ ವರದಿ ಬರುತ್ತವೆ. ನಂತರ ಮತ್ತೆ ಅವರನ್ನು ಆಸ್ಪತ್ರೆಗೆ ಕರೆ ತರುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಇದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡಲು ಆರೋಗ್ಯ ಇಲಾಖೆಯೇ ಪರೋಕ್ಷವಾಗಿ ಕಾರಣವಾಗುತ್ತದೆ ಎಂಬ ದೂರುಗಳು ಕೇಳಿಬರತೊಡಗಿವೆ.

    ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ 180 ಬೆಡ್​ಗಳಿವೆ. ಪಾಸಿಟಿವ್ ಬಂದಿದ್ದರೂ ರೋಗದ ಯಾವುದೇ ಲಕ್ಷಣಗಳಿದ್ದವರನ್ನು ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾನಗಲ್ಲನಲ್ಲಿಯೂ ಕೋವಿಡ್ ಆಸ್ಪತ್ರೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.| ಡಾ. ರಾಜೇಂದ್ರ ದೊಡ್ಡಮನಿ, ಡಿಎಚ್​ಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts