More

    ತಾಲೂಕು ಆಡಳಿತದ ವಿರುದ್ಧ ಆರೋಪಗಳ ಸುರಿಮಳೆ

    ಶ್ರೀರಂಗಪಟ್ಟಣ: ಲೋಕಾಯುಕ್ತ ಪೊಲೀಸ್ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜನರಿಂದ ಮನವಿ ಸಲ್ಲಿಕೆ ಜತೆಗೆ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಬುಧವಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿ.ಜೆ.ಸಜಿತ್, ಉಪ ಅಧೀಕ್ಷಕ ಎಚ್.ಟಿ.ಸುನೀಲ್‌ಕುಮಾರ್, ಇನ್ಸ್‌ಪೆಕ್ಟರ್ ಆರ್.ಎಂ.ಮೋಹನ್‌ರೆಡ್ಡಿ ನೇತೃತ್ವದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ತಹಸೀಲ್ದಾರ್ ವಿರುದ್ಧ್ದ 12, ಎಡಿಎಲ್‌ಆರ್ ವಿರುದ್ಧ 2, ಸಬ್‌ರಿಜಿಸ್ಟ್ರಾರ್ ವಿರುದ್ಧ 2, ಅರಣ್ಯ ಇಲಾಖೆ ವಿರುದ್ಧ 1, ಬಿಇಒ ವಿರುದ್ಧ 1, ತಾಪಂ ಇಒ ವಿರುದ್ಧ 1 ದೂರು ಸೇರಿದಂತೆ ಒಟ್ಟು 20 ದೂರುಗಳು ಸಲ್ಲಿಕೆಯಾಗಿವೆ.

    ತಾಲೂಕು ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿ ಕ್ಷೇತ್ರದ ಜನರಿಗೆ ಸಕಾಲಕ್ಕೆ ಪೌತಿ ಖಾತೆ ಮಾಡಿಕೊಡಲು ಸತಾಯಿಸುವುದು, ಸಾಗುವಳಿ ಚೀಟಿ ನೀಡಲು ಅಲೆದಾಡಿಸುವುದು, ರೈತರ ಜಮೀನುಗಳ ಸರ್ವೇ ಸ್ಕೆಚ್ ವಿಚಾರದಲ್ಲಿ ದಲ್ಲಾಳಿಗಳ ಹಸ್ತಕ್ಷೇಪ ಮಾಡಿಸುವ ಜತೆಗೆ ಅವರ ಮೂಲಕವೇ ಲಂಚಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೆಲಸ ವಿಳಂಬ ಮಾಡಲಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಮಧ್ಯವರ್ತಿ ಇಲ್ಲದೆ ಜನರ ಕೆಲಸವನ್ನು ಮಾಡಿಕೊಡುವುದಿಲ್ಲ. ತಹಸೀಲ್ದಾರ್ ಭೇಟಿಗೆ ಬಂದರೆ ಸಿಗುವುದಿಲ್ಲ ಸಾರ್ವಜನಿಕರು ದೂರಿದರು.

    ತಾಲೂಕಿನ ಅರಕೆರೆ ಗ್ರಾಮದ ಬಂದೀಗೌಡ ಮಾತನಾಡಿ, ತಾಲೂಕು ಕಚೇರಿಯಲ್ಲಿ ಅಣ್ಣ, ತಮ್ಮಂದಿರ ಆಸ್ತಿಗಳ ಪತ್ರಗಳಲ್ಲಿ ಪ್ರತ್ಯೇಕವಾಗಿ ಇಂಡೀಕರಣ ಮಾಡದೆ ನಿರ್ಲಕ್ಷೃ ವಹಿಸಿದ್ದಾರೆ. ಇದರಿಂದ ಆಸ್ತಿ ವ್ಯಾಜ್ಯಗಳಲ್ಲಿ ಸಮಸ್ಯೆ ಉಂಟಾಗಿದೆ. ಭೂಮಿ ಶಾಖೆಯಲ್ಲಿ ಸಿಬ್ಬಂದಿ ದಾಖಲೆಗಳಲ್ಲಿ ಸಾಕಷ್ಟು ಎಡವಟ್ಟು ಮಾಡಿರುವುದರಿಂದ ತಿದ್ದುಪಡಿಗಾಗಿಯೇ ನಿತ್ಯ ಅಲೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಸಂಧ್ಯಾ ಸುರಕ್ಷಾ ಯೋಜನೆ ದುರ್ಬಳಕೆ: ಸಂಧ್ಯಾ ಸುರಕ್ಷ್ಷಾ ಯೋಜನೆಗೆ ಅರ್ಹರಲ್ಲದ ವ್ಯಕ್ತಿಗಳನ್ನು ಫಲಾನುಭವಿಗಳನ್ನಾಗಿಸಿ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ರೈತ ಹೋರಾಟಗಾರ ಕಿರಂಗೂರು ಪಾಪು ಒತ್ತಾಯಿಸಿದರು.

    ತಾಲೂಕು ಕಚೇರಿ ಕಟ್ಟಡದಲ್ಲಿ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಚುನಾವಣೆ ಶಾಖೆ, ಪ್ರಮುಖ ದಾಖಲೆಗಳಿರುವ ಕೊಠಡಿ, ಸಬ್‌ರಿಜಿಸ್ಟ್ರಾರ್ ಕಚೇರಿಯ ಸುರಕ್ಷತೆಯಲ್ಲಿ ನಿರ್ಲಕ್ಷೃ ವಹಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಬ್ರೋಕರ್‌ಗಳೇ ತಾಲೂಕು ಆಡಳಿತದ ಅಧಿಕಾರಿ, ಸಿಬ್ಬಂದಿಗಿಂತ ನೇರವಾಗಿ ಈ ಕಚೇರಿ ಕೆಲಸ ನಿರ್ವಹಣೆ ಹಾಗೂ ದಾಖಲೆಗಳ ಪರಿಶೀಲನೆಯಲ್ಲಿ ಆವರಿಸಿಕೊಂಡಿದ್ದಾರೆ ಎಂದು ದೂರಿದರು.
    ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ನೀಡಿರುವ ದೂರುಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ತ್ವರಿತವಾಗಿ ಉತ್ತರಿಸುವಂತೆ ಸೂಚಿಸಲಾಗುವುದು. ಜನರ ಸಮಸ್ಯೆ ಬಗೆಹರಿಸಲು ಇಲಾಖೆಯಿಂದ ಕ್ರಮವಹಿಸುದಾಗಿ ಲೋಕಾಯುಕ್ತ ಅಧೀಕ್ಷಕರು ತಿಳಿಸಿದರು.

    ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಅಧೀಕ್ಷಕ ವಿ.ಜೆ.ಸುಜಿತ್, ಉಪ ಅಧೀಕ್ಷಕ ಎಚ್.ಟಿ.ಸುನೀಲ್‌ಕುಮಾರ್, ಇನ್ಸ್‌ಪೆಕ್ಟರ್ ಆರ್.ಎಂ.ಮೋಹನ್ ಅವರು, ಆಸ್ಪತ್ರೆಯ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಕಲ್ಪಿಸಿರುವ ಸೌಲಭ್ಯಗಳು, ಸ್ವಚ್ಛತೆ ಹಾಗೂ ವೈದ್ಯಕೀಯ ಸಿಬ್ಬಂದಿ ಸೇವಾ ಸ್ಪಂದನೆ ಕುರಿತು ಪರಿಶೀಲಿಸಿ, ಸಾರ್ವಜನಿಕರಿಮದ ಮಾಹಿತಿ ಪಡೆದರು. ಈ ವೇಳೆ ಸಿಬ್ಬಂದಿ ಮಹದೇವಸ್ವಾಮಿ, ಮಾನಸಾ, ನಂದೀಶ್, ಮನು, ಮಹದೇವ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts