More

    ತಾಪಂನಲ್ಲಿ ಪ್ರಭಾರಿಗಳ ದರ್ಬಾರ್

    ಇಂದುಧರ ಹಳಕಟ್ಟಿ ಹಿರೇಕೆರೂರ
    ಸ್ಥಳೀಯ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ 22 ಹುದ್ದೆಗಳ ಪೈಕಿ ಕೇವಲ ಎರಡು ಹುದ್ದೆಗಳಲ್ಲಿ ಮಾತ್ರ ಕಾಯಂ ನೌಕರರಿದ್ದಾರೆ. 16 ಜನರು ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, 4 ಸ್ಥಾನಗಳು ಖಾಲಿ ಇವೆ. ಇದರಿಂದ ತಾಪಂ ಕಚೇರಿಗೆ ವಿವಿಧ ಕಾರ್ಯಗಳಿಗೆ ಆಗಮಿಸುವ ಜನರು, ಜನಪ್ರತಿನಿಧಿಗಳಿಗೆ ಹಾಗೂ ತಾಲೂಕಿನ ಅಭಿವೃದ್ಧಿಗೆ ತೀವ್ರ ತೊಂದರೆ ಉಂಟಾಗಿದೆ.
    ಮಂಜೂರಾದ ಹುದ್ದೆಗಳು: ಹಿರೇಕೆರೂರ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ 1, ಸಹಾಯಕ ಲೆಕ್ಕಾಧಿಕಾರಿ 1, ಕಾವಲುಗಾರ 2, ಸಹಾಯಕ ನಿರ್ದೇಶಕ 1, ವ್ಯವಸ್ಥಾಪಕ 1, ಪ್ರಥಮ ದರ್ಜೆ ಸಹಾಯಕ 1, ಲೆಕ್ಕ ಸಹಾಯಕ 1, ದ್ವಿತೀಯ ದರ್ಜೆ ಸಹಾಯಕರು 3, ಬೆರಳಚ್ಚುಗಾರರು 2, ಜವಾನರು 4, ಚಾಲಕರು 2, ಕೈಗಾರಿಕಾ ವಿಸ್ತರಣಾಧಿಕಾರಿ 1, ಯೋಜನಾ ಕ್ರೀಡಾಧಿಕಾರಿ 1, ಪ್ರಗತಿ ಸಹಾಯಕ 1 ಹುದ್ದೆಗಳು ಇವೆ.
    ಪ್ರಭಾರ ಸ್ಥಾನಗಳು: ತಾಪಂ ಕಾರ್ಯನಿರ್ವಾಹಕ ಅಧಿಕಾರಿ 1, ವ್ಯವಸ್ಥಾಪಕ ಹುದ್ದೆ 1, ಕಿರಿಯ ಇಂಜಿನಿಯರ್ 1, ಪ್ರಥಮ ದರ್ಜೆ ಲೆಕ್ಕ ಸಹಾಯಕರು 2, ಪ್ರಥಮ ದರ್ಜೆ ಸಹಾಯಕರು 2, ದ್ವಿತೀಯ ದರ್ಜೆ ಸಹಾಯಕರು 2, ಬೆರಳಚ್ಚುಗಾರರು 2, ವಾಹನ ಚಾಲಕರು 1, ಜವಾನರು 4 ಸ್ಥಾನಗಳು ಸೇರಿ 16 ನೌಕರರು ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
    ನಿಯೋಜನೆ ಸ್ಥಾನಗಳು: ಸಹಾಯಕ ನಿರ್ದೇಶಕರು 1-(ಗ್ರಾಮೀಣ ಉದ್ಯೋಗ) ಸ್ಥಾನಕ್ಕೆ ನಿಯೋಜನೆಗೊಳಿಸಲಾಗಿದೆ. ಕಾಯಂ ಸ್ಥಾನಗಳು: ಸಹಾಯಕ ಲೆಕ್ಕ ಅಧಿಕಾರಿ 1, ಕಿರಿಯ ಇಂಜಿನಿಯರ್ 1 ಸ್ಥಾನದಲ್ಲಿ ಕಾಯಂ ಅಧಿಕಾರಿಗಳು ಇದ್ದಾರೆ. ಖಾಲಿ ಸ್ಥಾನಗಳು: ತಾಲೂಕು ಯೋಜನಾಧಿಕಾರಿ 1, ಶೀಘ್ರ ಲಿಪಿಗಾರರು 1, ಪ್ರಗತಿ ಸಹಾಯಕರು 1, ವಾಹನ ಚಾಲಕರು 1 ಸ್ಥಾನ ಖಾಲಿ ಉಳಿದಿವೆ.
    ಕೆಲಸ ವಿಳಂಬ: ತಾಪಂ ಕಾರ್ಯಾಲಯಕ್ಕೆ ಸಾರ್ವಜನಿಕರು, ಗ್ರಾಪಂ ಸೇರಿದಂತೆ ವಿವಿಧ ಚುನಾಯಿತ ಜನಪ್ರತಿನಿಧಿಗಳು ದಿನನಿತ್ಯದ ಕೆಲಸಗಳಿಗಾಗಿ ಆಗಮಿಸುತ್ತಾರೆ. ಆದರೆ, ಅಧಿಕಾರಿಗಳು ಲಭ್ಯವಿರದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳುವಂತಾಗಿದೆ. ಸಿಬ್ಬಂದಿ ಕೊರತೆಯಿಂದ ತಾಪಂನಲ್ಲಿ ಟಪಾಲು, ಪತ್ರ ಮುಖೇನ ವ್ಯವಹಾರ, ಖಾತೆ ಬದಲಾವಣೆ, ಸ್ವಚ್ಛ ಭಾರತ ಮಿಷನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು, ವಸತಿ, ಸಂಘ-ಸಂಸ್ಥೆಗಳ ವಹಿವಾಟು ಹೀಗೆ ನೂರಾರು ಕೆಲಸಗಳು ವಿಳಂಬವಾಗುತ್ತಿವೆ.
    ಕಾರ್ಯಾಲಯದ ಹಿಂಭಾಗದಲ್ಲಿನ ಸಾರ್ವಜನಿಕ ಶೌಚಗೃಹ ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು ತಾಪಂ ಆವರಣದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಸ್ವಚ್ಛ ಭಾರತ ಹೆಸರಿನಲ್ಲಿ ಸಾಕಷ್ಟು ಅನುದಾನ ಖರ್ಚು ಮಾಡುವ ತಾಪಂ, ತನ್ನ ಆವರಣದಲ್ಲೇ ಸ್ವಚ್ಛತೆ ಕಾಪಾಡದಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
    ತಾಪಂ ಆಡಳಿತ ಮಂಡಳಿ ಅವಧಿ 2021 ಮೇ 12ಕ್ಕೆ ಮುಕ್ತಾಯಗೊಂಡಿದೆ. ಕರೊನಾ ಲಾಕ್​ಡೌನ್ ಮತ್ತಿತರ ಕಾರಣಗಳಿಂದ ಇಲ್ಲಿಯವರೆಗೆ ತಾಪಂ ತ್ರೖೆಮಾಸಿಕ ಸಭೆ ನಡೆದಿಲ್ಲ. ತಾಪಂಗೆ ಹೊಂದಿಕೊಂಡ ಹಾಗೂ ಮಿನಿವಿಧಾನಸೌಧದ ಎದುರು ಬೆಲೆ ಬಾಳುವ ತಾಪಂ ವಾಣಿಜ್ಯ ಮಳಿಗೆಗಳಿವೆ. ಅವುಗಳ ಬಾಡಿಗೆ, ಅವಧಿ ಮುಕ್ತಾಯ ಹಾಗೂ ನಿರ್ವಹಣೆಯೂ ತಿಳಿಯದಾಗಿದೆ.
    ತಾಲೂಕಿನ ಎಲ್ಲ ಇಲಾಖೆಗಳಿಗೆ ತಾಲೂಕು ಪಂಚಾಯಿತಿ ಕಾರ್ಯಾಲಯವೇ ಅಧಿಪತಿ. ಸಚಿವರ ಕ್ಷೇತ್ರದಲ್ಲಿ
    ಇಂಥ ಪರಿಸ್ಥಿತಿ ನಿರ್ವಣವಾಗಿರುವುದೆ. ಚುನಾಯಿತ ಜನಪ್ರತಿನಿಧಿಗಳು ಮಂಜೂರಾತಿಗೆ ತಕ್ಕಂತೆ ಕಾಯಂ ನೌಕರರನ್ನು ನೇಮಿಸಿ, ಆಡಳಿತ ವ್ಯವಸ್ಥೆ ಸುಗಮವಾಗಿ ಸಾಗಲು ಅನುಕೂಲ ಕಲ್ಪಿಸಬೇಕಿದೆ.



    15ನೇ ಹಣಕಾಸು ಯೋಜನೆಯಡಿ ಮಿನಿ ನೀರಿನ ಟ್ಯಾಂಕ್, ಶಾಲೆ ಕಾಂಪೌಂಡ್, ಪೈಪ್​ಲೈನ್ ಮತ್ತಿತರ ಕಾಮಗಾರಿ ಮುಗಿಸಿ ಬರೋಬ್ಬರಿ 2 ವರ್ಷಗಳಾಗಿದ್ದರೂ ಬಿಲ್ ಮಂಜೂರಾಗಿಲ್ಲ. ತಾಪಂ ಚುನಾವಣೆ ಸಮೀಪಿಸುತ್ತಿದೆ. ಇಲ್ಲಿ ಮಂಜೂರಾತಿಗೆ ತಕ್ಕಂತೆ ಕಾಯಂ ಹುದ್ದೆಗಳಿಲ್ಲ. ಕೂಡಲೆ ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು.
    | ಬಸವರಾಜ ಭರಮಗೌಡ್ರ ತಾಪಂ ಮಾಜಿ ಸದಸ್ಯ

    ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗಿರುವ ಸ್ಥಿತಿಯಲ್ಲಿ ಪ್ರಭಾರಿ ಅಧಿಕಾರಿಗಳೊಂದಿಗೆ ಸಾರ್ವಜನಿಕರಿಗೆ ತಕ್ಕಮಟ್ಟಿಗೆ ತೊಂದರೆಯಾಗದಂತೆ ಸೇವೆ ನೀಡುತ್ತಿದ್ದೇವೆ. ಮಂಜೂರಾತಿ ಹುದ್ದೆಗಳಿಗೆ ತಕ್ಕಂತೆ ಕಾಯಂ ನೌಕರರು ನೇಮಕಗೊಂಡರೆ ಮತ್ತಷ್ಟು ಉತ್ತಮ ಸೇವೆ ನೀಡಬಹುದಾಗಿದೆ. ಶೌಚಗೃಹ ಸ್ವಚ್ಛತೆ, 15ನೇ ಹಣಕಾಸು ಯೋಜನೆಯ ಬಿಲ್ ಮಂಜೂರಾತಿ ಬಗ್ಗೆ ಗಮನ ಹರಿಸಲಾಗುವುದು.
    | ಸುನಿಲಕುಮಾರ ಬಿ., ಪ್ರಭಾರಿ ಇಒ, ಹಿರೇಕೆರೂರ ತಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts