More

    ತಾಂತ್ರಿಕ ಸಮಸ್ಯೆ, ಶೇ. 12ರಷ್ಟು ಬೆಳೆ ಸಮೀಕ್ಷೆ

    ವಿಜಯವಾಣಿ ಸುದ್ದಿಜಾಲ ಕುಮಟಾ: ತಾಲೂಕಿನಲ್ಲಿ ರೈತರು ಹಾಗೂ ಇಲಾಖೆಯ ವತಿಯಿಂದ ನಡೆಯುತ್ತಿರುವ ಬೆಳೆ ಸಮೀಕ್ಷೆ ನಿಧಾನಗತಿಯಲ್ಲಿ ನಡೆದಿದ್ದು ಈವರೆಗೆ ಶೇ. 12ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

    ಸೆ. 24ರವರೆಗೆ ಮಾಹಿತಿ ಅಪ್ಲೋಡ್ ಸಮಯ ವಿಸ್ತರಿಸಲಾಗಿದೆ. ಆದರೆ, ನೆಟ್​ವರ್ಕ್ ಮತ್ತಿತರ ತಾಂತ್ರಿಕ ಸಮಸ್ಯೆ, ಕರೊನಾ ಸಂಕಟ ಇನ್ನಿತರ ಕಾರಣಗಳಿಗಾಗಿ ಸಮೀಕ್ಷೆ ಮಾತ್ರ ತೀರಾ ನಿಧಾನಗತಿಯಲ್ಲಿ ಸಾಗಿದೆ.

    ಲಭ್ಯ ಮಾಹಿತಿ ಪ್ರಕಾರ ಕುಮಟಾ ತಾಲೂಕಿನಲ್ಲಿ 99,000ಕ್ಕೂ ಹೆಚ್ಚು ರೈತರ ಬೆಳೆ ಕ್ಷೇತ್ರಗಳಿದ್ದು, ಇದು ಇಡೀ ಜಿಲ್ಲೆಯಲ್ಲೇ ಇತರೆಲ್ಲ ತಾಲೂಕುಗಳಿಗಿಂತ ಹೆಚ್ಚು. ಸಮೀಕ್ಷೆಗಾಗಿ ಎಲ್ಲ ಇಲಾಖೆಗಳಿಂದ 95 ಮಂದಿ ಯೋಜನೆ ಸಹಾಯಕರ ಮೂಲಕ ತಲಾ 1200ಕ್ಕೂ ಹೆಚ್ಚು ರೈತಕ್ಷೇತ್ರಗಳ ಹಂಚಿಕೆಯೊಂದಿಗೆ ಸಮೀಕ್ಷೆ ಕಾರ್ಯ ನಡೆದಿದೆ. ಮುಖ್ಯವಾಗಿ ಕೂಜಳ್ಳಿ ಹಾಗೂ ಮಿರ್ಜಾನ ಹೋಬಳಿ ವ್ಯಾಪ್ತಿಯಲ್ಲಿ ಸಮೀಕ್ಷೆ ತೀರಾ ಕಷ್ಟಕರವಾಗಿದೆ. ಬಹಳಷ್ಟು ರೈತರ ವಾಸಸ್ಥಳ ಮತ್ತು ಜಮೀನು ದೂರದೂರ ಇದೆ, ಬೇರೆ ಪಂಚಾಯಿತಿ ವ್ಯಾಪ್ತಿಯಲ್ಲೂ ದೊಡ್ಡ ಪ್ರಮಾಣದಲ್ಲಿದೆ. ಕಾಗಾಲ ಹಾಗೂ ಹೆಗಡೆ ಪಂಚಾಯಿತಿ ವ್ಯಾಪ್ತಿಯ ರೈತರ ಬೇಸಾಯ ಭೂಮಿ ಕೋಡ್ಕಣಿ ಹಾಗೂ ಮಿರ್ಜಾನ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡುಬರುತ್ತದೆ. ಇದಲ್ಲದೆ, 5000 ಹೆ. ಗೂ ಹೆಚ್ಚು ವ್ಯಾಪಿಸಿರುವ ಗಜನಿ ಕ್ಷೇತ್ರಗಳಲ್ಲಿ ಸಾಗಿ ಸಮೀಕ್ಷೆ ಮಾಡುವುದೇ ಹರ ಸಾಹಸವಾಗುತ್ತದೆ. ಯೋಜನೆಯ ನಿಯಮದಂತೆ ಸಮೀಕ್ಷೆ ಕ್ಷೇತ್ರದ 30 ಮೀ ವ್ಯಾಪ್ತಿಯೊಳಗಿದ್ದು ಜಿಪಿಎಸ್ ಪ್ರಕಾರ ಛಾಯಾಚಿತ್ರ ದಾಖಲಿಸಬೇಕಾಗುತ್ತದೆ. ಎಷ್ಟೋ ಕಡೆಗಳಲ್ಲಿ ದೋಣಿಯಲ್ಲಿ ಕುಳಿತು ಸಮೀಕ್ಷೆ ಮಾಡುವುದೂ ಅಸಾಧ್ಯವಾದ ಸ್ಥಿತಿ ಇದೆ. ನದಿ ತಟವರ್ತಿ, ಅಳಿವೆ ಹಾಗೂ ಹಿನ್ನೀರು ಪ್ರದೇಶದಲ್ಲಿ ಮಳೆಗಾಲದ ಕಾರಣದಿಂದ ಸ್ಥಳಕ್ಕೇ ಹೋಗುವುದೇ ಕಷ್ಟವಾಗುತ್ತದೆ. ಕರೊನಾ ಕಾರಣದಿಂದಲೂ ಸಮೀಕ್ಷೆ ಕಾರ್ಯ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

    ಇದೊಂದು ಉತ್ತಮ ಯೋಜನೆಯಾಗಿದ್ದು ರೈತರು ಸ್ವತಃ ತಾವು ಬೆಳೆದ ಬೆಳೆಯನ್ನು ತಮ್ಮದೇ ಮೊಬೈಲ್ ಮೂಲಕ ನೇರವಾಗಿ ದಾಖಲಿಸಬಹುದಾಗಿದೆ. ಆದರೆ, ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆ ಸಮೀಕ್ಷೆ ಮಾಡಬೇಕಾದ ಕ್ಷೇತ್ರ ಕುಮಟಾ ತಾಲೂಕಿನಲ್ಲಿದೆ. ಆದ್ದರಿಂದ ಈವರೆಗೆ 12,000 ದಷ್ಟು ರೈತಕ್ಷೇತ್ರಗಳ ಬೆಳೆ ಸಮೀಕ್ಷೆ ದಾಖಲಾಗಿದ್ದು ಇನ್ನೂ ಆಗಬೇಕಾದ್ದು ಬಹಳಷ್ಟಿದೆ. | ಚಂದ್ರಕಲಾ ಎಸ್. ಬರ್ಗಿ ಪ್ರಭಾರ ಕೃಷಿ ಸಹಾಯಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts