More

    ತಳಿ ಮುನ್ನಡೆಸುವ ಮರ ಕಟಾವು ನಿಲ್ಲಿಸಿ

    ಶಿರಸಿ: ಅಪರೂಪದ ಮಾವಿನ ತಳಿಗಳ ರಕ್ಷಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಅಂತಹ ತಳಿಗಳ ತಾಯಿ ಮರಗಳ ಕಟಾವಿಗೆ ಕಡ್ಡಾಯವಾಗಿ ಅವಕಾಶ ನೀಡಬಾರದು ಎಂಬ ಒತ್ತಾಯ ಮಾವು ತಳಿಗಳ ವೈವಿಧ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಾಲೋಚನಾ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.

    ನಗರದ ಕದಂಬ ಮಾರ್ಕೆಟಿಂಗ್ ಸಭಾಂಗಣದಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾವು ತಳಿಗಳ ರಕ್ಷಣೆಗೆ ಹಲವು ನಿರ್ಣಯ ಕೈಗೊಳ್ಳಲಾಯಿತು. ಅಪರೂಪದ ಮಾವಿನ ತಳಿಗಳು ವಿನಾಶದಂಚಿಗೆ ತಲುಪಿವೆ. ಹಾಗಾಗಿ ಅಂತಹ ತಳಿಗಳ ತಾಯಿ ಮರ ಕಟಾವಿಗೆ ಯಾರಿಗೂ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಯಿತು. ಮಲೆನಾಡಿನ ವಿನಾಶದ ಅಂಚಿನ ಸ್ಥಳೀಯ ಮಾವು ತಳಿಗಳನ್ನು ಗುರುತಿಸಿ ಅವುಗಳನ್ನು ಬೆಳೆಸುವ ಕಾರ್ಯ ಆಗಬೇಕು. ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಗಳು ವಿನಾಶದಂಚಿನ ಸ್ಥಳೀಯ ತಳಿಗಳ ಗಿಡಗಳನ್ನು ನರ್ಸರಿಗಳಲ್ಲಿ ತಯಾರಿಸಲು ಆದ್ಯತೆ ನೀಡಬೇಕು. ಪ್ರಸಕ್ತ ವರ್ಷ 2 ಲಕ್ಷ ಗಿಡಗಳನ್ನು ಉತ್ತರ ಕನ್ನಡದ ಆಸಕ್ತ ರೈತರಿಗೆ ಅರಣ್ಯ ಇಲಾಖೆ ವಿತರಿಸುವಂತೆ ಸೂಚಿಸಲಾಯಿತು. ರೈತರು ತಮ್ಮ ಸೊಪ್ಪಿನ ಬೆಟ್ಟಗಳಲ್ಲಿ ಮಾವಿನ ಗಿಡಗಳನ್ನು ನೆಡಲು ಮುಂದಾಗಬೇಕು. 1 ಸಾವಿರ ರೈತರು ಬೆಟ್ಟದಲ್ಲಿ ಸ್ಥಳೀಯ ಜಾತಿಗಳ ಮಾವಿನ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ರೈತರು, ಅಧಿಕಾರಿಗಳು, ಪರಿಸರ ಕಾರ್ಯಕರ್ತರು, ಮಾವು ತಳಿ ತಜ್ಞರು ನಿರ್ಣಯಿಸಿದರು.

    ಕದಂಬ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ ಮಾತನಾಡಿ, ಸ್ಥಾನಿಕ ಹಾಗೂ ಸಾಂಪ್ರದಾಯಿಕ ಮಾವು ತಳಿಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಅಪರೂಪದ ತಳಿಗಳನ್ನು ಹುಡುಕಿ ಉಳಿಸುವ ಕಾರ್ಯವಾಗಬೇಕು ಎಂದರು.

    ಅರಣ್ಯ ಮಹಾವಿದ್ಯಾಲಯದ ಪ್ರೊ. ಆರ್. ವಾಸುದೇವ ಮಾತನಾಡಿ, ಸಾಮುದಾಯಿಕವಾಗಿ ಮಾವು ತಳಿ ಸಂರಕ್ಷಣೆಗೆ ಒತ್ತು ನೀಡುವ ಕಾರ್ಯವಾಗಬೇಕು. ಆನ್​ಲೈನ್ ಮೂಲಕ ಮಾರಾಟ ವ್ಯವಸ್ಥೆ ಸಮರ್ಪಕವಾಗಿ ನಡೆಯಬೇಕು ಎಂದರು.

    ಪರಿಸರ ತಜ್ಞ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಹೊಳೆಯಂಚಿನ ಅಪ್ಪೆ ತಳಿಗಳು ನಾಶವಾಗುತ್ತಿದ್ದು, ಅಲ್ಲಿ ಮತ್ತೆ ಅವುಗಳ ನಾಟಿ ಮಾಡಬೇಕು. ತಳಿ ಕಸಿಗಾರರಿಗೆ ಇನ್ನಷ್ಟು ಉತ್ತೇಜಿಸುವ ಕಾರ್ಯ ಆಗಬೇಕು ಎಂದರು.

    ಉಪ್ಪಿನಕಾಯಿ ಉದ್ಯಮಿ ಗಣೇಶ ಕಾಕಲ್ ಮಾತನಾಡಿ, ಹಲವು ತಳಿಗಳನ್ನು ಬೆಳೆಸುವ ಬದಲು ಕೆಲವೇ ತಳಿಗಳ ಲಕ್ಷಾಂತರ ಸಸಿಗಳನ್ನು ಬೆಳೆಸುವ ಕಾರ್ಯ ಉತ್ತಮ ಎಂದು ಹೇಳಿದರು.

    ಈ ವೇಳೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಡಿಎಫ್​ಒ ಎಸ್.ಜಿ. ಹೆಗಡೆ, ಎಸಿಎಫ್ ಡಿ.ರಘು, ಅಣ್ಣಪ್ಪ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts