More

    ತರಗತಿ ರದ್ದಾದರೂ ಶುಲ್ಕಕ್ಕೆ ಜಿದ್ದು

    ಗದಗ: ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲಾ (ಎಲ್​ಕೆಜಿ ಯಿಂದ 5ನೇ ತರಗತಿ) ಮಕ್ಕಳಿಗೆ ಆನ್​ಲೈನ್ ಮತ್ತು ಆಫ್​ಲೈನ್ ತರಗತಿ ನಡೆಸುವುದನ್ನು ಸರ್ಕಾರ ರದ್ದುಪಡಿಸಿದರೂ ಜಿಲ್ಲೆಯ ಅನೇಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಎಗ್ಗಿಲ್ಲದೆ ಪಾಲಕರಿಂದ ಶಾಲಾ ಶುಲ್ಕ ವಸೂಲಿ ಮಾಡಲಾರಂಭಿಸಿವೆ. ಸರ್ಕಾರದ ಆದೇಶವನ್ನು ಧಿಕ್ಕರಿಸಿ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ!

    ಅಧಿಕಾರಿಗಳ ನಿರ್ಲಕ್ಷ್ಯವನ್ನೇ ಉಪಯೋಗಿಸಿಕೊಂಡು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಹಣ ಪೀಕಲು ಶುರು ಮಾಡಿವೆ. ಕಳೆದ ಒಂದು ತಿಂಗಳಿಂದ ಪಾಲಕರಿಗೆ ಮೊಬೈಲ್​ಗೆ ಮೆಸೇಜ್ ಕಳಿಸಿ ಶುಲ್ಕ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಒಂದು ಶಾಲೆ ಸಂಪೂರ್ಣ ಶುಲ್ಕ ಪಾವತಿಸಬೇಕು ಎಂದು ಹೇಳಿದರೆ, ಮತ್ತೊಂದು ಶಾಲೆಯವರು ಸದ್ಯಕ್ಕೆ ಅರ್ಧ ಶುಲ್ಕ ಕಟ್ಟಿ ಮುಂದಿನ ತರಗತಿಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.

    ಕರೊನಾ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಶಾಲೆಗಳು ಆರಂಭವಾಗುವ ಲಕ್ಷಣಗಳಿಲ್ಲ. ಆದರೆ, ಮಕ್ಕಳು ಮನೆಯಲ್ಲಿ ಕುಳಿತು ಅಭ್ಯಾಸ ಮಾಡಬೇಕೆಂಬ ಕಾರಣದಿಂದ ಪಾಲಕರ ಮೊಬೈಲ್ ಫೋನ್​ಗೆ ವಿಷಯವಾರು ಪಾಠಗಳನ್ನು ಕಳಿಸಲಾಗುತ್ತಿದೆ. ಇದನ್ನು ಹೊಸ ನೋಟ್​ಬುಕ್​ನಲ್ಲಿ ಮಕ್ಕಳಿಗೆ ಬರೆಸಬೇಕು. ‘ಕರೊನಾ ನಿಯಂತ್ರಣಕ್ಕೆ ಬಂದ ನಂತರ ಮನೆ ಪಾಠದಲ್ಲಿ ಕಲಿತ ಆಧಾರದ ಮೇಲೆ ಮಗುವಿಗೆ ಅಂಕಗಳನ್ನು ನೀಡಲಾಗುವುದು. ನಾವು ಶಾಲೆಯಿಂದಲೇ ಪಾಠ ಮಾಡುತ್ತಿದ್ದೇವೆ. ಮಗು ಅಭ್ಯಾಸ ಮಾಡುತ್ತಿದೆ. ಮಗುವಿನ ಅಭ್ಯಾಸದ ಜವಾಬ್ದಾರಿ ಶಾಲೆಗಳೇ ಹೊರುವುದರಿಂದ ಶುಲ್ಕ ಕಟ್ಟಲೇಬೇಕು’ ಎಂಬುದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರ ವಾದವಾಗಿದೆ. ಇದೇ ಕಾರಣದಿಂದ ಗದಗ-ಬೆಟಗೇರಿ ಅವಳಿನಗರದ ಸೇರಿ ಜಿಲ್ಲೆಯ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಶುಲ್ಕ ಪಾವತಿ ಕುರಿತು ಸರ್ಕಾರದ ಆದೇಶ ಕುರಿತು ಮಾತನಾಡಿದರೆ ಮಗುವಿನ ಭವಿಷ್ಯಕ್ಕೆ ತೊಂದರೆ ಆಗಬಹುದು ಎಂದು ಬಹುತೇಕ ಪಾಲಕರು ಸುಮ್ಮನಿದ್ದಾರೆ. ಹಲವಾರು ಜನ ಶುಲ್ಕ ಕಟ್ಟದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಆದರೂ ನಿತ್ಯ ಒಂದೊಂದು ಮೆಸೇಜ್ ಕಳಿಸುವ ಖಾಸಗಿ ಶಾಲೆಯವರು ಹಣ ಪಾವತಿಸುವಂತೆ ಪಾಲಕರನ್ನು ಪೀಡಿಸುತ್ತಿದ್ದಾರೆ.

    ಎಲ್​ಕೆಜಿಯಿಂದ 5ನೇ ತರಗತಿವರೆಗೆ ಆನ್​ಲೈನ್, ಆಫ್​ಲೈನ್ ತರಗತಿ ನಡೆಸುವುದನ್ನು ರದ್ದುಪಡಿಸಲಾಗಿದೆ. ಸರ್ಕಾರದ ಆದೇಶ ಮೀರಿ ಪಾಲಕರಿಂದ ಹಣ ವಸೂಲಿ ಮಾಡುವುದು ಕಂಡು ಬಂದರೆ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಹಣ ವಸೂಲಿ ಮಾಡುತ್ತಾರೆಂಬ ಆರೋಪದ ಮೇರೆಗೆ ಜಿಲ್ಲೆಯ ಮೂರು ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೆ, ಈ ಕುರಿತು ನಿಗಾ ಇಡಲು ಆಯಾ ತಾಲೂಕಿನ ಬಿಇಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶುಲ್ಕದ ಹೆಸರಿನಲ್ಲಿ ಪಾಲಕರನ್ನು ಪೀಡಿಸಲು ಅವಕಾಶ ನೀಡುವುದಿಲ್ಲ.
    | ಎನ್.ಎಚ್. ನಾಗೂರ ಡಿಡಿಪಿಐ ಗದಗ

    ವಸೂಲಿ ಜೋರು: ಗದಗ-ಬೆಟಗೇರಿಯಲ್ಲಿರುವ ಐದಾರು ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶುಲ್ಕ ವಸೂಲಿ ಮಾಡುವ ಕಾರ್ಯ ಭರದಿಂದ ನಡೆದಿದೆ. ಶಾಲಾ ಆಡಳಿತ ಮಂಡಳಿ ನಿಗದಿಪಡಿಸಿದ ಶುಲ್ಕದಲ್ಲಿ 1 ರೂ. ಸಹ ಬಿಡುವುದಿಲ್ಲ. ಶುಲ್ಕ ವಸೂಲಿ ಪಾವತಿ ಮಾಡದಿದ್ದರೆ ಶಾಲೆಗಳನ್ನು ನಡೆಸುವುದು ಹೇಗೆ? ಶಿಕ್ಷಕರು ಸೇರಿ ಸಿಬ್ಬಂದಿ ವೇತನ ನೀಡುವುದಾದರೂ ಹೇಗೆ? ಎಂದು ಖಾಸಗಿ ಶಾಲೆಗಳ ಮುಖ್ಯಸ್ಥರೊಬ್ಬರು ಪ್ರಶ್ನಿಸುತ್ತಿದ್ದಾರೆ. ಎಲ್​ಕೆಜಿಯಿಂದ 10 ನೇ ತರಗತಿವರೆಗೆ 30 ಸಾವಿರದಿಂದ 40 ಸಾವಿರ ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ. ಸದ್ಯಕ್ಕೆ ಮೊದಲ ಕಂತಿನ 25 ಸಾವಿರ ಹಣವನ್ನು ಆರ್​ಟಿಜಿಎಸ್ ಮೂಲಕ ಪಾವತಿ ಮಾಡಬೇಕು ಎಂದು ಖಾಸಗಿ ಶಾಲೆಯವರು ಸ್ಪಷ್ಟವಾಗಿ ಹೇಳುತ್ತಾರೆ. ಸರ್ಕಾರ ಎಲ್​ಕೆಜಿಯಿಂದ 5ನೇ ತರಗತಿವರೆಗೆ ಆನ್​ಲೈನ್, ಆಫ್​ಲೈನ್ ಎರಡೂ ರೀತಿಯ ಪಾಠವನ್ನು ರದ್ದುಪಡಿಸಿದೆ. ಹೀಗಿದ್ದರೂ ಶುಲ್ಕ ವಸೂಲಿ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಖಾಸಗಿ ಶಾಲೆಯವರ ಬಳಿ ಉತ್ತರವಿಲ್ಲ ಎನ್ನುತ್ತಾರೆ ಪಾಲಕರಾದ ಬೆಟಗೇರಿಯ ಶರಣಬಸಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts