More

    ತರಕಾರಿ ಮಾರುಕಟ್ಟೆಗೆ ಬೇಕು ಕಾಯಕಲ್ಪ

    ಸಂತೋಷ ಮುರಡಿ ಮುಂಡರಗಿ

    ನಿತ್ಯ ನೂರಾರು ಜನರು ವ್ಯವಹರಿಸುವಂತಹ ಹಳೇ ಎಪಿಎಂಸಿಯ ತರಕಾರಿ ಮಾರುಕಟ್ಟೆಯಲ್ಲಿ ಸೂಕ್ತ ನಿರ್ವಹಣೆ ಮತ್ತು ರಕ್ಷಣೆ ಇಲ್ಲದ ಕಾರಣ ಹಂದಿಗಳ ತಾಣ ಹಾಗೂ ಕುಡುಕರ ಅಡ್ಡೆಯಾಗಿ ರೂಪುಗೊಂಡಿದೆ.

    ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಮತ್ತು ತರಕಾರಿ ಮಾರುಕಟ್ಟೆಯು ಮೊದಲು ಮುಖ್ಯಬಜಾರ್​ನಲ್ಲಿತ್ತು. ಸಂತೆ ದಿನದಂದು ಜನಸಂದಣಿ ಹೆಚ್ಚಾಗಿ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲು 2016ರಲ್ಲಿ ಹಳೇ ಎಪಿಎಂಸಿ ಆವರಣದಲ್ಲಿ ತರಕಾರಿ ಮಾರುಕಟ್ಟೆ ಪ್ರಾರಂಭಿಸಲಾಯಿತು. ಆದರೆ, ಹಲವು ತಿಂಗಳುಗಳಿಂದ ಹಳೇ ಎಪಿಎಂಸಿ ತರಕಾರಿ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದ್ದು, ಯಾವೊಬ್ಬ ಅಧಿಕಾರಿಯೂ ಇತ್ತ ಕಡೆ ಗಮನಹರಿಸಿಲ್ಲ ಎಂಬುದು ತರಕಾರಿ ವ್ಯಾಪಾರಸ್ಥರ ದೂರು.

    ಕುಡುಕರ ಅಡ್ಡೆ: ಹಳೇ ಎಪಿಎಂಸಿ ತರಕಾರಿ ಮಾರುಕಟ್ಟೆ ಮುಖ್ಯದ್ವಾರದಿಂದ ಒಳಗಡೆ ಹೋದರೆ ಸಾಕು ಗುಂಪು- ಗುಂಪಾಗಿ ಕುಳಿತು ಮದ್ಯ ಸೇವಿಸುವ ಕುಡುಕರೇ ಹೆಚ್ಚಾಗಿ ಕಂಡುಬರುತ್ತಾರೆ. ಆವರಣದಲ್ಲಿ ಬರೀ ಮದ್ಯದ ಪ್ಯಾಕೇಟ್, ಬಾಟಲ್​ಗಳು ಕಾಣುತ್ತವೆ. ಹಳೇ ಎಪಿಎಂಸಿ ಸಮೀಪದಲ್ಲೇ ಎರಡು ಮದ್ಯದಂಗಡಿಗಳಿವೆ. ಕುಡುಕರು ಮದ್ಯ ಖರೀದಿಸಿ ಎಪಿಎಂಸಿ ಆವರಣದಲ್ಲಿ ಕುಳಿತು ಮದ್ಯ ಸೇವಿಸುತ್ತಾರೆ. ಅಲ್ಲಿಯೇ ಮದ್ಯದ ಪ್ಯಾಕೇಟ್​ಗಳನ್ನು ಬಿಸಾಡುತ್ತಾರೆ.

    ಹಂದಿಗಳ ಹಾವಳಿ: ತರಕಾರಿ ಮಾರು ಕಟ್ಟೆಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಜನರು ತರಕಾರಿ ಖರೀದಿಸುವುದಕ್ಕೆ ಹಿಂದೇಟು ಹಾಕುವಂತ ವಾತಾವರಣ ನಿರ್ವಣವಾಗಿದೆ. ತರಕಾರಿ ವ್ಯಾಪಾರಿಗಳ ಅಂಗಡಿ ಸುತ್ತಲೂ ಹಾಕಿರುವಂತಹ ಬಿದರಿನ ತಟ್ಟೆಯನ್ನು ಮುರಿದು ಅಂಗಡಿಯೊಳಗೆ ಪ್ರವೇಶಿಸಿ ತರಕಾರಿ ಹಾಳು ಮಾಡುತ್ತಿವೆ. ಈ ಕುರಿತು ವ್ಯಾಪಾರಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

    ಸ್ವಚ್ಛತೆ ಮರೀಚಿಕೆ: ಹಳೇ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಎಲ್ಲೆಂದರಲ್ಲಿ ಬರೀ ಕಸದ ರಾಶಿಯೇ ಕಂಡುಬರುತ್ತದೆ. ಪುರಸಭೆಯಿಂದ ಪ್ರತಿ ವ್ಯಾಪಾರಿಯಿಂದ ದಿನಕ್ಕೆ 8 ರೂ. ತೆರಿಗೆ ಸಂಗ್ರಹಿಸುತ್ತಾರೆ. ಆದರೆ, ಇಲ್ಲಿ ಸ್ವಚ್ಛತೆ ಕಾರ್ಯ ಮಾತ್ರ ನಡೆಯುತ್ತಿಲ್ಲ. ಗಲೀಜು ಹೆಚ್ಚಾಗಿರುವುದರಿಂದ ಹಂದಿಗಳ ವಾಸ ಸ್ಥಾನವಾಗಿದೆ.

    ಮಳೆ ಬಂದರೆ ಹಳ್ಳ: ತರಕಾರಿ ಮಾರುಕಟ್ಟೆ ಆವರಣವು ಸಮತಟ್ಟು ಇಲ್ಲ. ಹೀಗಾಗಿ ಮಳೆ ಬಂದರೆ ಸಾಕು, ನೀರು ಒಂದೆಡೆ ಸಂಗ್ರಹಗೊಂಡು ಹಳ್ಳದಂತೆ ಕಂಡುಬರುತ್ತದೆ. ಈ ಹಿಂದೆ ಎಪಿಎಂಸಿ ಅಧಿಕಾರಿಗಳು ಅಲ್ಪಸ್ವಲ್ಪ ಗರಸು ಮಣ್ಣು ಹಾಕಿ ಸಮತಟ್ಟು ಮಾಡಿದ್ದರು. ಅದು ಬಿಟ್ಟರೆ ಈವರೆಗೂ ಶಾಶ್ವತ ಪರಿಹಾರ ಕೆಲಸ ನಡೆದಿಲ್ಲ.

    ಹಳೇ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಈಗಾಗಲೇ ಭೇಟಿ ನೀಡಿದ್ದೇನೆ. ಅಲ್ಲಿನ ಅವ್ಯವಸ್ಥೆಗಳನ್ನು ತಕ್ಷಣ ಸರಿಪಡಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರೈತರು, ವ್ಯಾಪಾರಸ್ಥರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
    | ರವೀಂದ್ರ ಉಪ್ಪಿನಬೆಟಗೇರಿ ಎಪಿಎಂಸಿ ಅಧ್ಯಕ್ಷ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts