More

    ತಪ್ಪು ವಿಳಾಸ ನೀಡಿದ 32 ಸೋಂಕಿತರು



    ಹುಬ್ಬಳ್ಳಿ: ಕರೊನಾ ಸೋಂಕಿನ ಲಕ್ಷಣ ಇದ್ದವರು ಗಂಟಲ ದ್ರವ ಪರೀಕ್ಷೆ ಸಮಯದಲ್ಲಿ ತಪ್ಪು ವಿಳಾಸ, ಮೊಬೈಲ್​ಫೋನ್ ಸಂಖ್ಯೆ ನೀಡುವುದು ಧಾರವಾಡ ಜಿಲ್ಲೆಯಲ್ಲಿಯೂ ಹೆಚ್ಚುತ್ತಿದೆ.

    ಕೋವಿಡ್ ಪಾಸಿಟಿವ್ ಬರುವ ಆತಂಕದಿಂದ ಸೋಂಕಿನ ಲಕ್ಷಣ ಇದ್ದವರು ಹಾಗೂ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರಲ್ಲಿ ಕೆಲವರು ತಪ್ಪು ವಿಳಾಸ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇಂಥವರಲ್ಲಿ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ 32.

    ಬೆಂಗಳೂರಿನಲ್ಲಿ ಅಂದಾಜು 4,500 ಜನ ತಪ್ಪು ವಿಳಾಸ ನೀಡಿ, ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದು ಇತ್ತೀಚೆಗೆ ಬಹಿರಂಗಗೊಂಡಿತ್ತು. ಮೈಸೂರಿನಲ್ಲಿಯೂ ಕೆಲ ದಿನಗಳ ಹಿಂದಷ್ಟೇ ಸೋಂಕಿತ ವ್ಯಕ್ತಿಯೊಬ್ಬ ಅಲ್ಲಿನ ಜಿಲ್ಲಾಧಿಕಾರಿಯ ಮೊಬೈಲ್ ಸಂಖ್ಯೆಯನ್ನು ಗಂಟಲ ದ್ರವ ಪರೀಕ್ಷೆ ಸಮಯದಲ್ಲಿ ನೀಡಿದ್ದನ್ನು ಸ್ಮರಿಸಬಹುದು.

    ತಪ್ಪು ವಿಳಾಸ ನೀಡಿದ ಧಾರವಾಡ ಜಿಲ್ಲೆಯ 32 ಜನ ಸೋಂಕಿತರಿಂದಾಗಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ವಣಗೊಂಡಿತ್ತು. ಆದರೆ, ಈ 32 ಜನ ಸೋಂಕಿತರ ಮೊಬೈಲ್ ಸಿಡಿಆರ್ (ಕಾಲ್ ಡಿಟೆಲ್ಸ್ ರಿಕಾರ್ಡ್ಸ್) ವಿವರವನ್ನು ಪೊಲೀಸ್ ಇಲಾಖೆಗೆ ನೀಡಿದ್ದ ಜಿಲ್ಲಾಡಳಿತ, 31 ಜನ ಸೋಂಕಿತರ ವಿಳಾಸ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯನ್ನೂ ನೀಡಲಾಗಿದೆ.

    ತಪ್ಪು ವಿಳಾಸ ನೀಡಿದ ಸೋಂಕಿತರಲ್ಲಿ ಒಬ್ಬನ ವಿವರ ಇದುವರೆಗೆ ಪತ್ತೆಯಾಗಿಲ್ಲ. ಈ ವ್ಯಕ್ತಿಯ ವಿರುದ್ಧ ಜಿಲ್ಲಾಡಳಿತ ಎಫ್​ಐಆರ್ ದಾಖಲಿಸಿದ್ದು, ಆತನ ಪತ್ತೆಗಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

    ನಾಪತ್ತೆಯಾಗಿರುವ ಕರೊನಾ ಸೋಂಕಿತನ ವಿರುದ್ಧ 15-20 ದಿನಗಳ ಹಿಂದೆಯೇ ಎಫ್​ಐಆರ್ ದಾಖಲಿಸಲಾಗಿತ್ತು. ಹೀಗಾಗಿ ಇದುವರೆಗೆ ಆ ವ್ಯಕ್ತಿ ಕೋವಿಡ್​ನಿಂದ ಗುಣವಾಗಿದ್ದಿರಬಹುದೆಂದು ಅಂದಾಜಿಸಲಾಗಿದೆ. ಆದರೂ ಸೋಂಕಿತನ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.

    ಆದರೆ, ತಪ್ಪು ವಿಳಾಸ ನೀಡಿರುವವರನ್ನು ಪೊಲೀಸರು ಪತ್ತೆ ಹಚ್ಚುವವರೆಗೆ ಸೋಂಕಿತರು ಹತ್ತಾರು ಸ್ಥಳಗಳಿಗೆ ಭೇಟಿ ನೀಡಿರುವ, ನೂರಾರು ಜನರನ್ನು ಸಂರ್ಪಸಿರುವ ಸಾಧ್ಯತೆ ಇದೆ. ಸೋಂಕಿತರ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗುಲಿರುವ ಆತಂಕ ತಪ್ಪಿದ್ದಲ್ಲ.

    ಹೀಗಾಗಿ ತಪ್ಪು ವಿಳಾಸ ನೀಡಿ ಚಿಕಿತ್ಸೆ ಪಡೆದವರು ಭೇಟಿ ನೀಡಿದ ಸ್ಥಳ, ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಅವರನ್ನೂ ಕ್ವಾರಂಟೈನ್ ಮಾಡುವ, ಗಂಟಲ ದ್ರವ ಪರೀಕ್ಷಿಸುವ ಹಾಗೂ ಚಿಕಿತ್ಸೆ ಕೊಡಿಸುವ ಹೊಣೆಗಾರಿಕೆ ಜಿಲ್ಲಾಡಳಿತದ್ದಾಗಿದೆ.

    ಆಸ್ಪತ್ರೆಯಿಂದ ಬೇಗ ಬಿಡುಗಡೆ?

    ಕೋವಿಡ್ ಸೋಂಕಿತರನ್ನು ಆಸ್ಪತ್ರೆಯಿಂದ ಬೇಗ ಬಿಡುಗಡೆ ಮಾಡಲಾಗುತ್ತಿದೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

    ಆದರೆ, ಸೋಂಕಿತ ವ್ಯಕ್ತಿ ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಂಡ ದಿನದಿಂದ 14 ದಿನಗಳನ್ನು ಪರಿಗಣಿಸಿ, ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ.

    ಜ್ವರದಿಂದ ಬಳಲುತ್ತಿದ್ದವರು ಗುಣವಾದ ನಂತರ ಮನೆಯಲ್ಲಿಯೇ ಐಸೊಲೇಷನ್ ಇರುವುದಾಗಿ ಮನವಿ ಮಾಡಿದರೆ ಅಂತಹವರನ್ನು ಸಹ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಸರ್ಕಾರದ ನಿಯಮಗಳ ಅನುಸಾರ ಕೋವಿಡ್ ಸೋಂಕಿತನಲ್ಲಿ ಲಕ್ಷಣಗಳು ಕಡಿಮೆಯಾದ ನಂತರ ಮತ್ತೊಮ್ಮೆ ಗಂಟಲ ದ್ರವ ಪರೀಕ್ಷೆ ನಡೆಸಲಾಗುತ್ತಿಲ್ಲ. ಅಂತಹವರು ಮನೆಯಲ್ಲಿ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಇರಬೇಕಾಗುತ್ತದೆ.

    ಜಾರಿಗೆ ಬಾರದ ಸಚಿವರ ಹೇಳಿಕೆ

    ಒಟಿಪಿ ಸಂಖ್ಯೆ ಆಧಾರದ ಮೇಲೆ ಗಂಟಲ ದ್ರವ ಪರೀಕ್ಷೆ ನಡೆಸುವ ಮೂಲಕ ಕರೊನಾ ಸೋಂಕು ಶಂಕಿತರು ತಪ್ಪು ಮಾಹಿತಿ ನೀಡುವುದನ್ನು ತಡೆಯಬಹುದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಇತ್ತೀಚೆಗೆ ಹೇಳಿದ್ದರು.

    ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಳ್ಳಲು ಕೋವಿಡ್ ಕೇಂದ್ರಕ್ಕೆ ಬರುವವರು ನೀಡುವ ಮೊಬೈಲ್​ಫೋನ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದರಿಂದ ಆ ವ್ಯಕ್ತಿ ನೀಡಿರುವ ಸಂಖ್ಯೆಯ ಮೊಬೈಲ್​ಫೋನ್ ಅವನ ಬಳಿ ಇದೆಯೆಂಬುದು ಖಾತ್ರಿಯಾಗುತ್ತದೆ. ಆದರೆ, ಸಚಿವರ ಹೇಳಿಕೆ ಇದುವರೆಗೆ ಜಾರಿಗೆ ಬಂದಿಲ್ಲ.

    ತಪ್ಪು ವಿಳಾಸ ನೀಡಿದ್ದ 31 ಜನ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡಲಾಗಿದೆ. ಇದುವರೆಗೆ ಪತ್ತೆಯಾಗದ ವ್ಯಕ್ತಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಆದರೆ, ಆತನ ಬಗ್ಗೆ ಆತಂಕಗೊಳ್ಳುವ ಅಗತ್ಯ ಇಲ್ಲ. ಸೋಂಕಿತ ಕಣ್ಮರೆಯಾಗಿ 15-20 ದಿನಗಳಾಗಿವೆ. ಆ ವ್ಯಕ್ತಿ ಸಹಜವಾಗಿಯೇ 14 ದಿನಗಳ ನಂತರ ಗುಣವಾಗಿರುತ್ತಾನೆ.

    | ನಿತೇಶ ಪಾಟೀಲ, ಧಾರವಾಡ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts