More

    ತಂತ್ರಜ್ಞಾನದಿಂದ ಚಿತ್ರಕಲೆಗೆ ಹೊಸ ಭಾಷ್ಯ  -ಜಿಲ್ಲಾಧಿಕಾರಿ ವೆಂಕಟೇಶ ಅಭಿಮತ – ‘ಕಲರ್‌ಟೂರ್ನ್ಸ್’ ವ್ಯಂಗ್ಯಚಿತ್ರ ಪ್ರದರ್ಶನ

    ದಾವಣಗೆರೆ: ರಾಮಾಯಣ, ಮಹಾಭಾರತ ಕಾಲದಿಂದಲೂ ದೇವಸ್ಥಾನಗಳು ಹಾಗೂ ರಾಜ ಮನೆತನಗಳಲ್ಲಿ ಚಿತ್ರಕಲೆ ಬಳಕೆಯ ಇತಿಹಾಸವಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ ಇದು ಹೊಸ ಸ್ವರೂಪ, ಹೊಸ ಭಾಷ್ಯ ಬರೆದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಹೇಳಿದರು.
    ದಾವಣಗೆರೆಯ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಸೋಮವಾರ ಆಯೋಜಿಸಿದ್ದ, ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಅನ್ವಯಿಕ ಕಲಾ ವಿಭಾಗದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ರಚಿಸಿದ ಸಮೂಹ ವ್ಯಂಗ್ಯಚಿತ್ರಕಲಾ ಪ್ರದರ್ಶನ- ‘ಕಲರ್‌ಟೂರ್ನ್ಸ್’ ಉದ್ಘಾಟಿಸಿ ಮಾತನಾಡಿದರು.
    ಚಿತ್ರಕಲೆಗೆ ಭಾಷೆ, ವರ್ಣ, ಜಾತಿ, ಧರ್ಮ ಭೇದವಿಲ್ಲ. 250ಕ್ಕೂ ಹೆಚ್ಚು ದೇಶಗಳಲ್ಲೂ ಇದನ್ನು ಪ್ರದರ್ಶಿಸಬಹುದು. ಭಾಷೆ ತಿಳಿಯದವರೂ ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು
    ನಮ್ಮ ಸಂವೇದನೆ, ಕ್ರಿಯಾಶೀಲತೆಗೆ ಮತ್ತೊಂದು ಸ್ವರೂಪ ನೀಡುವ ಶಕ್ತಿ ಚಿತ್ರಕಲೆ, ದೃಶ್ಯಕಲೆ ಇದೆ. ಜೀವರಾಶಿಗಳಲ್ಲೇ ಮಾನವನ ಬುದ್ಧಿವಂತಿಕೆ ಹೆಚ್ಚಿದ್ದರೆ ಅದಕ್ಕೆ ಬಳಸುವ ಭಾಷೆ ಮತ್ತು ಕಲೆ ಕಾರಣವಾಗಿವೆ. ಸಂವೇದನೆಗಳನ್ನು ಇತರರೂ ಅರ್ಥ ಮಾಡಿಕೊಳ್ಳುವಂತೆ ಅವ್ಯಕ್ತಗೊಳಿಸುವ ಶಕ್ತಿ ಮಾನವರಿಗೆ ಇದೆ ಎಂದರು.
    ವಿದ್ಯಾರ್ಥಿಗಳು ಚಿತ್ರಕಲೆಯನ್ನು ಪದವಿ ರೂಪದಲ್ಲಿ ಅಧ್ಯಯನ ಮಾಡಿ ಸಮಾಜದ ಪ್ರತಿಯೊಬ್ಬರ ಮನಸ್ಸಿಗೂ ಅರ್ಥವಾಗುವಂತೆ ತಿಳಿವಳಿಕೆ ನೀಡುತ್ತಿರುವುದು 21ನೇ ಶತಮಾನದ ಸಾಧನೆಯಾಗಿದೆ ಎಂದರು.
    ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ ಇಲ್ಲಿನ ವ್ಯಂಗ್ಯಚಿತ್ರ ಪ್ರದರ್ಶನವನ್ನು ನನ್ನ 35 ವರ್ಷದ ವೃತ್ತಿ ಜೀವನದಲ್ಲಿ ಕಂಡಿಲ್ಲ. ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ಕಲಾಕೃತಿಗಳನ್ನು ಮಾರಾಟ ಮಾಡಬೇಕು. ಆಗ ದೃಶ್ಯಕಲಾ ಮಹಾವಿದ್ಯಾಲಯ ಇನ್ನಷು ಹೆಸರು ಪಡೆಯಲಿದೆ ಎಂದರು.
    ಚಿತ್ರ ಕಲಾವಿದರು ಕಲೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಿಡುತ್ತಾರೆ. ಮಂಬಯಿಯ ಕಲಾ ಸಂಘದಲ್ಲಿ ಕೈಗಳಿಲ್ಲದವರು ಕಾಲುಗಳಿಂದ, ಕಾಲುಗಳಿಲ್ಲದ ವಿದ್ಯಾರ್ಥಿಗಳು ಬಾಯಿಯಿಂದ ಕಲಾಕೃತಿಗಳನ್ನು ಇಂದಿಗೂ ರಚಿಸುತ್ತಿದ್ದಾರೆ. ಪ್ರತಿವರ್ಷ ಅಲ್ಲಿಂದ 5 ಸಾವಿರ ರೂ. ಮೌಲ್ಯದ ಕಲಾಕೃತಿಗಳನ್ನು ತರಿಸುತ್ತಿದ್ದೇನೆ. ಎಲ್ಲ ಅಂಗಗಳಿರುವ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬೇಕು ಎಂದು ಆಶಿಸಿದರು.
    ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ ಮಾತನಾಡಿ ಚಿತ್ರಕಲೆಯು ನಮಗೆ ಸಂವಹನ ಕಲೆಯನ್ನು ಕಲಿಸುತ್ತವೆ. ಒಬ್ಬ ಸಾಹಿತಿ 100 ಪದಗಳಲ್ಲಿ ಹೇಳುವುದನ್ನು ಕಲಾವಿದ ಒಂದು ಚಿತ್ರದಲ್ಲಿ ಹೇಳುತ್ತಾನೆ. ಸಾಹಿತ್ಯ ಬೇರೆ ದೇಶಕ್ಕೆ ಹೋಗಬೇಕಾದರೆ ರೂಪಾಂತರವಾಗಬೇಕು. ಆದರೆ ಚಿತ್ರಕಲಾವಿದರಿಗೆ ಈ ಸಮಸ್ಯೆಯಿಲ್ಲ ಎಂದರು.
    ಬೋಧನಾ ಸಹಾಯಕ ದತ್ತಾತ್ರೇಯ ಎನ್.ಭಟ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸತೀಶಕುಮಾರ ಪಂಚಪ್ಪ ವಲ್ಲೇಪುರೆ ವಂದಿಸಿದರು. ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ್, ಸಾಹಿತಿ ಬಾ.ಮ.ಬಸವರಾಜಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts