More

    ಢವಳಗಿಯಲ್ಲಿ ವಲಸಿಗರಿಗೆ ಕ್ವಾರಂಟೈನ್

    ಢವಳಗಿ: ಗ್ರಾಮದ ಹೊರ ವಲಯದಲ್ಲಿರುವ ಬಾಲಕಿಯರ ಸರ್ಕಾರಿ ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಮಂಗಳವಾರ ಮುಂಬೈನಿಂದ ಬಂದಿರುವ 19 ವಲಸಿಗರನ್ನು ತಾಲೂಕಾಡಳಿತ ಕ್ವಾರಂಟೈನ್‌ಗೊಳಪಡಿಸಿತು.
    ತಾಳಿಕೋಟೆ ಭಾಗದ 11, ನಾಲತವಾಡ ಭಾಗದ ಮಾವಿನಭಾವಿಯ 4 ಹಾಗೂ ಮುದ್ದೇಬಿಹಾಳ ಭಾಗದ ಮಾದಿನಾಳದ 4 ಜನರು ಇದರಲ್ಲಿದ್ದಾರೆ. ಅವರೆಲ್ಲ ಮುಂಬೈ-ಗದಗ ರೈಲು ಮೂಲಕ ವಿಜಯಪುರಕ್ಕೆ ಬಂದಿದ್ದರು. ಜಿಲ್ಲಾಡಳಿತ ಅವರೆಲ್ಲರಿಗೂ ಸಾರಿಗೆ ಬಸ್ ವ್ಯವಸ್ಥೆ ಮಾಡಿ, ಇಲ್ಲಿಗೆ ಕಳಿಸಿಕೊಟ್ಟಿತ್ತು.

    ಅಸಮಾಧಾನ

    ಈ ಕೇಂದ್ರಕ್ಕೆ ಹೊಸದಾಗಿ ಮುಂಬೈನಿಂದ ವಲಸಿಗ ಕಾರ್ಮಿಕರನ್ನು ತಂದಿರಿಸಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮೊದಲು ಇಲ್ಲಿ 197 ಜನರನ್ನು ಇರಿಸಲಾಗಿತ್ತು. ಅವರೆಲ್ಲರೂ ಕ್ವಾರಂಟೈನ್ ಅವಧಿ ಮುಗಿಸಿ ತಮ್ಮೂರುಗಳಿಗೆ ತೆರಳಿದ್ದಾರೆ. ಎಲ್ಲ ಮುಗಿದ ಮೇಲೆ ಅತಿ ಹೆಚ್ಚಿನ ಸೋಂಕು ಇರುವ ಮಹಾರಾಷ್ಟ್ರ ವಲಸಿಗರನ್ನು ಮತ್ತೆ ತಂದಿರಿಸಿದ್ದು ಸರಿ ಅಲ್ಲ. ನಮ್ಮ ಗ್ರಾಪಂ ವ್ಯಾಪ್ತಿಯ ಜನರನ್ನು ತಂದಿರಿಸಿದ್ದರೆ ನಾವು ಒಪ್ಪಿಕೊಳ್ಳಬಹುದಿತ್ತು. ಈಗ ಬೇರೆ ಜನರನ್ನು ತಂದಿರಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಗ್ರಾಪಂ ಸದಸ್ಯ ಕುಮಾರೆಪ್ಪ ಕೋರಿ ಅಸಮಾಧಾನ ತೋಡಿಕೊಂಡಿದ್ದಾರೆ.

    ಗೊಂದಲ

    ವಸತಿ ನಿಲಯದಲ್ಲಿದ್ದ ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿಸಿ ತಮ್ಮೂರಿಗೆ ತೆರಳಿದ್ದರಿಂದ ಕೇಂದ್ರದ ಉಸ್ತುವಾರಿ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು. ಈಗ ದಿಢೀರ್ 19 ಜನರನ್ನು ತಂದಿರಿಸಿದ ಮಾಹಿತಿ ತಿಳಿದ ಅಧಿಕಾರಿಗಳು ಕೆಲಹೊತ್ತು ಗೊಂದಲಕ್ಕೀಡಾಗಿದ್ದರು. ನಂತರ ಪರಿಸ್ಥಿತಿ ಎದುರಿಸಲು ಸಜ್ಜಾದ ತಾಲೂಕಾಡಳಿತ ತರಾತುರಿಯಲ್ಲಿ ಬಿಇಒ ಅವರನ್ನು ಕೇಂದ್ರಕ್ಕೆ ಕಳಿಸಿ, ಸಿಬ್ಬಂದಿಗೆ ಕರೆ ಮಾಡಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿತು. ಈ ದಿಢೀರ್ ಬೆಳವಣಿಗೆ ತಾಲೂಕಾಡಳಿತವನ್ನೂ ಕೆಲಕಾಲ ಗೊಂದಲದಲ್ಲಿ ಸಿಕ್ಕಿಸಿದಂತಾಗಿತ್ತು.

    ಢವಳಗಿಯಲ್ಲಿ ವಲಸಿಗರಿಗೆ ಕ್ವಾರಂಟೈನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts