More

    ಡಿಸಿ ಬಂದ್ರೂ ಬದಲಾಗಲಿಲ್ಲ ಬೈಲವಾಡ

    ಬೈಲಹೊಂಗಲ: ಗ್ರಾಮಗಳ ಅಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಇತ್ತೀಚೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿತ್ತು. ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಜಿಲ್ಲೆಯ ಒಂದು ಗ್ರಾಮಕ್ಕೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸುತ್ತಿದ್ದರು. ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಹೂಡಿ ಜನರ ನೋವುಗಳಿಗೆ ಸ್ಪಂದಿಸುತ್ತಿದ್ದರು.

    ಈ ಕಾರ್ಯಕ್ರಮದಡಿ ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಎಂ.ಜಿ.ಹಿರೇಮಠ ಅವರು ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಿದ್ದರು. ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು. ಆದರೆ, ನೀಡಿದ ಭರವಸೆ ಮಾತ್ರ ಈಡೇರಿಲ್ಲ. ಗ್ರಾಮಸ್ಥರಿಗೆ ಹಳೇ ಸಮಸ್ಯೆ ತಪ್ಪಿಲ್ಲ.
    ಬರಿ ಇಲ್ಲಗಳದ್ದೇ ದರ್ಬಾರ್: ಗ್ರಾಮದಲ್ಲಿರುವ ಬಸ್ ತಂಗುದಾಣ ಶಿಥಿಲಗೊಂಡಿದ್ದು ಬೀಳುವ ಹಂತ ತಲುಪಿದೆ. ರಾತ್ರಿ ವೇಳೆ ಇಲ್ಲಿ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಬಸ್ ತಂಗುದಾಣ ಮರು ನಿರ್ಮಾಣ ಕಾಮಗಾರಿ ಕುರಿತು ಸ್ಥಳೀಯ ನಿವಾಸಿಗಳು ಗ್ರಾಪಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಆಯಾ ಇಲಾಖೆಯವರು ಕಾಮಗಾರಿ ನಡೆಸಬೇಕು ಎಂದು ಸಬೂಬು ಹೇಳುತ್ತಿದ್ದಾರೆ. ಬಸ್ ನಿಲ್ದಾಣದ ಹತ್ತಿರ ತೆರೆದ ಬಾವಿ ಇದ್ದು, ಬಾವಿಯಲ್ಲಿ ತ್ಯಾಜ್ಯ ಸಂಗ್ರಹವಾದ ಕಾರಣ ನೀರು ಕುಡಿಯಲು ಅಯೋಗ್ಯವಾಗಿದೆ. ಬಾವಿಗೆ ತಂತಿಬೇಲಿ ಅಳವಡಿಸದ ಕಾರಣ ಮಕ್ಕಳು ಬೀಳುವ ಸಂಭವವಿದೆ. ನೇಸರಗಿ ರಸ್ತೆಯಲ್ಲಿನ ಕಿರು ಆರೋಗ್ಯ ಸಹಾಯಕಿಯರ ಕೇಂದ್ರವನ್ನು ಸುಸ್ಥಿತಿಯಲ್ಲಿಟ್ಟು ಸೇವೆ ನಡೆಸಬೇಕು ಎಂಬ ಆದೇಶ ಇದ್ದರೂ ಸಂಬಂಧಪಟ್ಟವರು ತಲೆಕೆಡಿಸಿಕೊಂಡಿಲ್ಲ. ಜಿಲ್ಲಾಧಿಕಾರಿಯೇ ರಾತ್ರಿ ಸಮಯದಲ್ಲಿ ಆರೋಗ್ಯ ಕೇಂದ್ರದ ಪಕ್ಕದಲ್ಲೇ ವಾಸ್ತವ್ಯ ಮಾಡಿದ್ದರೂ ಆರೋಗ್ಯ ಕೇಂದ್ರ ಇಂದಿಗೂ ಬದಲಾಗದಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನೂ ಹಲವಾರು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

    ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಪಂ ವ್ಯಾಪ್ತಿಯ ಯರಡಾಲ ಗ್ರಾಮವು ಚನ್ನಮ್ಮನ ಕಿತ್ತೂರು ಮತಕ್ಷೇತ್ರಕ್ಕೆ ಒಳಪಡುವುದರಿಂದ ಆಡಳಿತಾತ್ಮಕವಾಗಿ ಸೌಲಭ್ಯ ಪಡೆಯಲು ಗ್ರಾಮಸ್ಥರು ಹೈರಾಣಾಗಬೇಕಾಗಿದೆ. ಸಮಸ್ಯೆ ಕುರಿತು ಹಿಂದಿನ ಜಿಲ್ಲಾಧಿಕಾರಿಗೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಮನವರಿಕೆ ಮಾಡಿಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಒಟ್ಟಾರೆ ಗ್ರಾಮ ವಾಸ್ತವ್ಯದ ನಂತರ ಸ್ವರ್ಗಮಯವಾಗಬೇಕಾದ ಬೈಲವಾಡ ಹಾಗೂ ಯರಡಾಲ ಗ್ರಾಮಗಳು ಇಂದಿಗೂ ಯಥಾಸ್ಥಿತಿಯಲ್ಲಿ ಮುಂದುವರಿದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

    ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಕೇವಲ ಹೆಸರಿಗೆ ಮಾತ್ರ. ಕೆಲ ಸಮಸ್ಯೆಗಳು ಮಾತ್ರ ಈಡೇರಿವೆ. ಗ್ರಾಮದ ಬಸ್ ನಿಲ್ದಾಣ ದುರಸ್ತಿ ಮಾಡಿಲ್ಲ. ಬಾವಿಗೆ ಜಾಳಿಗೆ ಅಳವಡಿಸಿಲ್ಲ. ಪ್ರಾಥಮಿಕ ಕಿರು ಆರೋಗ್ಯ ಕೇಂದ್ರದ ಪರಿಸ್ಥಿತಿ ಕೇಳುವರಿಲ್ಲದಂತಾಗಿದೆ. ಈ ಕುರಿತು ಮೇಲಧಿಕಾರಿಗಳು ಗಮನ ಹರಿಸಬೇಕು.
    | ಸಂಜು ಗಿರೆಪ್ಪಗೌಡರ ಸ್ಥಳೀಯ ನಿವಾಸಿ

    ನಾನು ಗ್ರಾಮ ಪಂಚಾಯಿತಿಗೆ ಹೊಸದಾಗಿ ಬಂದಿದ್ದೇನೆ. ಗ್ರಾಮದ ಬಸ್ ತಂಗುದಾಣ ದುರಸ್ತಿ ಕಾರ್ಯ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಬಾವಿಯನ್ನು ಶೀಘ್ರ ಸ್ವಚ್ಛಗೊಳಿಸಲಾಗುವುದು. ಆರೋಗ್ಯ ಕೇಂದ್ರ ಸಮಪರ್ಕವಾಗಿ ನಿರ್ವಹಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಸೂಚಿಸಲಾಗುವುದು.
    | ಶಿವಲೀಲಾ ಯರಗಟ್ಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೈಲವಾಡ

    | ಬಸವರಾಜ ಕಲಾದಗಿ ಬೈಲಹೊಂಗಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts