More

    ಡಿಸಿ ನೇತೃತ್ವದಲ್ಲಿ ಸಂಧಾನ, ಇಂದಿನಿಂದ ರೇಷ್ಮೆಗೂಡು ಹರಾಜು

    ಶಿಡ್ಲಘಟ್ಟ: ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ರೈತ ಮುಖಂಡರು ಹಾಗೂ ರೀಲರುಗಳೊಂದಿಗೆ ಸಂಧಾನ ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ ಭಾನುವಾರದಿಂದ ಹರಾಜು ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಿದರು.

    ಸರ್ಕಾರ ರೇಷ್ಮೆ ಖರೀದಿಸುವವರೆಗೂ ಗೂಡನ್ನು ಖರೀದಿಸದಿರಲು ರೀಲರುಗಳು ತೀರ್ಮಾನಿಸಿ ಇ-ಹರಾಜಿನಲ್ಲಿ ಭಾಗಿಯಾಗದೇ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ 220 ಲಾಟ್(ಹತ್ತೂವರೆ ಟನ್) ರೇಷ್ಮೆಗೂಡು ಮಾರುಕಟ್ಟೆಗೆ ತಂದಿದ್ದ 300ಕ್ಕೂ ಹೆಚ್ಚು ರೈತರು ಆತಂಕಗೊಂಡಿದ್ದರು.

    ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಡಿಸಿ, ರೈತರ ಅನುಮಾನಗಳನ್ನು ಬಗೆಹರಿಸಿದರು, ಸರ್ಕಾರ ಕೆಎಸ್‌ಎಂಬಿ ಮೂಲಕ ಪ್ರತಿಯೊಬ್ಬ ನೂಲು ಬಿಚ್ಚಣಿಕೆದಾರರಿಂದ ಒಂದು ವಾರಕ್ಕೆ 30ಕೆ.ಜಿ ರೇಷ್ಮೆ ಖರೀದಿಸುವುದಾಗಿ ಲಿಖಿತವಾಗಿ ಪತ್ರ ನೀಡಿದೆ. ಅದರಂತೆ ಖರೀದಿ ಮಾಡಲಾಗುತ್ತದೆ, ನೀವು ಹರಾಜು ಪ್ರಕ್ರಿಯೆಯನ್ನು ಮುಂದುವರೆಸುವಂತೆ ಸೂಚಿಸಿದರು.

    ಶುಕ್ರವಾರ ಕೆಎಸ್‌ಎಂಬಿ ನೀಡಿದ ಆದೇಶದಲ್ಲಿ ರೇಷ್ಮೆ ಒತ್ತೆ ಸಾಲದ ಮಿತಿಯನ್ನು ಒಂದರಿಂದ ಎರಡು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. 2019ರ ಏ.1ರಿಂದ ಇಲ್ಲಿಯವರೆಗೆ ರೇಷ್ಮೆಗೂಡು ಖರೀದಿ ಮತ್ತು ಮಾರಾಟದ ವಹಿವಾಟನ್ನು ಕೆಎಸ್‌ಎಂಬಿ ಸಂಸ್ಥೆ ಹಾಗೂ ಓಪನ್ ಮಾರ್ಕೆಟ್‌ನಲ್ಲಿ ವಹಿವಾಟು ನಡೆಸಿರುವರೋ ಅಂತಹ ರೀಲರ್ ಗಳಿಂದ ಮಾತ್ರ ರೇಷ್ಮೆ ಖರೀದಿ ಮಾಡುವಂತೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

    ಉಪವಿಭಾಗಾಧಿಕಾರಿ ರಘುನಂದನ್, ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ತಹಸೀಲ್ದಾರ್ ಕೆ.ಅರುಂಧತಿ, ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಪದಾಧಿಕಾರಿಗಳು, ರೀಲರ್‌ಗಳು ಇದ್ದರು.

    ರೇಷ್ಮೆ ಸಾಗಾಣಿಕೆಗೆ ಪಾಸ್: ಹೊರರಾಜ್ಯಕ್ಕೆ ರೇಷ್ಮೆ ಸಾಗಾಣಿಕೆ ಮಾಡಲು ಪಾಸ್ ರೀಲರ್‌ಗಳಿಗೆ ನಿಂದ ಪಾಸ್ ನೀಡಲಾಗುವುದು, ಕಚ್ಚಾ ರೇಷ್ಮೆ ಮಾರಾಟ ಮಾಡಲು ರೀಲರುಗಳು ರೇಷ್ಮೆ ನೂಲನ್ನು ಖರೀದಿ ಕೇಂದ್ರಕ್ಕೆ ಸಲ್ಲಿಸಿದ ತಕ್ಷಣ ಶೇ.60ರಷ್ಟು ಮೌಲ್ಯವನ್ನು ರೀಲರುಗಳಿಗೆ ಪಾವತಿಸಲಾಗುವುದು. ಕಚ್ಚಾ ರೇಷ್ಮೆ ಪರೀಕ್ಷೆ ಮಾಡಿಸಿ ವರದಿ ಬಂದ ನಂತರ ಉಳಿಕೆ ಹಣ ಪಾವತಿಸಲಾಗುವುದು ಕೆಎಸ್‌ಎಂಬಿ ಮತ್ತೊಂದು ಆದೇಶದಲ್ಲಿ ತಿಳಿಸಿದೆ.

    23 ಲಕ್ಷ ಕಂದಾಯ ಬಾಕಿ: ರೇಷ್ಮೆಗೂಡು ಮಾರುಕಟ್ಟೆಯಿಂದ 23 ಲಕ್ಷ ರೂ.ಕಂದಾಯ ಬಾಕಿಯಿದೆ. ದಯಮಾಡಿ ಅದನ್ನು ಕಟ್ಟಲು ಅಧಿಕಾರಿಗಳಿಗೆ ಸೂಚಿಸುವಂತೆ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಕೋರಿದರು. ಯಾಕ್ರೀ ಕಂದಾಯ ಉಳಿಸಿಕೊಂಡಿದ್ದೀರಿ? ಎಂದು ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ಅವರಿಗೆ ಡಿಸಿ ಪ್ರಶ್ನಿಸಿದರು. ವಜಾ ಆಗಬಹುದೆಂದು ಕಾಯುತ್ತಿದ್ದೆವು. ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಸುಭಾಷ್ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts