More

    ಡಿಜಿಟಲ್ ಲೈಬ್ರರಿಗೆ 7 ಸಾವಿರ ನೋಂದಣಿ, ಜಿಲ್ಲಾಮಟ್ಟದ ಗ್ರಂಥಾಲಯಕ್ಕೆ ನೀಲಿನಕ್ಷೆ ಒಟ್ಟು ಓದುಗರ ಸಂಖ್ಯೆ54,050

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಅಂಗೈನಲ್ಲೇ ಮೊಬೈಲ್ ಎಂಬ ಮಾಹಿತಿ ಕಣಜವಿದ್ದರೂ, ಗ್ರಂಥಾಲಯಗಳು ಬೇಡಿಕೆ ಕಳೆದುಕೊಂಡಿಲ್ಲ. ಆದರೆ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಇದೇ ಗ್ರಂಥಾಲಯಗಳು ಡಿಜಿಟಲೀಕರಣಕ್ಕೆ ತೆರೆದುಕೊಳ್ಳುತ್ತಿದ್ದು, ಇದಕ್ಕೆ ಜಿಲ್ಲೆಯೂ ಹೊರತಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 5 ಡಿಜಿಟಲ್ ಶಾಖಾ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 7 ಸಾವಿರ ಓದುಗರು ನೋಂದಾಯಿಸಿಕೊಂಡಿದ್ದಾರೆ.

    ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಗ್ರಂಥಾಲಯ ಆರಂಭಿಸಿ ಡಿಜಿಟಲೀಕರಿಸಿದ ಎಲ್ಲ ಬಗೆಯ ಪುಸ್ತಕ, ನಿಯತಕಾಲಿಕೆಗಳನ್ನು ಓದುಗರಿಗೆ ತಲುಪಿಸುತ್ತಿವೆ. ಇದರ ಜತೆಗೆ ಮಕ್ಕಳ ವಿಡಿಯೋಗಳನ್ನು ಓದುಗರು ತಾವಿರುವ ಸ್ಥಳದಿಂದಲೇ ಪಡೆಯಬಹುದಾಗಿದೆ. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಲೈಬ್ರರಿ ಸೌಲಭ್ಯವನ್ನು ಹೆಚ್ಚು ಮಂದಿ ಉಪಯೋಗಿಸಿಕೊಂಡಿದ್ದಾರೆ. ಗ್ರಂಥಾಲಯಗಳೆಡೆಗಿನ ಸೆಳೆತಕ್ಕೆ ಸಿಲುಕಿದವರಲ್ಲಿ ಹಿರಿಯರಷ್ಟೇ ಅಲ್ಲದೆ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಲು ಹಾತೊರೆಯುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು ಡಿಜಿಟಲ್ ಲೈಬ್ರರಿಯತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಆರಂಭವಾದ ಕೆಲವೇ ತಿಂಗಳಲ್ಲಿ ಸಾವಿರಾರು ಓದುಗರು ನೋಂದಾಯಿಸಿಕೊಂಡಿರುವುದು ಇದರ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಇದುವರೆಗೆ ಜಿಲ್ಲೆಯ ಎಲ್ಲ ಲೈಬ್ರರಿಗಳು ಸೇರಿ 54,050 ಓದುಗರು ನೋಂದಣಿಯಾಗಿದ್ದಾರೆ.

    ಗ್ರಂಥಾಲಯಗಳು ಪುನರಾರಂಭ: ಲಾಕ್‌ಡೌನ್ ತೆರವು ಬಳಿಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಪುನರಾರಂಭಗೊಂಡಿರುವ ನಡುವೆಯೇ ಜಿಲ್ಲಾಡಳಿತದ ಅನುಮತಿಯೊಂದಿಗೆ ಜಿಲ್ಲೆಯ ಗ್ರಂಥಾಲಯಗಳು ಬಾಗಿಲು ತೆರೆಯಲು ಆರಂಭಿಸಿವೆ. ಕರೊನಾ ಆತಂಕದಿಂದ ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ಕಡಿಮೆ ಇದ್ದರೂ ಇತ್ತೀಚೆಗೆ ದಿನೇದಿನೆ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಗ್ರಂಥಾಲಯ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

    5 ಶಾಖೆ, 98 ಲೈಬ್ರರಿ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 5 ಶಾಖಾ ಲೈಬ್ರರಿ ಹಾಗೂ 98 ಗ್ರಾಪಂ ನಿರ್ವಹಣೆಯ ಗ್ರಂಥಾಲಯಗಳಿವೆ. ಇದರಲ್ಲಿ 4 ನಿರ್ವಹಣೆ ಕೊರತೆ ಮತ್ತಿತರ ಕಾರಣಗಳಿಂದ ತಾತ್ಕಾಲಿಕವಾಗಿ ಬಂದ್ ಆಗಿವೆ ಎನ್ನಲಾಗಿದೆ. ಇವೆಲ್ಲ ಗ್ರಂಥಾಲಯಲ್ಲಿ 7.5 ಲಕ್ಷಕ್ಕೂ ಅಧಿಕ ವಿವಿಧ ಪುಸ್ತಕಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ 8 ಗ್ರಾಪಂಗಳಲ್ಲಿ ಗ್ರಂಥಾಲಯ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ದಿವಾಕರ್ ತಿಳಿಸಿದ್ದಾರೆ.

    ಗಮನ ಸೆಳೆವ ಮಕ್ಕಳ ಲೈಬ್ರರಿ: ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ದೇವನಹಳ್ಳಿಯಲ್ಲಿ ಆರಂಭವಾದ ಮಕ್ಕಳ ಲೈಬ್ರರಿಗೆ ಸಾಕಷ್ಟು ಸ್ಪಂದನೆ ವ್ಯಕ್ತವಾಗಿದೆ. 8ನೇ ತರಗತಿವರೆಗೆ ಮಕ್ಕಳ ಮನೋಭಾವ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಲೈಬ್ರರಿ ಜಿಲ್ಲೆಗೆ ಕೇಂದ್ರ ಬಿಂದುವಾಗಿದೆ.

    ಸ್ವಂತ ಕಟ್ಟಡ ಹೊಂದಲು ಉತ್ಸುಕತೆ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಕಟ್ಟಡಗಳು ನಗರಸಭೆ, ಪುರಸಭೆ ಹಾಗೂ ಪಂಚಾಯಿತಿಯಿಂದ ನೀಡಲಾದ ಉಚಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಪಡೆಯುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ದೇವನಹಳ್ಳಿ ಪಟ್ಟಣದ ಕೋಟೆ ಬಳಿಯಲ್ಲಿ ನಿವೇಶನ ಮಂಜೂರಾಗಿದ್ದು, ಶೀಘ್ರದಲ್ಲೇ ಸುಸಜ್ಜಿತ ಜಿಲ್ಲಾಮಟ್ಟದ ಗ್ರಂಥಾಲಯ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಇಲಾಖೆಯ ಉತ್ಸುಕತೆಗೆ ಜಿಲ್ಲಾಡಳಿತ ನೆರವು ನೀಡಿದರೆ ಪ್ರತಿ ತಾಲೂಕಿನಲ್ಲೂ ದೊಡ್ಡಮಟ್ಟದ ಡಿಜಿಟಲ್ ಜತೆಗೆ ನವೀನ ಮಾದರಿಯ ಗ್ರಂಥಾಲಯಗಳನ್ನು ನಿರ್ಮಿಸಲು ಇಲಾಖೆ ಇಂಗಿತ ವ್ಯಕ್ತಪಡಿಸಿದೆ.

    ಇಂದಿನ ಟ್ರೆಂಡ್‌ಗೆ ತಕ್ಕಂತೆ ಡಿಜಿಟಲ್ ಲೈಬ್ರರಿಗಳ ಕಡೆ ಓದುಗರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೂ ಪುಸ್ತಕಗಳನ್ನು ಓದುವ ಹವ್ಯಾಸಿಗಳಿಗೇನೂ ಕೊರತೆಯಿಲ್ಲ, ಪ್ರಮುಖವಾಗಿ ವಿದ್ಯಾರ್ಥಿಗಳು ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಣಿಯಾಗುತ್ತಿರುವವರು ಹೆಚ್ಚೆಚ್ಚು ಗ್ರಂಥಾಲಯಗಳ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಇಲಾಖೆ ಶ್ರಮಿಸುತ್ತಿದೆ.
    ದಿವಾಕರ್, ಉಪನಿರ್ದೇಶಕ ಗ್ರಂಥಾಲಯ ಇಲಾಖೆ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts