More

    ಡಾ.ಕೋರೆ ಶ್ರೇಷ್ಠ ಲೋಕಸೇವಕ

    ಬೆಳಗಾವಿ: ಗುರುಗಳೇ ಒಟ್ಟುಗೂಡಿ ಭಕ್ತನನ್ನು ಗೌರವಿಸಿ, ಸನ್ಮಾನಿಸುವುದು ವಿಶೇಷ. ಅಂಥ ಲೋಕಸೇವಕರ ಸಾಲಿನಲ್ಲಿ ಡಾ.ಪ್ರಭಾಕರ ಕೋರೆ ಮೊದಲಿಗರಾಗಿ ಕಾಣುತ್ತಾರೆ ಎಂದು ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.

    ಇಲ್ಲಿನ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿನಂದನಾ ಸಮಾರಂಭ ಹಾಗೂ ಮಠಾಧೀಶರ ಬೃಹತ್ ಚಿಂತನಾ ಸಮಾವೇಶದಲ್ಲಿ ಮಾತನಾಡಿದರು.

    ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಬೆಳಗಾವಿಗೆ ಮಾತ್ರ ಸೀಮಿತವಲ್ಲ. ಜಗತ್ತಿಗೆ ಚಿರಪರಿಚಿತರು. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಠಗಳು, ಸರ್ಕಾರಗಳಿಂದ ಸಾಧ್ಯವಾಗದಂತಹ ಕೆಲಸವನ್ನು ಕೆಎಲ್‌ಇ ಸಂಸ್ಥೆಯ ಮೂಲಕ ಡಾ.ಪ್ರಭಾಕರ ಕೋರೆ ಅವರು ಸಾಧಿಸಿದ್ದಾರೆ. ಡಾ.ಕೋರೆ ನಿಸ್ವಾರ್ಥ ಸಾಮಾಜಿಕ ಸೇವೆಯ ಮೂಲಕ ಕೆಎಲ್‌ಇ ಸಂಸ್ಥೆಯನ್ನು ದೇಶ, ವಿದೇಶಗಳಲ್ಲಿ ಕಟ್ಟಿ ಬೆಳೆಸಿದ್ದಾರೆ. ಗಡಿಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುತ್ತಿದ್ದಾರೆ ಎಂದರು.

    ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು, ಲಿಂಗರಾಜ ದೇಸಾಯಿ ಅವರು ಮಾಡಿದ ತ್ಯಾಗ ಅಷ್ಟಿಷ್ಟಲ್ಲ. ಕಾಯಕ ದಾಸೋಹ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳು ಶಿಕ್ಷಣ ಸೇವೆ ನೀಡುತ್ತ ಬಂದಿವೆ. ಮಠ ಎಂದರೆನೇ ವಿದ್ಯಾರ್ಥಿ ನಿಲಯ ಎಂದರು. ಶಿವಮೊಗ್ಗದ ಆನಂದಪುರಂ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನೂರು ವರ್ಷಗಳ ಹಿಂದೆ ಲಿಂಗಾಯತರಿಗೆ ಪೆನ್ನು ಹಿಡಿಯಲು ಬರುತ್ತಿರಲಿಲ್ಲ. ಅಂತ ಸಮಾಜಕ್ಕೆ ಶಿಕ್ಷಣ ಧಾರೆ ಎರೆದವರು ಲಿಂಗಾಯತ ಮಠ-ಮಾನ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳು. ಸಮಾಜದ ನಾಡಿ ಮಿಡಿತ ಗುರುತಿಸಿ ಮಠಗಳು ಅಗತ್ಯತೆ ಪೂರೈಸುತ್ತ ಬಂದಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಮಠ-ಮಾನ್ಯಗಳು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

    ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಮುಂಡರಗಿ ಅನ್ನದಾನೇಶ್ವರಿ ಸಂಸ್ಥಾನ ಮಠದ ಡಾ.ಅನ್ನದಾನೇಶ್ವರಿ ಸ್ವಾಮೀಜಿ, ಮುರಗೋಡ ನೀಲಕಂಠ ಸ್ವಾಮೀಜಿ, ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಇಳಕಲ್ಲ ಗುರುಮಹಾಂತ ಸ್ವಾಮೀಜಿ, ಹಾವೇರಿ ಸದಾಶಿವ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಇಂಚಲ ಶಿವಾನಂದ ಭಾರತಿ ಸ್ವಾಮೀಜಿ, ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ, ನಿರ್ದೇಶಕ ಮಹಾಂತೇಶ ಕವಟಗಿಮಠ, ವಿವಿಧ ಮಠಾಧೀಶರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts