More

    ಠಾಣೆಗಳ ಮುಂದೆ ವಾಹನಗಳ ರಾಶಿ!

    ಹುಬ್ಬಳ್ಳಿ: ಲಾಕ್​ಡೌನ್ ಆರಂಭವಾದ ದಿನದಿಂದ ಈವರೆಗೂ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ಪೊಲೀಸರು ಈವರೆಗೆ 3,712 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆರಂಭದಲ್ಲಿ ಹಲವು ವಾಹನಗಳನ್ನು ಬಿಡುಗಡೆ ಮಾಡಿದ್ದ ಪೊಲೀಸರು, ಕಳೆದ ಮೂರ್ನಾಲ್ಕು ವಾರಗಳಿಂದ ಬಿಡುತ್ತಿಲ್ಲ. ಹಾಗಾಗಿ, ಪ್ರತಿ ಠಾಣೆ ಮುಂದೆ ನೂರಾರು ವಾಹನಗಳು ಧೂಳು ಹಿಡಿಯುತ್ತಿವೆ. ಇದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ವೀಕೆಂಡ್ ಕರ್ಫ್ಯೂ, ಜನತಾ ಕರ್ಫ್ಯೂ ಆರಂಭದ ದಿನಗಳಲ್ಲಿ ಅವಳಿ ನಗರದಲ್ಲಿ ಪೊಲೀಸರು ಹಲವು ವಾಹನಗಳನ್ನು ಜಪ್ತಿ ಮಾಡಿದ್ದರು. ನಂತರ ಶುರುವಾದ ಲಾಕ್​ಡೌನ್ ಸಂದರ್ಭದಲ್ಲೂ ಅಧಿಕ ವಾಹನಗಳನ್ನು ಜಪ್ತಿ ಮಾಡಿದರು. ಈಗಲೂ ನಿತ್ಯ 60ರಿಂದ 100 ವಾಹನಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ.

    ಸುಮಾರು ಮೂರ್ನಾಲ್ಕು ವಾರಗಳಿಂದ ವಾಹನಗಳನ್ನು ಬಿಡುತ್ತಿಲ್ಲ. ಹಾಗಾಗಿ, ಎಲ್ಲ ಠಾಣೆಗಳ ಎದುರು ವಾಹನಗಳ ರಾಶಿ ಕಂಡು ಬರುತ್ತಿದೆ. ಕೆಲ ಠಾಣೆಗಳಲ್ಲಿ ವಾಹನ ನಿಲುಗಡೆಗೆ ಸ್ಥಳ ಇಲ್ಲದ ಕಾರಣ ರಸ್ತೆ ಮೇಲೆಯೇ ನಿಲ್ಲಿಸಲಾಗಿದೆ. ಮೊದಲು ಎರಡು, ಮೂರು ದಿನಗಳಲ್ಲಿ ಕೋರ್ಟ್ ಅನುಮತಿ ಪಡೆದು, ವಾಹನಗಳ ಮಾಲೀಕರಿಂದ ಬಾಂಡ್ ಪಡೆದು ವಾಹನಗಳನ್ನು ಬಿಡುತ್ತಿದ್ದರು. ಇದೀಗ ಹೈಕೋರ್ಟ್ ಆದೇಶದ ಪ್ರಕಾರ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.

    ಶಿಥಿಲಗೊಳ್ಳುವ ಆತಂಕ

    ಮೂರ್ನಾಲ್ಕು ವಾರಗಳಿಂದ ಪೊಲೀಸ್ ಠಾಣೆಗಳ ಎದುರು ಜಪ್ತಿ ವಾಹನಗಳನ್ನು ನಿಲ್ಲಿಸಲಾಗಿದೆ. ಇದೀಗ ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ, ಮಳೆ- ಗಾಳಿಗೆ ವಾಹನಗಳು ಶಿಥಿಲಗೊಳ್ಳುವ ಆತಂಕ ಮಾಲೀಕರಲ್ಲಿ ಶುರುವಾಗಿದೆ. ವಾಹನ ಬಿಡುಗಡೆ ಮಾಡಿದ ನಂತರ ದಂಡ ಪಾವತಿಸುವ ಜತೆಗೆ ವಾಹನ ದುರಸ್ತಿ ಮಾಡಿಸುವ ಹೊರೆ ಬೀಳುತ್ತದೆ.

    ದಂಡದ ಮೊತ್ತ ಕೋಟಿಯತ್ತ…

    ಹು-ಧಾ ಕಮಿಷನರೇಟ್ ಪೊಲೀಸರು ಲಾಕ್​ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ 96,58,950 ರೂ. ದಂಡ ಸಂಗ್ರಹ ಮಾಡುವ ಮೂಲಕ ಕೋಟಿ ಸನಿಹಕ್ಕೆ ಬಂದಿದ್ದಾರೆ. ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದ 43,907 ಜನರಿಂದ ಇಷ್ಟು ದಂಡ ಸಂಗ್ರಹಿಸಲಾಗಿದೆ. ಈಗಲೂ ನಿತ್ಯ ಲಕ್ಷಾಂತರ ರೂ. ಸಂಗ್ರಹ ಆಗುತ್ತಿದೆ. ಲಾಕ್​ಡೌನ್ ನಿಯಮ ಉಲ್ಲಂಘಿಸಿದ 350ಕ್ಕೂ ಹೆಚ್ಚ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಹೀಗಿದೆ ಹೈಕೋರ್ಟ್ ಆದೇಶ

    ಲಾಕ್​ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಜಪ್ತಿ ಮಾಡಿದ ವಾಹನಗಳನ್ನು ದಂಡ ಪಾವತಿಯೊಂದಿಗೆ ಮಾಲೀಕರಿಗೆ ಹಸ್ತಾಂತರಿಸಲು ಹೈಕೋರ್ಟ್ ಆದೇಶಿಸಿದೆ. ಆಯಾ ಠಾಣೆ ವ್ಯಾಪ್ತಿಯಲ್ಲಿ ಮಾಲೀಕರು ಅರ್ಜಿ ಸಲ್ಲಿಸಬೇಕು. ವಾಹನದ ಮಾಲೀಕತ್ವ ಪರಿಶೀಲಿಸಿದ ನಂತರ ದ್ವಿಚಕ್ರ ವಾಹನಕ್ಕೆ 500 ರೂ., ನಾಲ್ಕು ಚಕ್ರ ವಾಹನಕ್ಕೆ 1,000 ರೂ. ಸರಕು, ಸಾಗಣೆ ವಾಹನ ಮಾಲೀಕರಿಂದ 2,000 ರೂ. ದಂಡ ಸಂಗ್ರಹಿಸುವಂತೆ ಸೂಚಿಸಿದೆ. ಇದರ ಬಗ್ಗೆ ಪೊಲೀಸರಿಂದ ಸ್ಪಷ್ಟ ಮಾಹಿತಿ ಸಿಗದಿದ್ದರಿಂದ ಜನ ಠಾಣೆಗೆ ಅಲೆದಾಡುತ್ತಿದ್ದಾರೆ.

    ಪೊಲೀಸರಲ್ಲೇ ಗೊಂದಲ

    ಈ ಮೊದಲು ಬಾಂಡ್ ಮೇಲೆ ವಾಹನ ಬಿಡಲಾಗುತ್ತಿತ್ತು. ನಂತರ ಮಾಲೀಕರು ಕೋರ್ಟ್​ಗೆ ತೆರಳಿ ದಂಡ ಪಾವತಿಸುತ್ತಿದ್ದರು. ಇದೀಗ ಠಾಣೆಯಲ್ಲೇ ದಂಡ ಪಾವತಿಸಲು ಕೋರ್ಟ್ ಸೂಚಿಸಿದೆ. ಇದರನುಸಾರವಾಗಿ, ಜಪ್ತಿ ಮಾಡಿದ ವಾಹನ ಮಾಲೀಕರಿಂದ ದಂಡ ಪಾವತಿಸಿಕೊಂಡರೆ ರಸೀದಿ ಕೊಡಬೇಕಾಗುತ್ತದೆ. ಯಾವ ರೀತಿಯ ರಸೀದಿ ಕೊಡಬೇಕೆಂಬ ಗೊಂದಲದಲ್ಲಿ ಇಲಾಖೆ ಸಿಲುಕಿದೆ. ಈ ಬಗ್ಗೆ ಚರ್ಚೆ ಸಾಗಿದೆ.

    ಹೈಕೋರ್ಟ್ ಆದೇಶದಂತೆ ವಾಹನಗಳನ್ನು ಸಾರ್ವಜನಿಕರಿಗೆ ವಾಪಸ್ ನೀಡಲಾಗುವುದು. ಈ ಬಗ್ಗೆ ಶೀಘ್ರವೇ ಆಯಾ ಠಾಣೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

    | ಲಾಭೂರಾಮ, ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts