More

    ಟ್ಯಾಗೋರ್ ಕಡಲ ತೀರ ಕಸ ಭರಪೂರ

    ಸುಭಾಸ ಧೂಪದಹೊಂಡ ಕಾರವಾರ

    ಜಿಲ್ಲಾಡಳಿತ ಹಾಗೂ ನಗರಸಭೆಯ ನಡುವಿನ ಸಾಮರಸ್ಯದ ಕೊರತೆಯಿಂದ ಇಲ್ಲಿನ ಟ್ಯಾಗೋರ್ ಕಡಲ ತೀರ ಬಳಲುತ್ತಿದೆ. ತ್ಯಾಜ್ಯದ ರಾಶಿ ತುಂಬಿಕೊಂಡಿದೆ.

    ತೀರದಲ್ಲಿ ಮರಳಿನ ರಾಶಿ ಇರುವ ಪ್ರದೇಶಗಳಲ್ಲಿ ಜಿಲ್ಲಾಡಳಿತದ ಕಸ ಸ್ವಚ್ಛ ಮಾಡುವ ವಾಹನದ ಮೂಲಕ ಸ್ವಚ್ಛತೆ ಮಾಡಲಾಗುತ್ತದೆ. ಆದರೆ, ವಾಹನ ಓಡಾಡದ ಪ್ರದೇಶಗಳಲ್ಲಿ ತ್ಯಾಜ್ಯ ತೆಗೆಯಲು ಬೇರೆ ಕಾರ್ವಿುಕರಿಲ್ಲ. ಇದರಿಂದ ಅಲ್ಲೆಲ್ಲ ಹೊಲಸು ತುಂಬಿಕೊಂಡಿದೆ. ಮಯೂರವರ್ಮ ವೇದಿಕೆಯ ಎದುರಿನ ಮೈದಾನ, ಹನುಮಾನ್ ಮೂರ್ತಿಯ ಎದುರಿನ ಪ್ರದೇಶಗಳಲ್ಲಿ ಮದ್ಯದ ಬಾಟಲಿಗಳು, ತಿಂದೆಸೆದ ತಟ್ಟೆಗಳು, ಪ್ಲಾಸ್ಟಿಕ್ ಕೊಟ್ಟೆಗಳು ಮುಂತಾದ ಕಸದ ರಾಶಿ ರಾಶಿ ಕಸ ಬಿದ್ದುಕೊಂಡಿದೆ. ಕೋಡಿಬಾಗದಲ್ಲಿ ಕಾಳಿ ಸಂಗಮದ ಸಮೀಪ ಲೋಡ್​ಗಟ್ಟಲೆ ಮದ್ಯದ ಬಾಟಲಿಗಳು ಬಿದ್ದಿವೆ. ವಿವಿಧ ಸಂಸ್ಥೆಗಳು ಆಗಾಗ ತೀರ ಸ್ವಚ್ಛ ಮಾಡುತ್ತಿದ್ದರೂ ಮತ್ತಷ್ಟು ಉಳಿದುಕೊಂಡಿದೆ.

    ಸಮಸ್ಯೆ ಆಗಿದ್ದೆಲ್ಲಿ?: ಈ ಮೊದಲು ಟ್ಯಾಗೋರ್ ಕಡಲ ತೀರ, ವಾರ್​ಶಿಪ್ ಮ್ಯೂಸಿಯಂ, ಉದ್ಯಾನ ಎಲ್ಲವನ್ನೂ ನಗರಸಭೆ ನಿರ್ವಹಣೆ ಮಾಡುತ್ತಿತ್ತು. ಅದರಿಂದ ಬರುವ ಆದಾಯವನ್ನೂ ನಗರಸಭೆಯೇ ಪಡೆಯುತ್ತಿತ್ತು.

    ಐದು ವರ್ಷಗಳ ಹಿಂದೆ ಜಿಲ್ಲಾಡಳಿತವು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ‘ಕಡಲ ತೀರ ಅಭಿವೃದ್ಧಿ ಸಮಿತಿ’ ಎಂಬ ಸ್ವತಂತ್ರ ಸಂಸ್ಥೆಯನ್ನು ಹುಟ್ಟು ಹಾಕಿಕೊಂಡಿದೆ. ಅದರಡಿ ಪ್ರವಾಸಿ ತಾಣಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕಡಲ ತೀರಗಳಲ್ಲಿ ಲೈಫ್​ಗಾರ್ಡ್​ಗಳ ನೇಮಕ, ಫುಡ್ ಕೋರ್ಟ್, ಜಲ ಸಾಹಸ ಕ್ರೀಡೆ ಮುಂತಾದ ಚಟುವಟಿಕೆಗಳಿಗೆ ಟೆಂಡರ್ ಮೂಲಕ ಮಾಡಿಕೊಡಲಾಗಿದೆ. ಅದರಿಂದ ಬರುವ ಆದಾಯವನ್ನು ಕಡಲ ತೀರ ಅಭಿವೃದ್ಧಿ ಸಮಿತಿ ಪಡೆಯುತ್ತಿದೆ. ಜಿಲ್ಲಾಡಳಿತದ ನಡೆಯಿಂದ ಸಿಡಿಮಿಡಿಗೊಂಡ ನಗರಸಭೆಯು ಕಡಲ ತೀರದ ಸ್ವಚ್ಛತೆ ಸೇರಿ ಎಲ್ಲ ಸೇವೆಗಳನ್ನು ವಾಪಸ್ ಪಡೆದಿದೆ. ‘ಕಡಲ ತೀರಕ್ಕಾಗಿ ನಗರಸಭೆಯ ಯಾವುದೇ ಅನುದಾನ ಬಳಸಬಾರದು’ ಎಂದು ಠರಾವು ಮಂಡಿಸಲಾಗಿದೆ.

    ಕೋವಿಡ್​ನಿಂದ ಸಮಸ್ಯೆ: 2020 ರ ವರೆಗೆ ಕಡಲ ತೀರ ಅಭಿವೃದ್ಧಿ ಸಮಿತಿ ಲಾಭದಿಂದ ನಡೆಯುತ್ತಿತ್ತು. ಪ್ರವಾಸೋದ್ಯಮ ಬೆಳವಣಿಗೆಗೆ ಸಮಿತಿ ಸಾಕಷ್ಟು ಕೊಡುಗೆ ನೀಡಿತ್ತು. ಆದರೆ, ಕೋವಿಡ್ ಲಾಕ್​ಡೌನ್ ಅಭಿವೃದ್ಧಿ ಸಮಿತಿಯನ್ನು ನಷ್ಟಕ್ಕೆ ನೂಕಿದೆ. ಸಮಿತಿಯ ಅಡಿ ಕಾರ್ಯನಿರ್ವಹಿಸುತ್ತಿರುವವರಿಗೆ ವೇತನ ನೀಡಲು ಹಣವಿಲ್ಲದಂತಾಗಿದೆ. ಹೀಗಿರುವಾಗ ತೀರದ ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಕನಸಿನ ಮಾತಾಗಿದೆ. ಇದರಿಂದ ಪ್ರವಾಸಿ ತಾಣಗಳು ಸೊರಗುತ್ತಿವೆ.

    ತೀರವನ್ನು ನಮಗೆ ಕೊಡಿ ಎಂಬ ಬೇಡಿಕೆ: ಟ್ಯಾಗೋರ್ ಕಡಲ ತೀರ, ಡ್ರೖೆವ್ ಇನ್ ಎಂಬ ಖಾಸಗಿ ಹೋಟೆಲ್ ಸೇರಿ ಇತರ ಪ್ರದೇಶಗಳನ್ನು ನಗರಸಭೆಗೆ ಹಸ್ತಾಂತರಿಸಬೇಕು ಎಂದು ಅಧ್ಯಕ್ಷ ಡಾ.ನಿತಿನ್ ಪಿಕಳೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ. ನಗರಸಭೆಯ ನೂತನ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಅವರು ಈ ಪ್ರಸ್ತಾಪವನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ.

    ಸಾಮಾನ್ಯವಾಗಿ ಎಲ್ಲ ನಗರಗಳ ಪಾರ್ಕ್ ಹಾಗೂ ಇತರ ಪ್ರವಾಸಿ ಕೇಂದ್ರಗಳ ನಿರ್ವಹಣೆಯನ್ನು ಅಲ್ಲಿನ ನಗರ ಸ್ಥಳೀಯ ಸಂಸ್ಥೆ ಮಾಡುತ್ತದೆ. ಆದರೆ, ಕಾರವಾರದಲ್ಲಿ ಟ್ಯಾಗೋರ್ ಕಡಲ ತೀರ ಹಾಗೂ ಇತರ ಪ್ರವಾಸಿ ಕೇಂದ್ರಗಳನ್ನು ಸಮಿತಿ ನೋಡುತ್ತಿದೆ. ಇದರಿಂದ ನಗರಸಭೆ ಹಿಂದೆ ಸರಿದಿದೆ. ಸ್ವಚ್ಛತೆ ಮಾಡುವ ಕೆಲಸ ಮಾತ್ರ ನಮ್ಮದು ಆದಾಯವೆಲ್ಲ ಅವರಿಗೆ ಎಂಬ ನೀತಿ ಸರಿಯಲ್ಲ. ತೀರದ ಸಂಪೂರ್ಣ ಜವಾಬ್ದಾರಿಯನ್ನು ನಮಗೆ ಹಸ್ತಾಂತರಿಸಿದರೆ ಮಾತ್ರ ನಾವು ಸ್ವಚ್ಛತೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದೇವೆ. | ಡಾ.ನಿತಿನ್ ಪಿಕಳೆ ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts