More

    ಟೋಲ್ ಸಿಬ್ಬಂದಿ ಗೂಂಡಾಗಿರಿ!

    ಹಾವೇರಿ: ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿ ಹಾವೇರಿ-ಹಾನಗಲ್ಲ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನಿರ್ವಿುಸಿರುವ ಟೋಲ್​ಪ್ಲಾಜಾದಲ್ಲಿ ಟೋಲ್ ಸಂಗ್ರಹ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆರೋಪದ ಬೆನ್ನಲ್ಲೇ ಅಲ್ಲಿನ ಸಿಬ್ಬಂದಿ ಚಾಲಕರ ಮೇಲೆ ಗುಂಡಾಗಿರಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಟೋಲ್​ನಲ್ಲಿ ಸಂಚರಿಸುವ ವಾಹನಗಳಿಗೆ ಅವುಗಳ ಸಂಖ್ಯೆಯನ್ನು ನಮೂದಿಸಿ ಅಧಿಕೃತವಾಗಿ ರಸೀದಿಯನ್ನು ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದನ್ನು ಪ್ರಶ್ನಿಸಿದ ಲಾರಿ ಚಾಲಕರಿಗೆ ಗುರುವಾರ ರಾತ್ರಿ ಟೋಲ್​ನಲ್ಲಿರುವ ಐದಾರು ಸಿಬ್ಬಂದಿ ಸೇರಿ ಹಲ್ಲೆಗೂ ಮುಂದಾಗಿರುವ ಮಾಹಿತಿ ಲಭ್ಯವಾಗಿದೆ. ಲಾರಿ ನಂಬರ್ ನಮೂದಿಸಿ ರಸೀದಿ ನೀಡುವಂತೆ ಕೇಳಿದ ಚಾಲಕರೊಂದಿಗೆ ವಾಗ್ವಾದಕ್ಕಿಳಿದ ಸಿಬ್ಬಂದಿ, ‘ಕೆಆರ್​ಡಿಸಿಎಲ್​ನಿಂದ ನಮಗೆ ತಾತ್ಕಾಲಿಕವಾಗಿ ಟೋಲ್ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. ದಾವಣಗೆರೆಯಲ್ಲಿರುವ ಮಾಲೀಕ ತಿಪ್ಪೇಸ್ವಾಮಿಯವರು ರಾಜಕೀಯ ಪವರ್ ಹೊಂದಿದ್ದಾರೆ. ನಿಮ್ಮನ್ನು ಹೊಡೆದರೂ ಇಲ್ಲಿ ಯಾರು ಕೇಳುವುದಿಲ್ಲ’ ಎಂದು ದಬಾಯಿಸಿದ್ದಾರೆ. ನಂತರ ಆಲದಕಟ್ಟಿ, ಹಾವೇರಿಯಲ್ಲಿದ್ದ ಕೆಲ ಗೂಂಡಾಗಳನ್ನು ಕರೆಯಿಸಿ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಲ್ಲಿನ ಕೆಲ ಪ್ರತ್ಯಕ್ಷದರ್ಶಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕಣ್ಮುಚ್ಚಿ ಕುಳಿತ ಕೆಆರ್​ಡಿಸಿಎಲ್ ಅಧಿಕಾರಿಗಳು
    2019ರ ಫೆಬ್ರವರಿ 23ರಿಂದ ಇಲ್ಲಿ ಟೋಲ್ ಸಂಗ್ರಹಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು(ಕೆಆರ್​ಡಿಸಿಎಲ್)ಮೈಸೂರಿನ ಮಿತ್ರಾ ಇನ್ಪ್ರಾ ಸೆಲ್ಯುಶನ್ಸ್ ಸಂಸ್ಥೆಗೆ ಟೋಲ್ ಸಂಗ್ರಹಣೆ ಗುತ್ತಿಗೆ ನೀಡಿತ್ತು. ಇವರು 8 ತಿಂಗಳುಗಳ ಕಾಲ ಟೋಲ್ ಸಂಗ್ರಹಿಸಿದ್ದರು. ನಂತರ ಸರ್ಕಾರಕ್ಕೆ ತುಂಬಬೇಕಾದ ಹಣವನ್ನು ಸಕಾಲದಲ್ಲಿ ತುಂಬದ ಪರಿಣಾಮ ಕಳೆದ ನವೆಂಬರ್​ನಲ್ಲಿ ಅವರನ್ನು ಟೋಲ್ ಸಂಗ್ರಹದಿಂದ ವಿಮುಕ್ತಿಗೊಳಿಸಲಾಗಿತ್ತು. ಇವರು ಇಲ್ಲಿಂದ ಬಿಟ್ಟು ಹೋಗಲು ಕೆಆರ್​ಡಿಸಿಎಲ್​ನಲ್ಲಿದ್ದ ಕೆಲ ಭ್ರಷ್ಟ ಅಧಿಕಾರಿಗಳ ಕಾಟವೂ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದಿನವರು ಅಧಿಕಾರಿಗಳಿಗೆ ‘ಮಂತ್ಲಿ’ ಕೊಡುತ್ತಿರಲಿಲ್ಲವಂತೆ. ಇಂತಿಷ್ಟು ‘ಮಂತ್ಲಿ’ ಕೊಟ್ಟರೇ ‘ನೀ ಬೇಕಾದ್ದು ಮಾಡು’ ಎಂದು ಪದೇಪದೆ ಕಾನೂನು ನೆಪದಲ್ಲಿ ಕಾಟ ಕೊಟ್ಟು ಅವರ ಟೆಂಡರ್ ರದ್ದುಗೊಳಿಸಿದ್ದಾರಂತೆ. ತದ ನಂತರ ಮರು ಟೆಂಡರ್ ಕರೆಯುವವರೆಗೆಂದು ತಾತ್ಕಾಲಿಕವಾಗಿ ಟೋಲ್ ಸಂಗ್ರಹಕ್ಕೆ ದಾವಣಗೆರೆ ಮೂಲದ ತಿಪ್ಪೇಸ್ವಾಮಿ ಎಂಬುವರಿಗೆ ಕೆಆರ್​ಡಿಸಿಎಲ್ ದಿನಗೂಲಿ ಲೆಕ್ಕದಲ್ಲಿ ಮ್ಯಾನೇಜರ್ ಎಂದು ನೇಮಿಸಿದೆ. ಆದರೆ, ತಿಪ್ಪೇಸ್ವಾಮಿ ತನ್ನ ಕೂಲಿಯಾಳುಗಳನ್ನಿಟ್ಟು ಗೂಂಡಾವರ್ತನೆ ತೋರುತ್ತಿದ್ದಾನೆ ಎಂದು ಆರೋಪ ಕೇಳಿಬಂದಿದೆ.

    ಪೊಲೀಸರಿಗೂ ಕ್ಯಾರೇ ಎಂದಿಲ್ಲ: ಟೋಲ್​ನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸುವುದು ಕಡ್ಡಾಯ. ಆದರೆ, ಇಲ್ಲಿ ಸಿಸಿ ಕ್ಯಾಮರಾಗಳೇ ಇಲ್ಲ. ಈ ಕುರಿತು ವಾರದ ಹಿಂದೆಯೇ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಸಿಸಿ ಕ್ಯಾಮರಾ ಅಳಡಿಸಿಕೊಳ್ಳಿ ಎಂಬ ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ. ಆದರೆ, ಯಾರ ಸೂಚನೆಗೂ ಅಲ್ಲಿನ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ.

    ಹಗಲು ದರೋಡೆ ಪ್ರಶ್ನಿಸಿರೀ ಹುಷಾರು…: ಟೋಲ್ ಸಂಗ್ರಹವನ್ನು ಮಾತ್ರ ಕಟ್ಟುನಿಟ್ಟಾಗಿ ಮಾಡುವ ಇವರು ಯಾರೆಂದು ಈ ಭಾಗದವರಿಗೆ ಗೊತ್ತಿಲ್ಲ. ಇಲ್ಲಿನ ಸಿಬ್ಬಂದಿಯನ್ನು ಏನಾದರೂ ಪ್ರಶ್ನಿಸಿದರೆ ಗೂಂಡಾಗಿರಿ ಮಾಡುತ್ತಿದ್ದಾರೆ. ಪ್ರಬಲವಾಗಿ ಪ್ರಶ್ನಿಸಿದ ಅಕ್ಕಪಕ್ಕದ ಗ್ರಾಮದವರ ವಾಹನಗಳನ್ನು ಇವರು ಉಚಿತವಾಗಿ ಬಿಟ್ಟು ಕಳಿಸುತ್ತಾರೆ. ದೂರದೂರಿನ ವಾಹನಗಳ ಚಾಲಕರಿಂದ ಮಾತ್ರ ಸುಲಿಗೆ ಮಾಡ್ತಾರೆ.

    ತಿಪ್ಪೇಸ್ವಾಮಿ ಗುತ್ತಿಗೆ ಆಧಾರದ ಮ್ಯಾನೇಜರ್ಆಲದಕಟ್ಟಿ ಬಳಿ ಟೋಲ್​ನಲ್ಲಿ ವಾಹನಗಳಿಂದ ಶುಲ್ಕ ಸಂಗ್ರಹಣೆಗೆ ಹಿಂದೆ ಟೆಂಡರ್ ಪಡೆದಿದ್ದವರು ಟೆಂಡರ್ ಪ್ರಕಾರ ಸರ್ಕಾರಕ್ಕೆ 56 ಲಕ್ಷ ಕಟ್ಟಿರಲಿಲ್ಲ. ಹೀಗಾಗಿ ಅವರಿಗೆ 3 ನೋಟಿಸ್ ಕೊಟ್ಟು ಅವರ ಟೆಂಡರ್ ರದ್ದುಗೊಳಿಸಿದ್ದೇವೆ. ನಂತರ ಮರು ಟೆಂಡರ್ ಕರೆಯುವವರಿಗೆ ಟೋಲ್ ಸಂಗ್ರಹ ನಿಲ್ಲಬಾರದು ಎಂದು ದಾವಣಗೆರೆ ಮೂಲದ ತಿಪ್ಪೇಸ್ವಾಮಿಯವರನ್ನು ಗುತ್ತಿಗೆ ಆಧಾರದಲ್ಲಿ ಮ್ಯಾನೇಜರ್ ಎಂದು ನೇಮಿಸಿಕೊಂಡಿದ್ದೇವೆ. ಅವರು ಪ್ರತಿದಿನ ಅಲ್ಲಿನ ಸಂಗ್ರಹವಾದ ಮೊತ್ತವನ್ನು ಇಲಾಖೆಗೆ ಜಮೆ ಮಾಡುತ್ತಿದ್ದಾರೆ. ಈಗ ಮರು ಟೆಂಡರ್ ಓಪನ್ ಆಗಿದ್ದು, ಇನ್ನೊಂದು ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ. ಅಲ್ಲಿಯವರೆಗೆ ವಾಹನ ಚಾಲಕರಿಗೆ ತೊಂದರೆಯಾದರೆ ಕ್ಷಮೆಯಿರಲಿ. ಗೂಂಡಾ ವರ್ತನೆ ತೋರಿದರೆ ಗಂಭೀರ ಕ್ರಮವನ್ನು ಕೈಗೊಳ್ಳುತ್ತೇವೆ. ನಾನು ಈಗ ವರ್ಗಾವಣೆಯಾಗಿದ್ದು, ಇನ್ನೊಂದು ವಾರದಲ್ಲಿ ಹೊಸಬರು ಅಲ್ಲಿಗೆ ಬರಲಿದ್ದು, ಎಲ್ಲವೂ ಸರಿಯಾಗಲಿದೆ.
    | ರವೀಂದ್ರನಾಥ, ಇಇ, ಕೆಆರ್​ಡಿಸಿಎಲ್

    ಆಲದಕಟ್ಟಿ ಬಳಿಯ ಟೋಲ್​ನಲ್ಲಿ ಚಾಲಕರ ಮೇಲೆ ಹಲ್ಲೆಯಾಗಿರುವ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಅಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
    | ಸಂತೋಷ ಪವಾರ, ಸಿಪಿಐ ಹಾವೇರಿ ಗ್ರಾಮೀಣ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts