More

    ಟಿವಿ ಪಾಠ ನೋಡಲು ವಿದ್ಯುತ್ ಅಡಚಣೆ

    ಗಿರೀಶ ಪಾಟೀಲ ಜೊಯಿಡಾ

    ಇತ್ತ ಶಾಲೆಯೂ ಇಲ್ಲದೆ, ಅತ್ತ ಆನ್​ಲೈನ್ (ಟಿವಿ ಮೂಲಕ) ತರಗತಿಯೂ ಇಲ್ಲದೆ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಉಳ್ಳವರು ಹೇಗೊ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯ ಮಾಡುತ್ತಿದ್ದಾರೆ. ಬಹುತೇಕ ಬಡ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದೆ ಚಿಂತಿಸುವಂತಾಗಿದೆ.

    8 ರಿಂದ 10ನೇ ತರಗತಿ ಮಕ್ಕಳಿಗೆ ಡಿ.ಡಿ ಚಂದನ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ನಿತ್ಯ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ‘ಇ ತರಗತಿ’ ಮೂಲಕ ಪಾಠಗಳು ನಡೆಯುತ್ತಿವೆ. ಆದರೆ, ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಇಲ್ಲದ್ದರಿಂದ ತಾಲೂಕಿನ ಬಹಳಷ್ಟು ಮಕ್ಕಳಿಗೆ ‘ಇ ತರಗತಿ’ ಮರೀಚಿಕೆಯಾದಂತಾಗಿದೆ.

    ಈ ಸೌಲಭ್ಯ ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಲಭಿಸುತ್ತಿದೆ. ಇ ತರಗತಿ ನಡೆಯುವ ವೇಳೆಗೆ ವಿದ್ಯುತ್ ವ್ಯತ್ಯಯದಿಂದಾಗಿ ಟಿವಿ ನೋಡುವ ಭಾಗ್ಯವು ಶೇ. 80ಕ್ಕೂ ಹೆಚ್ಚಿನ ಪ್ರದೇಶದ ಹಳ್ಳಿಗಾಡಿನ ಮಕ್ಕಳಿಗೆ ಲಭಿಸುತ್ತಿಲ್ಲ. ಬೇರೆಯವರ ಮನೆಯಲ್ಲಿ ಮಕ್ಕಳಿಗೆ ಉಳಿಸಲು ಕೇಳೋಣ ಎಂದರೆ ಕರೊನಾ ಕಾರಣದಿಂದ ಸಾಧ್ಯವಾಗುತ್ತಿಲ್ಲ ಎಂಬುದು ಪಾಲಕರ ನೋವಿನ ನುಡಿ.

    ತಾಲೂಕಿನಲ್ಲಿ ಮೊಬೈಲ್​ಫೋನ್ ಸೇವೆ ಇಲ್ಲದ ಬಹುತೇಕ ಕಡೆ ವಾಟ್ಸ್ಯಾಪ್ ಕೂಡ ಲಭ್ಯವಿಲ್ಲ. ಪ್ರಮುಖವಾಗಿ ಜೊಯಿಡಾ ಕೇಂದ್ರ, ಕುಂಬಾರವಾಡಾ, ಉಳವಿ, ಜಗಲಬೇಟ, ರಾಮನಗರದಲ್ಲಿ ಮಾತ್ರ 3ಜಿ ಇಂಟರ್​ನೆಟ್ ಸೇವೆ ಲಭ್ಯ ಇದೆ. ಜೊಯಿಡಾ ಗುಡ್ಡಗಾಡು ಅರಣ್ಯ ಪ್ರದೇಶದಿಂದ ಕೂಡಿರುವ ಕಾರಣ ಮೊಬೈಲ್​ಫೋನ್ ಟವರ್​ನಿಂದ ಒಂದೆರೆಡು ಕಿ.ಮೀ. ಮಾತ್ರ ಈ ಸಿಗ್ನಲ್ ಇದೆ. ಕೆಲವೆಡೆ ತುರ್ತು ಮೊಬೈಲ್​ಫೋನ್ ಕರೆಗಾಗಿ ಎತ್ತರದ ಬೆಟ್ಟ ಹತ್ತಿ ಕರೆ ಮಾಡಬೇಕಾದ ಅನಿವಾರ್ಯತೆಯಿದೆ. ಹಲವಾರು ಪಾಲಕರು ಇಂಟರ್​ನೆಟ್ ಸೌಲಭ್ಯ ಇರುವ ಮೊಬೈಲ್ ಫೋನ್ ಖರೀದಿಸುವಂಥ ಆರ್ಥಿಕ ಸ್ಥಿತಿ ಇರುವುದಿಲ್ಲ. ಹೀಗಾಗಿ, ಹಿಂದುಳಿದ ಜೊಯಿಡಾ ತಾಲೂಕಿನ ಹಲವಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

    ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು: ಬಾಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮಳೆಗಾಲ ಪ್ರಾರಂಭದ ದಿನದಿಂದಲೂ ವಿದ್ಯುತ್ ಪೂರೈಕೆ ಇಲ್ಲದೆ ತುಂಬಾ ತೊಂದರೆಗೆ ಸಿಲುಕಿದ್ದೇವೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ದುರಸ್ತಿ ಮಾಡಲು ಬರಬೇಕು ಎಂದರೆ ರಸ್ತೆ ಸಂಪರ್ಕ ಇಲ್ಲ ಎನ್ನುತ್ತಾರೆ. ಇದುವರೆಗೂ ನಮಗೆ ವಿದ್ಯುತ್ ಸಂಪರ್ಕ ನೀಡುವ ಕೆಲಸ ಆಗಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಂತೋಷ ವೇಳಿಪ, ದೇವೇಂದ್ರ ಮಿರಾಶಿ, ಸಂದೀಪ ಗಾವಡಾ, ಮಂಜು ಕಾಲೇಕರ ಇತರರು ಒತ್ತಾಯಿಸಿದ್ದಾರೆ.

    ವಿದ್ಯುತ್ ಪೂರೈಕೆ ಇಲ್ಲದೆ ಚಿಮಣಿ ದೀಪದ ಬೆಳಕಿನಲ್ಲಿ ನಮ್ಮ ಜನ ಜೀವಿಸುವಂತಾಗಿದೆ. ವಿದ್ಯುತ್ ಪೂರೈಕೆ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚಾಗಿದ್ದು ಮಾತ್ರ ಕಾಣುತ್ತದೆ. ಆದರೆ, ನಮಗೆ ಬೆಳಕಿನ ವ್ಯವಸ್ಥೆ ಮಾತ್ರ ಇಲ್ಲ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ, ಜಿಲ್ಲಾದಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ.
    | ದೇವೆಂದ್ರ ಮೀರಾಶಿ ಬೋಂಡೊಲಿ ನಿವಾಸಿ

    ಚಂದನ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪಾಠ ಬೋಧನೆಯನ್ನು ನೋಡಿ ಬರೆದುಕೊಳ್ಳುವಂತೆ ಶಿಕ್ಷಕರು ಮಕ್ಕಳಿಗೆ ತಿಳಿಸುತ್ತಿದ್ದಾರೆ. ನಮ್ಮಲ್ಲಿ ಟಿವಿ ನೋಡಲು ವಿದ್ಯುತ್ ಪೂರೈಕೆ ಇರುವುದೇ ಅಪರೂಪ. ಹೀಗೆಯೇ ಆದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನು? ಶಿಕ್ಷಣ ಇಲಾಖೆ ಈ ಬಗ್ಗೆ ಉತ್ತರಿಸಬೇಕು.
    | ಲಕ್ಷ್ಮೀ ವಿದ್ಯಾರ್ಥಿಯ ಪಾಲಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts