More

    ಟಿಎಸ್​ಎಸ್​ನಿಂದ ನೇರ ಅಡಕೆ ಖರೀದಿ ಇಂದಿನಿಂದ

    ಶಿರಸಿ: ಇಲ್ಲಿನ ಅಡಕೆ ವಹಿವಾಟು ಸಂಸ್ಥೆಯಾದ ಟಿಎಸ್​ಎಸ್ (ತೋಟಗಾರ್ಸ್ ಸೇಲ್ಸ್ ಸೋಸೈಟಿ) ಸದಸ್ಯರ ಹಾಗೂ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಏ.16ರಿಂದ ಅಡಕೆಯನ್ನು ನೇರವಾಗಿ ಖರೀದಿಸುವ ಯೋಜನೆಗೆ ಚಾಲನೆ ನೀಡಲಿದೆ.

    ಈ ಕುರಿತು ಹೇಳಿಕೆ ನೀಡಿರುವ ಸಂಘವು, ಸದ್ಯದ ಲಾಕ್​ಡೌನ್ ಪರಿಸ್ಥಿತಿಯಲ್ಲಿ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಿರುವ ಕಾರಣ ಸಾಕಷ್ಟು ರೈತರು ಅಡಕೆಯನ್ನು ವಿಕ್ರಿ ಮಾಡಲಾಗದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಆಗಿದೆ.

    ನೇರ ಖರೀದಿಗೆ ಈ ಸಮಯದಲ್ಲಿ ಪ್ರತಿದಿನ 30 ರೈತರಿಗೆ ಮಾತ್ರ ಅವಕಾಶವನ್ನು ನೀಡಲಾಗುತ್ತಿದೆ. ಮುಂಚಿತವಾಗಿ (08384 – 236107) ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿ ಅನುಮತಿಯನ್ನು ಪಡೆದುಕೊಂಡು ಅಡಕೆಯನ್ನು ಸಂಘಕ್ಕೆ ತರಬಹುದಾಗಿದೆ. ದೂರವಾಣಿಯ ಮೂಲಕ ಒಪ್ಪಿಗೆಯನ್ನು ಪಡೆದು ಹೆಸರನ್ನು ನೋಂದಾಯಿಸಿದ ಸದಸ್ಯರ ಅಡಕೆಯನ್ನು ಮಾತ್ರ ಖರೀದಿಸಲಾಗುವುದು. ನೋಂದಾಯಿತ ಸದಸ್ಯರಿಗೆ ಅಡಕೆಯನ್ನು ತೆಗೆದುಕೊಂಡು ಬರಲು ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು.

    ಸಂಘಕ್ಕೆ ಅಡಕೆಯನ್ನು ತರುವಾಗ ಸ್ಥಳೀಯ ಅನುಮತಿ ಪತ್ರ ಅಥವಾ ಹಿಡುವಳಿ ಪ್ರತಿಯನ್ನು ತಮ್ಮ ವಾಹನದಲ್ಲಿ ತಪ್ಪದೆ ತರಬೇಕು. ವಿಕ್ರಿ ಸಮಯದಲ್ಲಿ ಮಾಸ್ಕ್​ಅನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಸೂಚಿಸಿದ ರೈತರು ಮಾತ್ರ ವಿಕ್ರಿಯ ಸ್ಥಳಕ್ಕೆ ಬರಬೇಕು. ಸಂಘದಲ್ಲಿ ಶಿಲ್ಕು ಹೊಂದಿರುವ ಸದಸ್ಯರು ಹಾಗೂ ಈಗಾಗಲೇ ವಿಕ್ರಿಗಾಗಿ ಅಡಕೆಯನ್ನು ತಂದಿಟ್ಟಿರುವ ಸದಸ್ಯರು ಯಾವ ಸಮಯದಲ್ಲಿ ಬೇಕಾದರೂ ನೇರ ಖರಿದಿಗೆ ತಮ್ಮ ಹೆಸರನ್ನು ನೋಂದಾಯಿಸುವ ಅವಕಾಶ ಹೊಂದಿದ್ದಾರೆ. ಮೊದಲನೇ ದರ್ಜೆಯ ಅಡಕೆಯನ್ನು ಮಾತ್ರ ಖರೀದಿಸಲಾಗುವುದು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬಿಳಿಗೋಟು ಮತ್ತು ಚಾಲಿ ಕೆಂಪು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

    ಹಳ್ಳಿಗಳ ಮಟ್ಟದಲ್ಲಿ ನೇರ ಖರೀದಿ ವ್ಯವಸ್ಥೆ: ಟಿಎಸ್​ಎಸ್ ಸದಸ್ಯರಿರುವ ಹಳ್ಳಿಗಳಲ್ಲಿಯೂ ನೇರ ಖರೀದಿಯ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಕನಿಷ್ಠ 10 ಜನ ರೈತರು ಒಪ್ಪಿಗೆ ಸೂಚಿಸುವ ಸ್ಥಳದಲ್ಲಿ ಬಂದು ಅಡಕೆಯನ್ನು ನೇರವಾಗಿ ಖರೀದಿಸಲಾಗುವುದು. ಹಳ್ಳಿಯಲ್ಲಿ ಪ್ರತಿಯೊಂದು ಸದಸ್ಯರಿಂದ ಗರಿಷ್ಠ 4 ಕ್ವಿಂಟಾಲ್ ಮೊದಲನೆ ದರ್ಜೆಯ ಅಡಕೆಯನ್ನು ಮಾತ್ರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯವಾಗಿ ಹಳ್ಳಿಯ ಮುಂದಾಳುಗಳು ಕಚೇರಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ವ್ಯವಸ್ಥೆಯು ಟಿಎಸ್​ಎಸ್ ಶಿರಸಿಯ ಜತೆಗೆ -ಸಿದ್ದಾಪುರ ಹಾಗೂ ಯಲ್ಲಾಪುರ ಶಾಖೆಗಳಲ್ಲಿಯೂ ಲಭ್ಯವಿದೆ. ಶಾಖೆಗಳಲ್ಲಿ ವಿಕ್ರಿ ಮಾಡಲು ಶಿರಸಿ (08384-236107), ಸಿದ್ದಾಪುರ (08389- 230106), ಯಲ್ಲಾಪುರ (8762007603) ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts